Advertisement

SR Patil: ಬಾಡಗಂಡಿಗೆ ಬಂತು ಆರೋಗ್ಯಧಾಮ

03:56 PM Nov 01, 2023 | Team Udayavani |

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಕಲೆ, ಸಾಹಿತ್ಯ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ತವರೂರು. ಮತ್ತೂಂದು ಮೈಲುಗಲ್ಲಿಗೆ ಈಗ ತಾಲೂಕು ಸಜ್ಜಾಗುತ್ತಿದೆ.

Advertisement

ತಾಲೂಕಿನ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಲು ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರು ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನ ಮೂಲಕ ಆರೋಗ್ಯ ಧಾಮವನ್ನು ಸ್ಥಾಪಿಸಿದ್ದಾರೆ.

ಆಲದ ಮರ ನಮ್ಮ ಎಸ್ಸಾರ್ಪಿ : ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ರತ್ನ, ಸಹಕಾರಿ ರಂಗದ ಭೀಷ್ಮ ಎಂದೇ ಬಿರುದು ಪಡೆದಿರುವ ಎಸ್‌.ಆರ್‌.ಪಾಟೀಲ ಅವರು ಬಾಡಂಗಡಿಯಲ್ಲಿ ಬೀಳಗಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ತಾಲೂಕು ಸೇರಿದಂತೆ ಸುತ್ತಲಿನ ರೈತರು ವಾಣಿಜ್ಯ ಬೆಳೆ ಕಬ್ಬು ಬೆಳೆದು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದ್ದಾರೆ.

ಒಂದು ಉದ್ಯಮ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಆರಂಭವಾದರೆ ಅದರಿಂದ ಅನೇಕ ಪ್ರಯೋಜನಗಳು ಸಾರ್ವಜನಿಕರಿಗೆ ದೊರೆಯಲಿವೆ. ಅದನ್ನರಿತ ಎಸ್‌.ಆರ್‌.ಪಾಟೀಲ, ಶಿಕ್ಷಣ ಪ್ರತಿಷ್ಠಾನ ಮೂಲಕ ಬಾಪೂಜಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಾಪೂಜಿ ಅಂತಾರಾಷ್ಟ್ರೀಯ ಸಿ.ಬಿ.ಎಸ್‌.ಇ ಶಾಲೆ ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲೂ ಯಶಸ್ವಿ ಕಂಡಿದ್ದಾರೆ. ಈ ಎಲ್ಲ ಸಂಸ್ಥೆಗಳಲ್ಲಿ ತಾಲೂಕಿನ ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಅನೇಕ ಕುಟುಂಬಗಳು ನೆನೆದಾಗ ನೆರಳು ಕೊಡುವ ಆಲದ ಮರ ಎಸ್‌.ಆರ್‌.ಪಾಟೀಲರು.

ನಾಲ್ಕು ದಶಕಗಳ ರಾಜಕೀಯ : ಅಂದಾಜು 4 ದಶಕಗಳಿಂದ ರಾಜಕೀಯ ಜೀವನದಲ್ಲಿರುವ ಎಸ್‌.ಆರ್‌.ಪಾಟೀಲ ಜನರ ಬೇಕು-ಬೇಡಗಳನ್ನರಿತು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೀಳಗಿ ತಾಲೂಕಿನ ಜನರ ನಾಡಿಮಿಡಿತ ಅರಿತಿರುವ ಪಾಟೀಲರು ಈ ಭಾಗದ ಜನರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡುವುದರಲ್ಲಿ ವಿಳಂಬ ಮಾಡಿಲ್ಲ. ಇಲ್ಲಿಯ ಜನರು ಹೇರಳವಾಗಿ ಕಬ್ಬು      ಬೆಳೆದಾಗ ಸಕ್ಕರೆ ಕಾರ್ಖಾನೆ ಆರಂಭಿಸಿದರು. ತಾಲೂಕಿನ ಮಕ್ಕಳು ಶಿಕ್ಷಣಕ್ಕಾಗಿ ಬೇರೆ ನಗರಗಳಿಗೆ ತೆರಳುವುದನ್ನು ನೋಡಿ ಶಾಲೆ- ಕಾಲೇಜುಗಳನ್ನು ಆರಂಭಿಸಿದ್ದಾರೆ.

Advertisement

ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕಾಗಿ ಉಪಜೀವನಕ್ಕೆ ನಂಬಿಕೊಂಡಿದ್ದ ಜಮೀನುಗಳನ್ನು ಕಳೆದುಕೊಂಡು ಬದುಕನ್ನೇ ಬಲಿಕೊಟ್ಟ ತಾಲೂಕಿನ ಮುಳುಗಡೆ ಸಂತ್ರಸ್ತರಿಗಾಗಿ ಇನ್ನೂ ಅನೇಕ ವಿಚಾರಗಳನ್ನು ಹೊಂದಿರುವ ಪಾಟೀಲರು ಒಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ. ತಾಲೂಕಿನ ಜನರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ದೂರದ ನಗರಗಳಿಗೆ ತೆರಳುವುದನ್ನು ನೋಡಿ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಿದರೆ ಜನರು ಬೇರೆ ನಗರಗಳಿಗೆ ತೆರಳುವುದನ್ನು ತಪ್ಪಿಸಬಹುದು ಹಾಗೂ ವೈದ್ಯಕೀಯ ಶಿಕ್ಷಣ ತಾಲೂಕಿನಲ್ಲಿ ಆರಂಭಿಸಿದರೆ ಅನೇಕ ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂಬುದನ್ನರಿತು ಬಾಡಗಂಡಿ ಆರೋಗ್ಯಧಾಮ ಸ್ಥಾಪನೆಗೆ ಮುಂದಾಗಿದ್ದಾರೆ.

ಏನಿದು ಆರೋಗ್ಯಧಾಮ: ಬಾಡಗಂಡಿ ಆರೋಗ್ಯ ಧಾಮದಲ್ಲಿ ಎಸ್‌.ಆರ್‌.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್‌ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಬಿಎಸ್ಸಿ ನಸಿಂìಗ್‌ ಮಹಾವಿದ್ಯಾಲಯ ಸ್ಥಾಪಿಸುತ್ತಿದ್ದಾರೆ. ಮೆಡಿಕಲ್‌ ಕಾಲೇಜು ಹಾಗೂ ಈ ಭಾಗದ ಶ್ರೀ ಸಾಮಾನ್ಯರಿಗೆ ವೈದ್ಯಕೀಯ ಚಿಕಿತ್ಸೆ ಬೇಕಾದರೆ ಬಾಗಲಕೋಟೆ, ವಿಜಯಪುರ, ಮೀರಜ್‌, ಸೋಲಾಪುರದಂತಹ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆದರೆ ಈ ಬಾಡಗಂಡಿ ಆರೋಗ್ಯಧಾಮ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ಸಜ್ಜಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಕಡಿಮೆ ವೆಚ್ಚದ ವೈದ್ಯಕಿಯ ಚಿಕಿತ್ಸೆ ದೊರಕಲಿದೆ. ಮೆಡಿಕಲ್‌ ಕಾಲೇಜಿನಿಂದ ಅತ್ಯುತ್ತಮ ವೈದ್ಯರು ಮುಂದಿನ ದಿನಮಾನಗಳಲ್ಲಿ ಹೊರ ಹೊಮ್ಮಲಿದ್ದಾರೆ. ಈ ಎಲ್ಲ ಸೌಲಭ್ಯಗಳು ಬೀಳಗಿಯಂತಹ ತಾಲೂಕಿನಲ್ಲಿ ದೊರೆಯುವುದರಿಂದ ಬಾಡಗಂಡಿ ಗ್ರಾಮದತ್ತ ಇಡೀ ದೇಶವೇ ನೋಡುವಂತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

204 ಜನ ವೈದ್ಯರು; 400 ಜನ ಸಿಬ್ಬಂದಿ:

ಕೆ.ಪಿ.ಎಮ್‌.ಇ.ಎ. ಕಾಯ್ದೆ ಅಡಿಯಲ್ಲಿ ಎಸ್‌.ಆರ್‌. ಪಾಟೀಲ ಆಸ್ಪತ್ರೆ ನೋಂದಣಿ ಆಗಿದ್ದು, 630 ಹಾಸಿಗೆಗಳ ಸೌಲಭ್ಯವುಳ್ಳ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವಾಗಿ ಕರ್ನಾಟಕ ರಾಜ್ಯ ಸರ್ಕಾರ (ವೈದ್ಯಕೀಯ ಶಿಕ್ಷಣ ಇಲಾಖೆ) ಹಾಗೂ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ 150 ಸೀಟುಗಳ ಮಾನ್ಯತೆ ಪಡೆದಿದೆ. ಕಾಲೇಜು ಮತ್ತು ಆಸ್ಪತ್ರೆಗೆ ಸಂಬಂಧಿಸಿದಂತೆ ಅಂಗ ರಚನಾಶಾಸ್ತ್ರ, ಶರೀರಶಾಸ್ತ್ರ, ಜೀವರಾಸಯನಶಾಸ್ತ್ರ, ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಫಾರ್ಮಕಾಲಜಿ, ಫೋರೆನ್ಸಿಕ್‌ ಮೆಡಿಸಿನ್‌ ಮತ್ತು ಟಾಕ್ಸಿಕಾಲಜಿ, ಸಮುದಾಯ ಔಷಧ, ಜನರಲ್‌ ಮೆಡಿಸಿನ್‌, ಪಿಡಿಯಾಟ್ರಿಕ್ಸ್‌, ಮನೋವೈದ್ಯಶಾಸ್ತ್ರ, ಡರ್ಮಟಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಆಥೋìಪೆಡಿಕ್‌, ರೇಡಿಯೋ-ರೋಗನಿರ್ಣಯ, ಓಟೋ-ರೈನೋಲಾರಿಂಗೋಲಜಿ, ನೇತ್ರ ವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಅರವಳಿಕೆ ಶಾಸ್ತ್ರ, ದಂತವೈದ್ಯಶಾಸ್ತ್ರ, ಇಂಟಿಗ್ರೇಟಿವ್‌ ಮೆಡಿಕಲ್‌ ರಿಸರ್ಚ್‌ ಹೀಗೆ ಒಟ್ಟು 21 ವಿಭಾಗಗಳಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಈ ಎಲ್ಲ ವಿಭಾಗಗಳಿಗಾಗಿ 204 ಜನ ವೈದ್ಯರಿದ್ದು, ಇವರೆಲ್ಲರೂ ಬೋಧನೆ ಮಾಡಲಿದ್ದಾರೆ. ಇಲ್ಲಿ ಸ್ಟಾಪ್‌ನರ್ಸ್‌, ವಾರ್ಡ್‌ಬಾಯ್‌, ಸ್ವತ್ಛತಾ ಕರ್ಮಿಗಳು, ಕಾವಲುಗಾರರು, ಲೆಕ್ಕ ವಿಭಾಗ ಸೇರಿ ವಿವಿಧ ವಿಭಾಗಗಳಲ್ಲಿ ಅಂದಾಜು 400ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

ಪುಟ್ಟ ಹಳ್ಳಿಯಲ್ಲಿ ಹೈಟೆಕ್‌ ಸೌಲಭ್ಯಗಳು:

 ಸಿ.ಟಿ ಸ್ಕ್ಯಾನ್

 ಇ.ಸಿ.ಜಿ

ಟಿಎಂಟಿ

 ಸುಸಜ್ಜಿತ  ಶಸ್ತ್ರಚಿಕಿತ್ಸೆ  ಘಟಕ

 ಅತ್ಯಾಧುನಿಕ ಎಕ್ಸರೇ

ಅತ್ಯಾಧುನಿಕ ಸುಸಜ್ಜಿತ ಪ್ರಯೋಗಾಲಯ

 ಔಷಧಾಲಯ

 ಸಾಮಾನ್ಯ ವಾರ್ಡ್‌ಗಳು

 ಸ್ಪೆಷಲ್‌ ವಾರ್ಡ್‌

ಪ್ರಯೋಗಾಲಯ

1,200 ರೋಗಿಗಳ ಸಾಮರ್ಥ್ಯದ ಒಪಿಡಿ

400 ರೋಗಿಗಳ ಸಾಮರ್ಥ್ಯದ ಐಪಿಡಿ

24×7 ಆಂಬ್ಯುಲೆನ್ಸ್‌ ಸೇವೆ

ಆಯುರ್ವೇದಿಕ್‌ ಕಾಲೇಜಿಗೆ ಪ್ರವೇಶ ಆರಂಭ:

ಎಸ್‌.ಆರ್‌.ಪಾಟೀಲರು ಆಧುನಿಕ ವೈದ್ಯಕೀಯಕ್ಕೆ ಎಷ್ಟು ಮಹತ್ವ ನೀಡಿದ್ದಾರೋ ಅಷ್ಟೇ ಮಹತ್ವವನ್ನು ಭಾರತೀಯ ಪ್ರಾಚೀನ ಕಾಲದಿಂದಲೂ ಬಂದಿರುವ ಆಯುರ್ವೇದ್‌ ಪದ್ಧತಿಗೆ ಮಹತ್ವ ನೀಡಿದ್ದಾರೆ. ಕಾರಣ ಇದೇ ಬಾಡಗಂಡಿ ಆರೋಗ್ಯಧಾಮದಲ್ಲಿ ಎಸ್‌.ಆರ್‌.ಪಾಟೀಲ ಅವರು ಹಿರಿಯ ಸಹೋದರಿ ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್‌ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನೂ ಆರಂಭಿಸಿದ್ದಾರೆ. ಆಯುರ್ವೇದಿಕ್‌ ಕಾಲೇಜು ಕರ್ನಾಟಕ ಸರ್ಕಾರ (ವೈದ್ಯಕೀಯ ಶಿಕ್ಷಣ ಇಲಾಖೆ) ಹಾಗೂ ರಾಜೀವ ಗಾಂಧಿ ವಿಶ್ವವಿದ್ಯಾಲಯದಿಂದ ಒಟ್ಟು 60 ಸೀಟ್‌ಗಳಿಗೆ ಪರವಾನಗಿ ಪಡೆದು 2022-23ರಲ್ಲಿ ಆರಂಭವಾಗಿದೆ. ಈಗಾಗಲೇ ಮೊದಲನೆಯ ಬ್ಯಾಚ್‌ ಮುಗಿದಿದ್ದು, ಎರಡನೇ ಬ್ಯಾಚ್‌ನ ಪ್ರವೇಶ ಆರಂಭಗೊಂಡಿದೆ. ಆಯುರ್ವೇದಿಕ ಆಸ್ಪತ್ರೆಯೂ ಸಹ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ 2021ರ ಫೆಬ್ರುವರಿ 25 ರಂದು ಪರವಾನಗಿ ಪಡೆದಿದ್ದು ಈಗಾಗಲೇ ಚಿಕಿತ್ಸೆ ನೀಡುತ್ತಿದೆ. ಈ ಆಯುರ್ವೇದಿಕ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಹಿತಾ ಮತ್ತು ಸಿದ್ಧಾಂತ, ರಚನಾ ಶಾರೀರ, ಕ್ರಿಯಾ ಶರೀರ ದ್ರವ್ಯಗುಣ, ರಸಶಾಸ್ತ್ರ, ಏವಂ ಭೆ„ಸಜ್ಯ ಕಲ್ಪನಾ, ರೋಗ ನಿಧಾನ, ಏವಂ ವಿಕೃತಿ, ವಿಜ್ಞಾನ, ಸ್ವಸ್ಥಾವೃತ್ತ ತಥಾ, ಯೋಗ ಆಗದ್‌ ತಂತ್ರ ಏವಂ ವಿಧಿ, ವೈದ್ಯಕ, ಪ್ರಸೂತಿ ಏವಂ ಸ್ತ್ರೀರೋಗಃ, ಕಾಯಚಿಕಿತ್ಸಾ, ಶಲ್ಯ, ಶಾಲಾಕ್ಯ, ಕೌಮರಭ್ರತ್ಯ(ಬಾಲರೋಗ), ಪಂಚಕರ್ಮ ಎಂಬ ಒಟ್ಟು 14 ವಿಭಾಗಗಳಲ್ಲಿ ಕಾಲೇಜು ಆರಂಭಗೊಂಡಿದೆ.

ಹಲವು ಪ್ರಥಮಗಳಿಗೆ ಹೆಸರಾದ ಎಸ್ಸಾರ್‌!:

ಎಸ್‌.ಆರ್‌. ಪಾಟೀಲರೆಂದರೇ ಹಾಗೆ. ರಾಜಕೀಯ, ಸಹಕಾರ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಮುಖ್ಯವಾಗಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಹಲವು ಪ್ರಥಮಗಳಿಗೂ ಶ್ರೀಕಾರ ಬರೆದವರು.

ಇವರು ಉತ್ತರ ಕರ್ನಾಟಕ ಕಂಡ ವಿಶಿಷ್ಟ ರಾಜಕಾರಣಿ. ತತ್ವ, ಸಿದ್ಧಾಂತ, ಬದ್ಧತೆ, ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಗೆ ಅವರದು ಹೇಳಿ ಮಾಡಿಸಿದ ವ್ಯಕ್ತಿತ್ವ. ಜನಪರ ನಿಲುವು. ಸುತ್ತಮುತ್ತಲಿದ್ದವರ ಕಷ್ಟಕ್ಕೆ ಓಗೊಡುವ ಮನಸ್ಸು. ಅಸಹಾಯಕ, ದುರ್ಬಲರಿಗೆ ಸಹಾಯ ಮಾಡಬೇಕೆನ್ನುವ ತುಡಿತ. ಬರೀ ತುಡಿತ ಇದ್ದರೆ ಮುಗಿಯಲಿಲ್ಲ. ಅವರೊಬ್ಬ ಪ್ರಾಮಿಜಿಂಗ್‌ ಪೊಲಿಟಿಕಲ್‌ ಲೀಡರ್‌.

ಇಂದಿನ ದಿನಗಳಲ್ಲಿ ಒಳ್ಳೆಯ ಲೀಡರ್‌ಗಳು ಸಿಗುವುದು ತುಂಬಾ ಕಷ್ಟ. ಸಿಕ್ಕರೂ ಬೆರಳೆಣಿಕೆಯಷ್ಟೇ. ಅದೂ ಇವತ್ತಿನ ಕುರ್ಚಿ, ಅಧಿಕಾರದ ಏಣಿಯಾಟದ ಗದ್ದಲದಲ್ಲಿ ನಾಯಕತ್ವ ಗುಣ ಹೊಂದಿದ ವ್ಯಕ್ತಿಗಳನ್ನು ದುರ್ಬಿನ್‌ ಹಿಡಿದು ಹುಡುಕಬೇಕಷ್ಟೇ. ಹೀರೋ ತಾನಷ್ಟೇ ಬೆಳೆದರೆ ಆತ ನಾಯಕನಾಗಲ್ಲ. ಆ ಲೀಡರ್‌ ತಾನು ಬೆಳೆಯುವುದರ ಜತೆಗೆ ನೆರೆ-ಹೊರೆಯವರನ್ನು ಬೆಳೆಸಬೇಕು. ಆಗ ತನ್ನಿಂದ ತಾನೆ ಆತ ಜನ ನಾಯಕನಾಗಿ, ಹೆಮ್ಮರವಾಗಿ ಬೆಳೆಯುತ್ತಾನೆ. ಅಂತಹವರಲ್ಲಿ ಎಸ್‌.ಆರ್‌. ಪಾಟೀಲರು ಒಬ್ಬರಾಗಿ ಕಾಣುತ್ತಾರೆ. ತಾವೊಬ್ಬ ಜನ ನಾಯಕ ಎನ್ನುವ ಪ್ರಜ್ಞೆ ಅವರಲ್ಲಿದೆ. ಹೀಗಾಗಿ ಜನ ಸಮುದಾಯದ ಹಿತಕ್ಕಾಗಿ ಹಂಬಲಿಸುವ ನಿಸ್ವಾರ್ಥಿ.

ಬಾಡಗಂಡಿ ಎಂಬ ಪುಟ್ಟ ಗ್ರಾಮದ ಈ ದೈತ್ಯ ಪ್ರತಿಭೆ, ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅದೇ ಗ್ರಾಮೀಣ ಸೊಗಡನ್ನು ತನ್ನೊಡಲೊಳಗೆ ಕಾಯ್ದುಕೊಂಡು ತನ್ನತನವನ್ನು ಜೀವಂತವಾಗಿರಿಸಿಕೊಂಡ ವಿಶಿಷ್ಟ ರಾಜಕಾರಣಿ. ಸದಾ ಜನರೊಂದಿಗೆ ಬೆರೆಯುವ, ಜನರ ನೋವು, ದುಃಖ, ಸಂಕಷ್ಟಗಳ ಪರಿಹಾರವೇ ತನ್ನ ಕೆಲಸವೆಂದು, ದಣಿವರಿಯದೇ ದುಡಿಯುವ ಶ್ರಮಜೀವಿ.

ಇಂದು ಶಿಕ್ಷಣ, ಸಹಕಾರಿ, ಕೈಗಾರಿಕೆ, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಇವರದು ಪರಿಶ್ರಮದ ಫಲ. ಚಿಕ್ಕ ವಯಸ್ಸಿನಲ್ಲಿ ಇವರು ಪಟ್ಟ ಕಷ್ಟವನ್ನು ಅವರೇ ತಮ್ಮ ಸಾರ್ಥಕ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ವಿಜಾಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಎಸ್‌.ಆರ್‌. ಪಾಟೀಲರನ್ನು ವಿರೋಧ ಪಕ್ಷದವರೂ ಪ್ರೀತಿಯಿಂದ, ಗೌರವದಿಂದ ಕಾಣುವವರಿದ್ದಾರೆ.

ಬಾಡಗಂಡಿಯಿಂದ ಬೀಳಗಿವರೆಗೆ ನಡೆದುಕೊಂಡೇ ಶಿಕ್ಷಣ ಕಲಿತ ಎಸ್ಸಾರ್‌, ಜಿಲ್ಲಾ ಪರಿಷತ್‌ನಿಂದ ವಿಧಾನ ಪರಿಷತ್‌ವರೆಗೆ ರಾಜಕೀಯವಾಗಿ ಬೆಳೆದವರು. ತಮ್ಮ ಪ್ರಾಮಾಣಿಕ ಸೇವೆಯಿಂದಲೇ ಗುರುತಿಸಿಕೊಂಡವರು. ಜಾತಿ ರಾಜಕಾರಣ, ಭ್ರಷ್ಟಾಚಾರ ಎಂದಿಗೂ ಅವರು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಕೇವಲ ತಾವೊಬ್ಬರೇ ಬೆಳೆದಿಲ್ಲ. ತಮ್ಮೊಂದಿಗೆ ಇದ್ದವರನ್ನು, ನಂಬಿ ಬಂದವರನ್ನೂ ಬೆಳೆಸಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಸಂಸ್ಥೆಗಳಿಗೆ ಅವರನ್ನೇ ಒಡೆಯರ‌ನ್ನಾಗಿ ಮಾಡಿದ್ದಾರೆ. ಹೀಗೆ ಅವರ ಗರಡಿಯಲ್ಲಿ, ಮಾರ್ಗದರ್ಶನದಲ್ಲಿ ಬೆಳೆದವರು ಇಂದು ಅವರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಇವರು ಅಧಿಕಾರ ಇದ್ದಾಗ, ಇಲ್ಲದಾಗ ಸಮಾನ ಮನೋಬಲದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಪರಿಷತ್‌ನ ಮೊದಲ ಚುನಾವಣೆಯಲ್ಲೇ ಗೆಲುವು ಕಂಡರೂ ಬಾಗಲಕೋಟೆ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡವರು. ಇದು ರಾಜಕೀಯದಲ್ಲಿ ಸಾಮಾನ್ಯ. ರಾಜಕೀಯ ಅನ್ನೋದು ಜನರ ಸೇವೆ ಮಾಡಲು ಇರುವ ನೇರ ಸಂಪರ್ಕ ಸಾಧನ ಎಂಬುದನ್ನು ಅವರು ಮನಗಂಡು ಮುನ್ನಡೆದಿದ್ದಾರೆ.

ಎಲ್ಲರಿಗೂ ಒಳ್ಳೆಯದಾಗಲೆಂಬ ಅವರ ಮನಸ್ಸಿನಿಂದ ಅವರಿಗೆ ಒಳ್ಳೆಯದೇ ಆಗುತ್ತಿದೆ. ಅದಕ್ಕಾಗಿಯೇ ಅವರು ಹಲವು ಪ್ರಥಮಗಳಿಗೆ ಖ್ಯಾತಿ ಪಡೆದಿದ್ದಾರೆ. ವಿಜಯಪುರ ಜಿಲ್ಲಾ ಪರಿಷತ್‌ನ ಪ್ರಥಮ ವಿರೋಧ ಪಕ್ಷದ ನಾಯಕರಾಗಿ, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವಳಿ ಜಿಲ್ಲೆಯ ಮೊದಲ ರಾಜಕಾರಣಿಯೊಬ್ಬರು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ, ಸಭಾ ನಾಯಕರಾದ ಖ್ಯಾತಿಯೂ ಅವರಿಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ವೇಳೆ ಆಲಮಟ್ಟಿ ಜಲಾಯಶದ ಹಿನ್ನೀರಿನಲ್ಲಿ ಮುಳುಗಡೆಯಾದ ಭೂಮಿಗಳಿಗೆ ಬೆಲೆ ಕೊಡಿಸುವಲ್ಲಿ, ಅಂದು ಅವರದೇ ಪಕ್ಷದ ಸರ್ಕಾರ ಇದ್ದರೂ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿ, ಸಂತ್ರಸ್ತರಪರ ನಿಲುವಿನ ನಾಯಕ ಎನಿಸಿಕೊಂಡವರು.

ಊರಿಗೂ; ಪರರಿಗೂ ಉಪಕಾರಿ:

ಕೆಲ ರಾಜಕಾರಣಿಗಳು ಇಡಿ ರಾಜ್ಯದ ಗಮನ ಸೆಳೆದರೂ ತಮ್ಮ ಗ್ರಾಮದಲ್ಲೇ ವಿರೋಧ ಕಟ್ಟಿಕೊಂಡಿರುತ್ತಾರೆ. ಆದರೆ ಎಸ್ಸಾರ್‌ ಅವರು ತಮ್ಮೂರಿನ ಸರ್ಕಾರಿ ಪ್ರೌಢಶಾಲೆಗೆ ಭೂ ದಾನ, ಗ್ರಾಮದ ಮನೆ ಮನೆಯ ಕುಟುಂಬಕ್ಕೊಂದು ಉದ್ಯೋಗ ನೀಡುವ ಮೂಲಕ ಉದ್ಯೋಗದಾತರಾಗಿದ್ದಾರೆ. ಬಾಡಂಗಡಿಯ ತಮ್ಮ ಸಕ್ಕರೆ ಕಾರ್ಖಾನೆ, ಬಾಪೂಜಿ ಸಹಕಾರಿ ಪತ್ತಿನ ಸಂಘ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌, ಎಸ್‌.ಆರ್‌. ಪಾಟೀಲ ಶಿಕ್ಷಣ ಪ್ರತಿಷ್ಠಾನ, ಇದೀಗ ಹೊಸದಾಗಿ ಆರಂಭಗೊಂಡ ಬಾಡಗಂಡಿ ಆರೋಗ್ಯಧಾಮ ಹೀಗೆ ಹಲವು ಸಂಸ್ಥೆಗಳಲ್ಲಿ ತಮ್ಮ ಗ್ರಾಮದ ವಿದ್ಯಾವಂತರಿಗೆ ಉದ್ಯೋಗ ನೀಡಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಮ್ಮ ಗ್ರಾಮದಿಂದಲೇ ಪ್ರಯತ್ನ ಆರಂಭಿಸಿದ್ದಾರೆ.

ರೈತರೊಂದಿಗೆ ಬ್ಯಾರೇಜ್‌ ನಿರ್ಮಾಣ:

ರೈತರೇ ಕೂಡಿಕೊಂಡು ಬ್ಯಾರೇಜ್‌ ಕಟ್ಟಿದ್ದು ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಚಿಕ್ಕಪಡಸಲಗಿ ಬ್ಯಾರೇಜ್‌ ಮಾತ್ರ ಕಣ್ಣೆದುರಿಗೆ ಬರುತ್ತದೆ. ಆದರೆ 1995ರಲ್ಲಿ ಬೀಳಗಿ  ತಾಲೂಕಿನ  ಹೆಗ್ಗೂರಿನ  ಸಮೀಪ ಕೇವಲ 87 ದಿನಗಳಲ್ಲಿ 10 ಸಾವಿರ ಎಕರೆ ಭೂಮಿಗೆ ನೀರುಣಿಸುವ ಬ್ಯಾರೇಜ್‌ ನಿರ್ಮಿಸಲು ಇದೇ ಎಸ್ಸಾರ್‌ ಪಾಟೀಲರು ಪ್ರೇರಣೆ. ರೈತರೊಂದಿಗೆ ಶ್ರಮದಾನ ಮೂಲಕ ಬ್ಯಾರೇಜ್‌ ನಿರ್ಮಿಸಿ, ಹೊಸ ದಾಖಲೆ ನಿರ್ಮಿಸಿದ್ದರು. ಅದು ಅಷ್ಟೊಂದು ಪ್ರಚಾರಕ್ಕೆ ಬರಲಿಲ್ಲ. ಈ ಬ್ಯಾರೇಜ್‌ ನಿರ್ಮಾಣಕ್ಕೆ ಜಮಖಂಡಿಯ ದಿ.ಸಿದ್ದು ನ್ಯಾಮಗೌಡರು ಮಾರ್ಗದರ್ಶ ನೀಡಿದ್ದರೆ, ಅಶೋಕ ತುಂಗಳ ಎಂಜಿನಿಯರ್‌ ಆಗಿದ್ದರು. ಆಗ ದಿ|ಸಿದ್ದನಗೌಡ ಪಾಟೀಲ, ಸತ್ಯಪ್ಪ ಮೇಲಾ°ಡ, ಎಂ.ಎಸ್‌. ಕಟಗೇರಿ, ಜಿ.ಎನ್‌. ಪಾಟೀಲ, ಶಿವಾನಂದ ನಿಂಗನೂರ ಮುಂತಾದವರು ಕೈಗೆ ಕೈ ಜೋಡಿಸಿದ್ದರು ಎಂದು ಸ್ವತಃ ಎಸ್‌.ಆರ್‌. ಪಾಟೀಲರೇ ನೆನೆಯುತ್ತಾರೆ.

ಸ್ವತಃ ನೇತ್ರದಾನಿ :

ಎಸ್‌.ಆರ್‌. ಪಾಟೀಲರು, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವುದಾಗಿ ವಾಗ್ಧಾನ ಮಾಡುವ ಮೂಲಕ ಮರಣ ಬಳಿಕವೂ ಪರೋಪಕಾರಿಯಾಗಬೇಕೆಂಬ ನಿಲುವು ತಳೆದವರು. ಕಳೆದ 2011ರಲ್ಲಿ ಬಾಗಲಕೋಟೆಯ ಬಸವಜ್ಯೋತಿ ನೇತ್ರಾಲಯದ ಉದ್ಘಾಟನೆ ಸಂದರ್ಭದಲ್ಲಿ ತಮ್ಮ ಎರಡು ಕಣ್ಣುಗಳನ್ನು  ದಾನ ಮಾಡುವುದಾಗಿ  ಹೇಳುವ  ಮೂಲಕ ಇತರ ರಾಜಕಾರಣಿಗಳಿಗೂ ಮಾದರಿಯಾದವರು.

– ಕಿರಣ ನಾಯ್ಕರ

 

Advertisement

Udayavani is now on Telegram. Click here to join our channel and stay updated with the latest news.

Next