Advertisement

ಇನ್ನೆರಡೇ ದಿನಗಳಲ್ಲಿ ಕ್ರೀಡಾ ನೀತಿ ಪ್ರಕಟ

06:25 AM Feb 02, 2018 | |

ಬೆಂಗಳೂರು: ಬಹುನಿರೀಕ್ಷಿತ ಕ್ರೀಡಾ ನೀತಿ ಬಹುತೇಕ ಸಿದ್ಧಗೊಂಡಿದೆ. ಇನ್ನೇನು ಎರಡೇ ದಿನಗಳ ಒಳಗೆ ಪ್ರಕಟಿಸಲಿದ್ದೇವೆ ಎಂದು ಯುವ ಸಬಲೀಕರಣ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ಕ್ರೀಡಾ ಇಲಾಖೆ ಹಾಗೂ ಸರೋಜಿನಿ ದಾಮೋದರನ್‌ ಫೌಂಡೇಷನ್‌ (ಎಸ್‌ಡಿಎಫ್) ಜಂಟಿಯಾಗಿ “ಯವನಿಕಾ’ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಅನುಭವಿ ಹಾಲಿ, ಮಾಜಿ ಕ್ರೀಡಾ ತಜ್ಞರ ಸಲಹೆ-ಸೂಚನೆ ಪಡೆದುಕೊಂಡು ಉತ್ತಮ ಕ್ರೀಡಾ ನೀತಿ ರಚಿಸಿದ್ದೇವೆ. ಇದಕ್ಕೆ ಸಚಿವ ಸಂಪುಟದಿಂದ ಶೀಘ್ರ ಅನುಮೋದನೆ ಪಡೆದುಕೊಳ್ಳಲಿದ್ದೇವೆ. ಹೊಸ ನೀತಿಯಿಂದ ಕ್ರೀಡಾಪಟುಗಳ ಉದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕ್ರೀಡಾ ನೀತಿಯಲ್ಲಿ ವಿಶೇಷವಾಗಿ ಮೀಸಲಾತಿ ವ್ಯವಸ್ಥೆಯನ್ನು ತರುತ್ತಿರುವುದಾಗಿ ತಿಳಿಸಿದರು. ಕೇಂದ್ರ ಸರಕಾರಕ್ಕೂ ಮೊದಲು ನಾವು ನಮ್ಮ ರಾಜ್ಯದಲ್ಲಿ ಅಗ್ರ ಒಂದು ಸಾವಿರ ಆ್ಯತ್ಲೀಟ್‌ಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡೆವು. ನಮ್ಮನ್ನು ನೋಡಿ ಕೇಂದ್ರ ಸರಕಾರವೂ ಅಗ್ರ ಸಾವಿರ ದೇಶದ ಆ್ಯತ್ಲೀಟ್‌ಗಳಿಗೆ ವಿದ್ಯಾರ್ಥಿ ವೇತನ ನೀಡಿತು ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದ ಸಾಧಕ ಯುವ ಆ್ಯತ್ಲೀಟ್‌ಗಳಾದ ಅಂಗವಿಕಲ ಈಜುಪಟು ನಿರಂಜನ್‌ ಮುಕುಂದ್‌, ಈಜುಪಟು ಹೇಮಂತ್‌ ಜೇನುಕಲ್‌, ಬ್ಯಾಡ್ಮಿಂಟನ್‌ ಆಟಗಾರ ಡ್ಯಾನಿಯಲ್‌ ಫ‌ರೀದ್‌ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಸ್ಕಾಲರ್‌ಶಿಪ್‌ ನೀಡಲಾಯಿತು. ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌, ಯುವ ಸಬಲೀಕರಣ ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರ್ವಾಲ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾಮನ್ವೆಲ್ತ್‌, ಏಷ್ಯಾಡ್‌ ಮೊತ್ತ ಹೆಚ್ಚಳಕ್ಕೆ ಚಿಂತನೆ: ಮುಂಬರುವ ಕಾಮನ್ವೆಲ್ತ್‌ ಏಷ್ಯಾಡ್‌ ಕೂಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಬಹುಮಾನ ಮೊತ್ತವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆ. ಹಿಂದೆ ಚಿನ್ನ ಗೆದ್ದವರಿಗೆ 25 ಲಕ್ಷ ರೂ. ನೀಡಲಾಗಿತ್ತು. ಮುಂದೆ 50 ಲಕ್ಷ ರೂ. ನೀಡುವ ಕುರಿತಂತೆ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.

ವಿಶ್ವಕಪ್‌ ಗೆದ್ದ ಅಂಧ ಕ್ರಿಕೆಟಿಗರಿಗೆ ಸನ್ಮಾನ
ಇತ್ತೀಚೆಗೆ ಅಂಧರ ಏಕದಿನ ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯರಾದ ರಾಜ್ಯದ ಪ್ರಕಾಶ್‌ ಜಯರಾಮಯ್ಯ, ಸುನಿಲ್‌ ಹಾಗೂ ಬಸಪ್ಪ ಅವರನ್ನು ಇದೇ ವೇಳೆ ಕ್ರೀಡಾ ಸಚಿವ ಮಧ್ವರಾಜ್‌ ಸನ್ಮಾನಿಸಿದರು. ಇದೇ ವೇಳೆ ಅಂಧ ಕ್ರಿಕೆಟಿಗರಿಗೆ ಉದ್ಯೋಗ ನೀಡುವ ಕುರಿತ ಭರವಸೆಯನ್ನೂ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next