ಕೋಲ್ಕತ್ತಾ: ಬಂಗಾಳಿ ಸಿನಿರಂಗದ ಖ್ಯಾತ ನಟಿ ಶ್ರೀಲಾ ಮಜುಂದಾರ್ (65) ಶನಿವಾರ(ಜ.27 ರಂದು) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಜುಂದಾರ್ ಶನಿವಾರ ಕೋಲ್ಕಾತದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ ಮೆಚ್ಚಿನ ನಟಿಯರಲ್ಲಿ ಶ್ರೀಲಾ ಮಜುಂದಾರ್ ಒಬ್ಬರಾಗಿದ್ದರು. ಮೃಣಾಲ್ ಸೇನ್ ಅವರ ‘ಏಕ್ ದಿನ್ ಪ್ರತಿದಿನ್ʼ(1980),‘ಖಾರಿಜ್ ʼ(1982) ಮತ್ತು ‘ಅಕಲೇರ್ ಸಂಧಾನೆʼ(1981) ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
ಇದಲ್ಲದೆ ಅವರು, ಶ್ಯಾಮ್ ಬೆನಗಲ್ ಅವರ ‘ಮಂಡಿ’ (ಮಾರ್ಕೆಟ್ ಪ್ಲೇಸ್, 1983), ಪ್ರಕಾಶ್ ಝಾ ಅವರ ‘ದಾಮುಲ್’(Bonded Until Death, 1985) ಮತ್ತು ಉತ್ಪಲೇಂದು ಚಕ್ರವರ್ತಿ ಅವರ ‘ಚೋಖ್ʼ(ಐ, 1983) ಮುಂತಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಕೌಶಿಕ್ ಗಂಗೂಲಿ ಅವರ ಕೊನೆಯ ಚಿತ್ರ ‘ಪಾಲನ್’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಏಕ್ ದಿನ ಪ್ರತಿದಿನ್ ಸಿನಿಮಾದ ಸೀಕ್ವೆಲ್ ಆಗಿತ್ತು. ಅವರು ಒಟ್ಟು 43 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಮಜುಂದಾರ್ ಅವರು ರಿತುಪರ್ಣೋ ಘೋಷ್ ಅವರ ‘ಚೋಖರ್ ಬಾಲಿ’ (ಎ ಪ್ಯಾಶನ್ ಪ್ಲೇ, 2003) ಚಿತ್ರದಲ್ಲಿ ಐಶ್ವರ್ಯಾ ರೈಗೆ ಧ್ವನಿ ಡಬ್ಬಿಂಗ್‌ಗೆ ಹೆಸರುವಾಸಿಯಾಗಿದ್ದರು.
ಮೃತರು ಪತಿ ಮತ್ತು ಮಗನನ್ನು ಅಗಲಿದ್ದಾರೆ.
ನಟಿಯ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.