Advertisement

ಮಣ್ಣಪಳ್ಳದಲ್ಲಿ ವಿಕಸಿತಗೊಂಡ ವಸಂತದ ಚಿಗುರು

06:13 PM Jun 13, 2019 | mahesh |

ರೋಟರಿ ಮಣಿಪಾಲ ಹಿಲ್ಸ್‌ ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಪ್ರಸ್ತುತಗೊಂಡ ರೋಟರಿ ಮಣ್ಣಪಳ್ಳ ನೃತ್ಯೋತ್ಸವ ಒಂದು ವಿಶಿಷ್ಟ ಅನುಭವ ನೀಡಿತು. ವಸಂತಾಗಮನದ ಸಂಭ್ರಮದಲ್ಲಿ ಮಣ್ಣಪಳ್ಳದ ಪ್ರಾಕೃತಿಕ ಸೌಂದರ್ಯದ ಅನುಭೂತಿಯಲ್ಲಿ ನೃತ್ಯನಿಕೇತನ ಕೊಡವೂರು ಇದರ ಕಲಾವಿದರು ಅದರಲ್ಲೂ ಬಾಲಕಲಾವಿದೆಯರು ವಸಂತ ಋತುವಿನ ಚಿಗುರೆಲೆಗಳಂತೆ ಕಂಗೊಳಿಸಿದರು. ಸಂಪ್ರದಾಯದಂತೆ ಮಧುವಂತಿರಾಗ ಆದಿತಾಳದಲ್ಲಿ ನಟರಾಜನಿಗೆ ಪುಷ್ಪಾಂಜಲಿಯನ್ನು ಆರ್ಪಿಸಿ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಬಾಲಕಲಾವಿದೆಯರು ಗಣೇಶನ ಬಾಲಲೀಲೆಗಳನ್ನು ಪ್ರಸ್ತುತ ಪಡಿಸಿದ ರೀತಿ ಅನನ್ಯವಾಗಿತ್ತು. ಎರಡನೆಯ ನೃತ್ಯ ಆನಂದ ನರ್ತನ ಗಣಪತಿ ಭಾವಯೇ ಎನ್ನುವ ಗಣಪತಿ ಸ್ತುತಿಯಲ್ಲಿ ಗಣಪತಿಯ ಆನಂದಲಹರಿಯನ್ನು ಹಂತಹಂತವಾಗಿ ಪ್ರದರ್ಶಿಸಲಾಯಿತು. ವೀರರಸಭರಿತ ಜೈ ಜೈಹನುಮಾನ್‌ ಎನ್ನುವ ಹನುಮಂತನ ಕುರಿತಾದ ಹಾಡಿಗೆ ನೃತ್ಯಾಂಗನೆಯರು ಕ್ರಮಬದ್ಧ ಹಾಗೂ ಶ್ರಮಬದ್ಧ ಹೆಜ್ಜೆ ಹಾಕಿ ಗಮನಸೆಳೆದರು.

Advertisement

ಮುಂದೆ ಅಮೆರಿಕ ಪ್ರಜೆ ಒಲಿವಿಯಾ, ಭೋಶಂಭೋ ಎನ್ನುವ ಶಿವಸ್ತುತಿಗೆ ಹೆಜ್ಜೆ ಹಾಕಿದರು. ಅಲ್ಪಾವಧಿಯ ತರಬೇತಿ ಪಡೆದು ಪ್ರದರ್ಶಿಸಿದ ನೃತ್ಯವಾದ್ದರಿಂದ ನೃತ್ಯದಲ್ಲಿ ನಯ-ನಾಜೂಕು ಕೊರತೆ ಕಾಣುತ್ತಿತ್ತು. ಆದರೂ ಭಾವಾಭಿನಯ ಹಾಗೂ ಯೋಗಾಸನಗಳ ಮೂಲಕ ನೃತ್ಯಗಾತಿ ಗಮನ ಸೆಳೆದರು. ಈ ದಿಸೆಯಲ್ಲಿ ಭಾಷೆ ಹಾಗೂ ಸಂಸ್ಕೃತಿಯ ಪರಿಚಯವಿಲ್ಲದ ವಿದೇಶಿ ಮಹಿಳೆಯಿಂದ ಶಾಸ್ತ್ರೀಯ ಭರತನೃತ್ಯವನ್ನು ಮಾಡಿಸಿದ ವಿ| ಮಾನಸಿ ಸುಧೀರ್‌ ಅಭಿನಂದನಾರ್ಹರು. ನವರಸ ಭೀಮನನ್ನು ಪ್ರಸ್ತುತ ಪಡಿಸಿದ ಮಾನಸಿ ಸುಧೀರ್‌ದ್ರೌಪದಿ ಯ ಶೃಂಗಾರ ಭೀಮ ಅರಗಿನ ಮನೆಯಲ್ಲಿ ಬೆಂಕಿಯಿಂದ ಪಾಂಡವರನ್ನು ಸ್ಥಳಾಂತರಿಸುವ ಅದ್ಭುತ ಭೀಮ, ಬಕಾಸುರನಿಂದ ಬ್ರಾಹ್ಮಣ ದಂಪತಿಯನ್ನು ಪಾರು ಮಾಡುವ ಕರುಣಾ ಭೀಮ, ಬಂಡಿ ಅನ್ನವನ್ನು ತಿನ್ನುವ ಹಾಸ್ಯ ಭೀಮ, ಬಕಾಸುರನ್ನು ಕೊಂದ ರೌದ್ರ ಭೀಮ, ಹಗ್ಗದಿಂದ ಕಟ್ಟಿ ನೀರಿಗೆ ಹಾಕಿದಾಗ ತೋರಿಕೆಯ ಭಯ ಭೀಮ, ದುಶ್ಯಾಸನನನ್ನು ವಧಿಸಿ ರಕ್ತ ಚೆಲ್ಲುವ ಭೀಭತ್ಸ ಭೀಮ, ಜರಾಸಂಧನನ್ನು ವಧಿಸಿದ ವೀರ ಭೀಮ, ಅಂತಿಮ ಪಯಣದಲ್ಲಿ ಸ್ಥಿತಪ್ರಜ್ಞನಾಗಿ ಮೆರೆದ ಶಾಂತ ಭೀಮನನ್ನು ಪ್ರಸ್ತುತಪಡಿಸಿದ ರೀತಿ ನವರಸ ಭರಿತವಾಗಿತ್ತು. ಕೃಷ್ಣನಿಗೆ ಸ್ವಾಗತವನ್ನು ಬಯಸುವ, ಶರಣಾಗತಿಯನ್ನು ಅಪೇಕ್ಷಿಸುವ “ಸ್ವಾಗತಂಕೃಷ್ಣ’ ಕೃತಿಯನ್ನು ಸುಂದರವಾಗಿ ಪ್ರಸ್ತುತಗೊಳಿಸಿದರು. ಸರಿಗಮಪದನಿಸ ಸಂಗೀತದ ಬೀಜಮಂತ್ರ, ಈ ಅಕ್ಷರಗಳಿಂದ ಪ್ರಾರಂಭವಾಗುವ ಶಿವನ ನಾಮಗಳು ಅರ್ಥಪೂರ್ಣವಾಗಿ ನೃತ್ಯದ ಮೂಲಕ ಸಾಕಾರಗೊಂಡು ಮೆಚ್ಚುಗೆ ಗಳಿಸಿತು. “ಅಖೀಯಾಂ ಹರಿದರುಸನ್‌’ ಎನ್ನುವ ಸೂರ್‌ದಾಸ್‌ ಭಜನೆಯಲ್ಲಿ ಹುಟ್ಟು ಕುರುಡ ಸೂರ್‌ದಾಸ್‌ ಬಾವಿಗೆ ಬೀಳುವುದು, ಕೃಷ್ಣ ಅವನನ್ನು ಬಾವಿಯೆಂದೆತ್ತಿ ದೃಷ್ಟಿ ಭಾಗ್ಯ ನೀಡುವುದು, ಸೂರ್‌ದಾಸ್‌ ಕೃಷ್ಣನನ್ನು ಸ್ತುತಿಸುವುದು ಎಲ್ಲವನ್ನು ಮನೋಜ್ಞವಾಗಿ ಪ್ರದರ್ಶಿಸಲಾಯಿತು. ಮಾನಸಿ ಸುಧೀರ್‌ ಭಕ್ತಿಭಾವ ಪೂರ್ಣ ವಾಗಿ ಅಭಿನಯ ಪೂರ್ವಕ ಸೂರದಾಸನ ವ್ಯಕ್ತಿತ್ವವನ್ನು ಸಾಕಾರ ಗೊಳಿಸಿದರು. ನಂತರ “ಬೊಮ್ಮ ಬೊಮ್ಮ’ ಎನ್ನುವ ಮರಾಠಿ ಹಾಡಿಗೆ ಲವಲವಿಕೆಯಿಂದ ಹೆಜ್ಜೆ ಹಾಕಿ ನೃತ್ಯಾಂಗಣವನ್ನು ಪುನರುಜ್ಜೀವನಗೊಳಿಸಿದರು. ಕೊನೆಯ ಪ್ರಸ್ತುತಿಯಾಗಿ ವಿ|ಅನಘಶ್ರೀ ಕೃಷ್ಣನಾಗಿ ಗೋಪಿಕೆ ಯರು “ನಂದಗೋಪನಂದನನ ಕರೆತಾರೇ ನೀರೆ’ ಎನ್ನುವ ಗೀತೆಯಲ್ಲಿ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದರು. ಹಾಡಿನ ಸಂಪೂರ್ಣ ಸೌಂದರ್ಯವನ್ನು ನೃತ್ಯರೂಪಕ್ಕಿಳಿಸಿದ ಕಲಾವಿದೆಯರ ಸಾಮರ್ಥ್ಯ ಮೆಚ್ಚುವಂಥದ್ದು.

ಜನನಿ ಭಾಸ್ಕರ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next