Advertisement

ಹಾಕಿ ಅಭ್ಯಾಸ ಆರಂಭಿಸಲು ಕ್ರೀಡಾ ಸಚಿವರಿಗೆ ಮನವಿ

01:28 AM May 15, 2020 | Sriram |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಕಳೆದ ಕೆಲವು ವಾರಗಳಿಂದ ಎಲ್ಲ ರೀತಿಯ ಚಟುವಟಿಕೆಗಳಿಂದ ದೂರವಾಗಿರುವ ಭಾರತದ ಪುರುಷರ ಹಾಗೂ ವನಿತಾ ಹಾಕಿ ಆಟಗಾರರು ತಮ್ಮ ಅಭ್ಯಾಸದ ಆರಂಭಕ್ಕಾಗಿ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಲ್ಲಿ ಮನವಿ ಮಾಡಿದ್ದಾರೆ.

Advertisement

ಸೀಮಿತ ಸಂಖ್ಯೆಯ ಆಟಗಾರರ ಸಣ್ಣ ಗುಂಪುಗಳನ್ನು ರಚಿಸಿ ಅಂಗಳದಲ್ಲಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.

“ಲಾಕ್‌ಡೌನ್‌ನಿಂದಾಗಿ ಹಾಕಿ ಆಟಗಾರೆಲ್ಲರೂ ಸುರಕ್ಷಿತವಾಗಿದ್ದರೂ ಎಲ್ಲರಿಗೂ ಹೋಮ್‌ಸಿಕ್‌ ಕಾಡಲಾರಂಭಿಸಿದೆ. ಇದರಿಂದ ಹೊರಬಂದು ಮನಸ್ಸನ್ನು ತಿಳಿಗೊಳಿಸಲು ಇರುವ ಮಾರ್ಗವೆಂದರೆ ಅಭ್ಯಾಸ. ಹೀಗಾಗಿ ಕ್ರೀಡಾ ಸಚಿವರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ’ ಎಂದು ಹಾಕಿ ಮೂಲವೊಂದು ಪಿಟಿಐಗೆ ತಿಳಿಸಿದೆ.

ಪುರುಷರ ಹಾಗೂ ವನಿತಾ ಹಾಕಿ ತಂಡದ ಆಟಗಾರರೆಲ್ಲ ಮಾ. 25ರಿಂದ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಕೊರೊನಾ ನಿರ್ಬಂಧದಿಂದಾಗಿ ಯಾವುದೇ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಟಗಾರರನ್ನು 4-5 ಗುಂಪುಗಳಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟರೆ ಒಲಿಂಪಿಕ್ಸ್‌ ಹಾಗೂ ಇನ್ನಿತರ ಕೂಟಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಇತ್ತೀಚಿನ ಸಾಯ್‌ ಸಭೆಯಲ್ಲಿ ಕ್ರೀಡಾ ಸಚಿವರಿಗೆ ಮನವಿ ಮಾಡಲಾಗಿತ್ತು.

“ವಿಶ್ವದ 12 ಅಗ್ರ ಹಾಕಿ ತಂಡಗಳಲ್ಲಿ ಹಾಲೆಂಡ್‌ ಮತ್ತು ಬೆಲ್ಜಿಯಂ ಮಾತ್ರ ತಮ್ಮ ಅಭ್ಯಾಸವನ್ನು ಆರಂಭಿಸಿವೆ. ನಮಗೆ ಈಗಾಗಲೇ ಎರಡು ತಿಂಗಳ ಅಭ್ಯಾಸ ನಷ್ಟವಾಗಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅಭ್ಯಾಸ ಆರಂಭಿಸಿದರೆ ಒಳ್ಳೆಯದು’ ಎಂದು ಭಾರತೀಯ ಹಾಕಿ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.

Advertisement

ಸಚಿವರಿಗೆ ಮನವರಿಕೆ
ಎಲ್ಲ ಸುರಕ್ಷಾ ವಿಧಾನಗಳನ್ನು ಅನುಸರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, 4-5 ಆಟಗಾರರ ಸಣ್ಣ ಗುಂಪಿನ ಆಟಗಾರರಿಗೆ ವೈಯಕ್ತಿಕವಾಗಿ ಪೆನಾಲ್ಟಿ ಕಾರ್ನರ್‌ ಮತ್ತು ಶೂಟೌಟ್‌ ತರಬೇತಿ ನೀಡುವುದು ಆರಂಭಿಕ ಹಂತದ ಯೋಜನೆ ಎಂಬುದಾಗಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಸಭೆಯಲ್ಲಿ 34 ಮಂದಿ ಪುರುಷರು ಹಾಗೂ 24 ವನಿತಾ ಆಟಗಾರ್ತಿಯರು, ತರಬೇತುದಾರರಾದ ಸೋರ್ಡ್‌ ಮರಿನ್‌, ಗ್ರಹಾಂ ರೀಡ್‌, ಸಾಯ್‌ನ ಉನ್ನತ ಅಧಿಕಾರಿಗಳು ಹಾಗೂ ನೂತನ ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next