ಕುಂದಾಪುರ/ತೆಕ್ಕಟ್ಟೆ: ವಾಲಿ ಬಾಲ್ ಕ್ರೀಡೆಯು ಆಟದ ಜತೆ ಬದುಕಿನ ಪಾಠವನ್ನು ಕಲಿಸುತ್ತದೆ. ಬದುಕಿನಲ್ಲಿ ಬರುವ ಹೊಡೆತಗಳಿಗೆ ಕುಗ್ಗದೆ, ಮುಂದುವರಿಯುವುದರಿಂದ ಜೀವನೋತ್ಸಾಹವದ ಜತೆ ಯಶಸ್ಸು ದೊರಕುತ್ತದೆ ಎಂದು ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಸುಣ್ಣಾರಿಯ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ಪ. ಪೂ. ಶಿಕ್ಷಣ ಇಲಾಖೆ, ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪ.ಪೂ. ಕಾಲೇಜಿನ ಆಶ್ರ ಯದಲ್ಲಿ ನಡೆಯಲಿರುವ ಪ.ಪೂ. ವಿದ್ಯಾರ್ಥಿಗಳ ರಾಜ್ಯಮಟ್ಟದ ವಾಲಿ ಬಾಲ್ ಪಂದ್ಯಾಟವನ್ನು ಅವರು ಉದ್ಘಾಟಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಶಿಕ್ಷಣ ಇಲಾಖೆಯು ಕ್ರೀಡೆಗೆ ಒತ್ತು ಕೊಟ್ಟಲ್ಲಿ ಮಾತ್ರ ದೇಶದ ಕ್ರೀಡಾ ಕ್ಷೇತ್ರ ಉತ್ತುಂಗಕ್ಕೇರುವುದು ಎಂದರು. ಶಿಕ್ಷಣದಲ್ಲಿ ಪಠ್ಯದ ಜತೆಗೆ ಕ್ರೀಡೆಯೂ ಅಗತ್ಯ. ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನ ಸಹಿತ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಸರಕಾರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆ ಗೌಡ ಹೇಳಿದರು.
ರಾಷ್ಟ್ರೀಯ ವಾಲಿಬಾಲ್ ಪಟು ಹೆಮ್ಮಾಡಿಯ ರೈಸನ್ ಬೆನೆಟ್ ರೆಬೆಲ್ಲೋ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಸ್ರೂರು ಮಹಾಲಿಂಗೇಶ್ವರ ದೇಗು ಲದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಗಳಾದ ಎಂ. ಮಹೇಶ್ ಹೆಗ್ಡೆ, ಎಂ. ದಿನೇಶ್ ಹೆಗ್ಡೆ, ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಸೌಕೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಹೊಂಬಾಡಿ-ಮಂಡಾಡಿ ಗ್ರಾ. ಪಂ. ಅಧ್ಯಕ್ಷ ಸತೀಶ್ ಮಡಿವಾಳ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಶೆಟ್ಟಿ, ರಾಜ್ಯ ವೀಕ್ಷಕ ಮಹಾಂ ತೇಶ, ಕ್ರೀಡಾ ನಿರ್ದೇಶಕ ದಿನೇಶ್ ಶೆಟ್ಟಿ, ಜಯಶೀಲ ಶೆಟ್ಟಿ ಘಟಪ್ರಭ, ಉದಯ್ ಕುಮಾರ್ ಶೆಟ್ಟಿ ಬೈಲೂರು ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ| ರಮೇಶ ಶೆಟ್ಟಿ ಪ್ರಸ್ತಾವಿಸಿದರು. ಸುಜ್ಞಾನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.