ಶಹಾಬಾದ: ಸೋಲು ಗೆಲವು ಮುಖ್ಯವಲ್ಲ, ಕ್ರೀಡೆಗಳಲ್ಲಿ ಉತ್ತಮವಾಗಿ ಭಾಗವಹಿಸುವುದು ಮುಖ್ಯ ಎಂದು
ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಅಧ್ಯಕ್ಷೆ ಬಿ.ಆರ್. ಅಪರ್ಣಾ ಹೇಳಿದರು.
ನಗರದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಜೇಷನ್ ಸ್ಥಳೀಯ ಸಮಿತಿಯಿಂದ ಹೊನಗುಂಟಾದಲ್ಲಿ
ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪರಸ್ಪರ ಗೌರವ, ಪ್ರೀತಿ ಹಾಗೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಆದರೆ ಇಂದು ಕ್ರೀಡೆಗಳು ವ್ಯಾಪಾರದ ವಸ್ತುಗಳಾಗುತ್ತಿರುವುದು ದುರಂತ. ಗ್ರಾಮೀಣ ಕ್ರೀಡೆಗಳು ಬುದ್ಧಿಯನ್ನು ಚುರುಕುಗೊಳಿಸಿ, ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದವು. ಆದರೆ ಇಂದಿನ ಐಪಿಎಲ್ ಹಾಗೂ ಪ್ರೋ ಕಬ್ಬಡ್ಡಿಯಂತಹ ಆಟಗಳು ಬಂದ ನಂತರ ಜೂಜಿಗೆ ಒಳಗಾಗಿ ಜನರು ಹಾಳಾಗಿ ಹೋಗಿದ್ದಾರೆ. ಇನ್ನೊಂದು ಕಡೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುವ ಗ್ರಾಮೀಣ ಕ್ರೀಡೆಗಳನ್ನು ನಾವು ಉಳಿಸಿ ಬೆಳೆಸಬೇಕಾದ ಪ್ರಸಂಗ ಎದುರಾಗಿದೆ.ಯುವಕರು ಗ್ರಾಮೀಣ ಕ್ರೀಡೆಗಳನ್ನು ಉಳಿಸುವತ್ತ ಗಮನ ನೀಡಬೇಕಾಗಿದೆ ಎಂದರು.
ಎ.ಐ.ಡಿ.ವೈ.ಒ ಜಿಲ್ಲಾ ಅಧ್ಯಕ್ಷ ಮಹೇಶ ನಾಡಗೌಡ ಮಾತನಾಡಿ, ಯುವಕರು ಮೊಬೈಲ್, ಫೇಸ್‌ಬುಕ್, ವ್ಯಾಟ್ಸ್ ಆ್ಯಪ್‌ನಲ್ಲಿ ಹೆಚ್ಚಿನ ಸಮಯ ಕಳೆಯದೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡೆಗಳಲ್ಲಿ
ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡ ಗಣಪತರಾವ ಕೆ.ಮಾನೆ, ಗಣ್ಯರಾದ ಮಾರ್ತಾಂಡಪ್ಪ ಬುರ್ಲಿ, ಅವಿನಾಶ ಗೌಡ, ಗಿರಿರಾಜ ಪವಾರ, ಎಚ್.ವೈ. ರೆಡ್ಡೇರ್, ಸಿದ್ಧಲಿಂಗಪ್ಪ ಬುಳ್ಳಾ, ಅಶೋಕ ತುಂಗಳ ಹಾಜರಿದ್ದರು.