ಗಂಗಾವತಿ: ಧಾರ್ಮಿಕ ಆಚರಣೆಯ ಮೂಲಕ ಮನುಷ್ಯ ಉತ್ತಮ ಮಾರ್ಗದಲ್ಲಿರಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ರವಿವಾರ ತಾಲೂಕಿನ ಆಗೋಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಬೀರಲಿಂಗೇಶ್ವರ ದೇಗುಲ ಲೋಕಾರ್ಪಣೆಯ ಹೋಮದ ಪೂರ್ಣಾವುತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಾವು ಸಂಸದರಾಗಿದ್ದ ಸಂದರ್ಭದಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಪ್ರಥಮ ಭಾರಿಗೆ ಆಗೋಲಿ ಗ್ರಾಮದ ಶರಣಬಸವೇಶ್ವರ ದೇಗುಲದ ಉಗ್ರಾಣ ಕೋಣೆ ಮತ್ತು ಶ್ರೀಬಿರಲಿಂಗೇಶ್ವರ ದೇಗುಲದ ಸಮುದಾಯ ಭವನಕ್ಕೆ ಅನುದಾನ ನೀಡಿದ್ದು ಗ್ರಾಮಸ್ಥರು ಇತರೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೆಲ್ಲ ಹಣ ಜೋಡಣೆ ಮಾಡಿ ಶ್ರೀ ಬಿರಲಿಂಗೇಶ್ವರ ದೇಗುಲ ನಿರ್ಮಿಸಿದ್ದು ಗ್ರಾಮದ ಒಗ್ಗಟ್ಟನ್ನು ತೋರಿಸುತ್ತದೆ. ಗ್ರಾಮದ ಅಭ್ಯುದಯಕ್ಕೆ ಸರ್ವ ಜನಾಂಗದವರು ಒಂದಾಗಿ ಕಾರ್ಯ ಮಾಡಬೇಕಿದೆ. ಧಾರ್ಮಿಕ ಆಚರಣೆಯ ಜತೆಗೆ ತಪ್ಪದೇ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮೀಣಾಭಿವೃದ್ಧಿ ಹಾಗು ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ ರೂಪಿಸಿದ್ದು ಜನರು ಅವುಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಜಿ.ವೀರಪ್ಪ, ಎಚ್.ಆರ್.ಶ್ರೀನಾಥ, ಜಿ.ಪಂ.ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿ.ಪಂ.ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಸಣ್ಣಕ್ಕಿ, ಕನಕದಾಸ ಹಾಲುಮತ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ,ಮುಖಂಡರಾದ ಡಿ.ಕೆ.ಆಗೋಲಿ, ಡ್ಯಾಗಿ ರುದ್ರೇಶ,ರಾಜುನಾಯಕ, ಆಗೋಲಿ ಹಾಗೂ ಸುತ್ತಲಿನ ಗ್ರಾಮಸ್ಥರಿದ್ದರು.