ನವದೆಹಲಿ:ಇಂಗ್ಲೆಂಡ್ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಸುಮಾರು ಒಂದು ತಿಂಗಳ ಕಾಲ ವಿದೇಶದಲ್ಲಿ ತಂಗಬೇಕಾಗಿದ್ದು, ಈ ಸಂದರ್ಭದಲ್ಲಿ ತನ್ನ ಎರಡು ವರ್ಷದ ಮಗನನ್ನು ಬಿಟ್ಟಿರಲು ಸಾಧ್ಯವಿಲ್ಲ. ಹೀಗಾಗಿ ತನ್ನೊಂದಿಗೆ ಮಗ ಮತ್ತು ತನ್ನ ಉಸ್ತುವಾರಿಗೆ ಯುಕೆ ವೀಸಾ ಕೊಡಿಸಬೇಕೆಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯ ಈ ವಿಷಯದಲ್ಲಿ ವಿದೇಶಾಂಗ
ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಬೇಕೆಂದು ಕೋರಿಕೊಂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು: ಫ್ಲೈ ಓವರ್ ನಿಂದ ಕೆಳಗೆ ಬಿದ್ದು ತಾಯಿ ಸಾವು,ಮಗಳು ಗಂಭೀರ
ಈಗಾಗಲೇ ನಿಗದಿಯಾಗಿರುವಂತೆ ಸಾನಿಯಾ ಮಿರ್ಜಾ ಅವರು ನಾಟಿಂಗ್ ಹ್ಯಾಮ್ ಓಪನ್ (ಜೂನ್ 06), ಬರ್ಮಿಂಗ್ ಹ್ಯಾಮ್ ಓಪನ್ (ಜೂನ್ 14) ಈಸ್ಟ್ ಬರ್ನ್ ಓಪನ್ (ಜೂನ್ 20) ಮತ್ತು ವಿಂಬಲ್ಡನ್ (ಜೂನ್ 28) ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ವಿದೇಶ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾನಿಯಾ ಮಿರ್ಜಾಗೆ ವೀಸಾ ನೀಡಲಾಗಿತ್ತು. ಆದರೆ ಆಕೆಯ 2ವರ್ಷದ ಮಗ ಮತ್ತು ಆತನ ಕೇರ್ ಟೇಕರ್ ಗೆ ಯುಕೆಯ ವೀಸಾ ಸಿಕ್ಕಿರಲಿಲ್ಲವಾಗಿತ್ತು. ಭಾರತದಲ್ಲಿ ಕೋವಿಡ್ 2ನೇ ಅಲೆ ಹೆಚ್ಚಳವಾಗಿದ್ದರಿಂದ ಸಂಚಾರ ನಿರ್ಬಂಧ ವಿಧಿಸಿದ ಪರಿಣಾಮ ಯುಕೆ ವೀಸಾ ಲಭ್ಯವಾಗಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
ಈ ನಿಟ್ಟಿನಲ್ಲಿ ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ನ ಭಾಗವಾಗಿರುವ ಸಾನಿಯಾ ತನ್ನ ಮಗ ಮತ್ತು ಕೇರ್ ಟೇಕರ್ ಗೆ ವೀಸಾ ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ರೀಡಾ ಸಚಿವಾಲಯದ ಮೊರೆ ಹೋಗಿದ್ದರು.
ಸಾನಿಯಾ ಮನವಿಗೆ ತಕ್ಷಣವೇ ಸ್ಪಂದಿಸಿದ ಕ್ರೀಡಾ ಸಚಿವಾಲಯ, ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಕಳುಹಿಸಲಾಗಿದೆ. ಸಾನಿಯಾ ಅವರು ತಮ್ಮ ಎರಡು ವರ್ಷದ ಮಗುವನ್ನು ಬಿಟ್ಟು ಪ್ರಯಾಣಿಸಲು ಅಸಾಧ್ಯ ಎಂದು ಮನಗಂಡಿದ್ದು, ಮಗ ಹಾಗೂ ಕೇರ್ ಟೇಕರ್ ಗೆ ವೀಸಾ ನೀಡಲು ಯುಕೆಗೆ ವಿನಂತಿಸಲಾಗಿದೆ ಎಂದು ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.