Advertisement

ರಂಜಿಸಿದ ಶ್ರೀಪ್ರದಾ ರಂಗಪ್ರವೇಶ

09:17 PM Jun 22, 2018 | |

ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಇತ್ತೀಚೆಗೆ ನಡೆದ ವಿ| ಶ್ರೀಪ್ರದಾ ರಾವ್‌ ಅವರ ರಂಗಪ್ರವೇಶ ಗಮನ ಸೆಳೆಯಿತು. 12 ವರ್ಷಗಳಿಂದ ರಾಧಕೃಷ್ಣ ನೃತ್ಯ ನಿಕೇತನದಲ್ಲಿ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಕಲಿಯುತ್ತಿರುವ ಶ್ರೀಪ್ರದಾ ರಾವ್‌, ಕಥಕ್‌ ನೃತ್ಯವನ್ನು ವಿ| ಪೊನ್ನಮ್ಮ ದೇವಯ್ಯ ಸಿಂಗಾಪುರ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಕನ್ನರ್ಪಾಡಿಯ ಸತೀಶ್‌ ರಾವ್‌ ಹಾಗೂ ಮನೋರಮಾ ದಂಪತಿ ಪುತ್ರಿ ಶ್ರೀಪ್ರದಾ ಎಂಜಿನಿಯರಿಂಗ್‌ ಪದವಿ ಮುಗಿಸಿ ಪ್ರಸ್ತುತ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದಾರೆ.

Advertisement

 ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಮುರಳೀಧರ ಸಾಮಗ ಅವರ ಶಿಷ್ಯೆಯಾಗಿರುವ ಶ್ರೀಪ್ರದಾ ಮೊದಲನೆಯದಾಗಿ ನಾಟ್ಯಶಾಸ್ತ್ರದಲ್ಲಿರುವ ಪೂರ್ವ ರಂಗ ವಿಧಿ “ಮೇಳಪ್ರಾಪ್ತಿ’ ನೃತ್ಯವನ್ನು ಮೈಸೂರಿನ ಡಾ| ವಸುಂಧರಾ ದೊರೆ ಸ್ವಾಮಿಯವರು ಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸಿದರು. ಇದರಲ್ಲಿ ಮೃದಂಗದ ಪಾಠಾಕ್ಷರಗಳು ಮುಖ್ಯವಾಗಿದ್ದು, ಕೊರಪು ತೀರ್ಮಾನಗಳಿಗೆ ನೃತ್ಯ ಸಂಯೋಜನೆಗೊಳಿಸಲಾಗಿತ್ತು. ಗಣಪತಿ ಸ್ತುತಿ ಹಾಗೂ ನಾಟ್ಯಾಧಿದೇವತೆ ನಟರಾಜನ ಸ್ತುತಿಯೊಂದಿಗೆ ಕ್ಲಿಷ್ಟಕರವಾದ ಅಡವುಗಳಿಂದ ಕೂಡಿತ್ತು. ಅನಂತರ “ದೇವಿವರ್ಣ’ ರಂಜನಿ ರಾಗ ಆದಿತಾಳದಲ್ಲಿ ಮಧುರೈ ಕೃಷ್ಣನ್‌ ರಚಿಸಿದ “ಸಿಂಹವಾಹಿನಿ ಶ್ರೀರಾಜೇಶ್ವರಿ’ ನೃತ್ಯ ಹಾಗೂ ನೃತ್ಯಾಭಿನಯಗಳ ಪ್ರಸ್ತುತಿಯಲ್ಲಿ ದೇವಿಯ ವರ್ಣನೆ ಆಕರ್ಷಕವಾಗಿತ್ತು. ವಿ| ವೀಣಾ ಸಾಮಗ ಸಂಯೋಜಿಸಿದ ನೃತ್ಯ “ಮಹಾದೇವಾ ಶಿವ ಶಂಭೋ’ ರೇವತಿ ರಾಗ ಆದಿತಾಳದಲ್ಲಿ ಕರಣಗಳು ಭೌಮಚಾರಿಗಳೊಂದಿಗೆ ವ್ಯಕ್ತವಾದವು. ಮಾರ್ಕೆಂಡೇಯನ ಕತೆ, ಶಿವನ ಕರುಣ ಕಥೆ, ಸಾಮಗಾನ ಪ್ರಿಯನಿಗೆ ರಾವಣ ತನ್ನ ಕರುಳಿನಿಂದ ವೀಣೆ ನುಡಿಸಿ ಓಲೈಸಿದ್ದು, ಗಂಗಾ ಅವತರಣದ ಸಂಚಾರಿ ಭಾವದ ಮೂಲಕ ಸಂಯೋಜಿಸಲಾಗಿದ್ದು ಆಕರ್ಷಕವಾಗಿತ್ತು. ಶ್ರೀಪ್ರದಾ ಅದನ್ನು ತಮ್ಮ ನೃತ್ಯ ಕೌಶಲ್ಯದೊಂದಿಗೆ ಲೀಲಾಜಾಲವಾಗಿ ಅಭಿನಯಿಸಿದರು. 

ಅನಂತರ ಪೂರ್ವ ಕಲ್ಯಾಣಿ ರಾಗ, ಆದಿತಾಳದಲ್ಲಿ ಪುರಂದರ ದಾಸರ ರಚನೆ ದೇವರ ನಾಮ “ಮನೆಯೊಳಗಾಡೋ ಗೋವಿಂದ’ದಲ್ಲಿ ಕೃಷ್ಣನ ತುಂಟತನ ಯಶೋದಾ ಕೃಷ್ಣರ ಪರಸ್ಪರ ವಾತ್ಸಲ್ಯ ಹಾಗೂ ಕೃಷ್ಣನ ಚೋರತನವನ್ನು ತನ್ನ ಚುರುಕು ಅಭಿನಯದಿಂದ ಮನಸು ಗೆದ್ದರು. ನಂತರ ಕೂಚುಪುಡಿ ಶೈಲಿಯ ನೃತ್ಯದಲ್ಲಿ ಮೋಹಿನಿ ಅವತಾರವನ್ನು ಪ್ರಸ್ತುತ ಪಡಿಸಲಾಯಿತು. 

ರಾಗಮಾಲಿಕೆ ತಾಳಮಾಲಿಕೆಯಲ್ಲಿ ದೇವತೆಗಳು, ದಾನವರು, ಸಮುದ್ರ ಮಥನವನ್ನು ಮಾಡುವ ಸಂದರ್ಭ ಬರುತ್ತದೆ. ಆಗ ಮಹಾವಿಷ್ಣುವು ಮೋಹಿನಿ ರೂಪವನ್ನು ತಾಳಿ ಅಮೃತವನ್ನು ದೇವತೆಗಳಿಗೆ ಹಾಗೂ ದಾನವರಿಗೆ ಹಂಚುವುದು ಪ್ರಧಾನ ಅಂಶ. ಸಮುದ್ರ ಮಥನದ ಸಂದರ್ಭದಲ್ಲಿ ಸಮುದ್ರ ಮಥನ, ಮಹಾವಿಷ್ಣುವು ಆಮೆಯ ರೂಪ ತಾಳಿ ಮಂದರ ಪರ್ವತವನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡಿರುವುದು, ಕಲ್ಪವೃಕ್ಷ, ಲಕ್ಷ್ಮೀ, ಮೋಹಿನಿ ಮೊದಲಾದವುಗಳನ್ನು ನೃತ್ಯದ ಮೂಲಕ ಅಭಿನಯಿಸುವುದು ಪರಣತರಿಗೆ ಮಾತ್ರ ಸಾಧ್ಯ. ಇದರಲ್ಲಿ ಶ್ರೀಪ್ರದಾ ಸೈ ಎನಿಸಿದರು. ರಚನೆ ಸಾಹಿತ್ಯ ತೆಲುಗು ಭಾಷೆಯಲ್ಲಿದ್ದರೂ ಅದರ ವಾಚಿಕಾಭಿನಯ ಮನ ಗೆದ್ದಿತು. ನೃತ್ಯದಲ್ಲಿ ತನ್ನ ಕಾಲಿನ ಬೆರಳಿನಲ್ಲಿ “ಮಯೂರ’ ಚಿತ್ರವನ್ನು ಚಿತ್ರಿಸಿ ರಂಗವಲ್ಲಿ ನೃತ್ಯ ಪ್ರಸ್ತುತ ಪಡಿಸಿದ ಶ್ರೀಪ್ರದಾ ಕೊನೆಯಲ್ಲಿ ಭದ್ರಾಚಲ ರಾಮದಾಸರ ಕೃತಿ “ಪಲುಕೆ ಬಂಗಾರ ಮಾಯಾನ’ವನ್ನು ಆನಂದ ಭೈರವಿ ರಾಗ ಆದಿತಾಳದ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಮಂಗಲ ಹಾಡಿದರು. 

ಸುಸ್ಮಿತಾ ಭಟ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next