ನವದೆಹಲಿ : ಮೊದಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ! ಥಾಮಸ್ ಕಪ್ ಗೆದ್ದು ಇಡೀ ಭಾರತ ದೇಶವೇ ಸಂಭ್ರಮಿಸಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಐಪಿಎಲ್ ನಲ್ಲಿ ಸೈಮಂಡ್ಸ್ ಗೌರವಾರ್ಥವಾಗಿ ಕಪ್ಪು ತೋಳುಪಟ್ಟಿಗಳನ್ನು ಧರಿಸಿ ಆಟ
ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಕ್ರೀಡಾ ಸಚಿವಾಲಯವು ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಭಾನುವಾರ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಭಾರತ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ 3-0 ಸೆಟ್ ಗಳ ಅದ್ಭುತ ಜಯ ಸಾಧಿಸಿದೆ.ಮೊದಲು ಲಕ್ಷ್ಯ ಸೇನ್ ಅವರು 8-21, 21-17, 21-16 ಸೆಟ್ ಗಳ ಅಂತರದಿಂದ ಆಂಥೋನಿ ಗಿಂಟಿಂಗ್ ರನ್ನು ಸೋಲಿಸಿ ಭಾರತ ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸಿದರು. ನಂತರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು 18-21, 23-21, 21-19 ರಿಂದ ಸೋಲಿಸಿದರು. ಅಂತಿಮ ಪಂದ್ಯದಲ್ಲಿ ಕೆ.ಶ್ರೀಕಾಂತ್ 21-15, 23-21 ನೇರ ಸೆಟ್ ಗಳಲ್ಲಿ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡರು.