ಗಂಗಾವತಿ: ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುತ್ತದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಬಜೆಟ್ ಗಳಲ್ಲಿ ಅಧಿಕ ಅನುದಾನ ಕಲ್ಪಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕ್ರೀಡೆಯಿಂದ ನಾಯಕತ್ವ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಯುವಕರು ಕ್ರೀಡೆಯಲ್ಲಿ ಸಕ್ರೀಯರಾಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ನೀಡುತ್ತಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗಂಗಾವತಿ ಕ್ಷೇತ್ರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸರಕಾರದಿಂದ ಸಾಕಷ್ಟು ಅನುದಾನ ತಂದು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಕೃಷಿ, ಇಂಜನಿಯರಿಂಗ್ ಕಾಲೇಜ್ ಪ್ರಾರಂಭಿಸಿರುವ ಹೆಗ್ಗಳಿಗೆ ಅವರಿಗಿದೆ. ಕ್ರೀಡಾಂಗಣದಲ್ಲೂ ವಿವಿಧ ಕ್ರೀಡಾಕೂಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಕ್ರೀಡಾಂಗಣ ನಿರ್ಮಾಣ ಮಾಡಿದ್ದಾರೆ. ಅಂಜನಾದ್ರಿಯ ಪವಿತ್ರ ಕ್ಷೇತ್ರವಿರುವ ಗಂಗಾವತಿ ತಾಲೂಕು ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ದರೋಜಿಯಿಂದ ಗಂಗಾವತಿಗೆ ರೈಲ್ವೆ ಲೈನ್ ಸರ್ವೇ ಮಾಡಲು ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದೆ ಎಂದರು.
ತುಂಗಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಶರೀರ ಸದೃಢವಾಗಲು ಕ್ರೀಡೆ ಅತ್ಯವಶ್ಯವಿದೆ. ಸದೃಢ ಶರೀರದಿಂದ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಜಿ. ವೀರಪ್ಪ, ಮಹಾಲಿಂಗಪ್ಪ ಬನ್ನಿಕೊಪ್ಪ, ಹೊಸಮಲಿ ಮಲ್ಲೇಶಪ್ಪ, ನವೀನ ಪಾಟೀಲ್, ಉಮೇಶ ಸಿಂಗನಾಳ, ವಾಸು ನವಲಿ, ಪರಶುರಾಮ ಮಡ್ಡೇರ ಇದ್ದರು.
ಗಂಗಾವತಿಯಲ್ಲಿ ಕ್ರೀಡಾಪಟುಗಳು ವೈಯಕ್ತಿಕ ಮತ್ತು ಗುಂಪು ಆಟದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದ್ದರಿಂದ 2019-20 ಹಾಗೂ ಹಾಗೂ 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 1.50 ಕೋಟಿ ವೆಚ್ಚ ಮಾಡಿ ತಾಲೂಕು ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕ್ರೀಡಾಪಟುಗಳು ಹಾಗೂ ಯುವಕರು ಒಳಾಂಗಣ ಕ್ರೀಡಾಂಗಣದ ಸದ್ಬಳಕೆ ಮಾಡಿಕೊಂಡು ಗಂಗಾವತಿ ಕೀರ್ತಿ ಮೆರೆಸಬೇಕು.
ಪರಣ್ಣ ಮುನವಳ್ಳಿ, ಶಾಸಕ