ನೆಲಮಂಗಲ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ ಸದೃಢರಾಗುವ ಜೊತೆ ಮಾನಸಿಕ ವಾಗಿಯೂ ಬಲಗೊಳ್ಳುತ್ತಾರೆ ಎಂದು ಮಾದನಾಯಕನಹಳ್ಳಿ ಆರಕ್ಷಕ ಠಾಣೆಯ ವೃತ್ತನಿರೀಕ್ಷಕ ಪ್ರಕಾಶ್ ಸಲಹೆ ನೀಡಿದರು.
ಪಟ್ಟಣದ ನಂದರಾಮಯ್ಯನ ಪಾಳ್ಯದಲ್ಲಿರುವ ಬ್ಲೂಮೂನ್ ಪಬ್ಲಿಕ್‌ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾ ಕೂಟದಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಶಿಕ್ಷಣದ ಜೊತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಎಂಬುದನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಬೆಳವಣಿಗೆಯಾಗಲು ಪ್ರೋತ್ಸಾಹ ನೀಡಿದರೆ ಉತ್ತಮ ಸಾಧಕರಾಗುತ್ತಾರೆ ಎಂದರು.
ಪೋಷಕರು ಮಕ್ಕಳ ಮೇಲೆ ಪರೀಕ್ಷೆಯ ದೃಷ್ಟಿಯಿಂದ ಒತ್ತಡ ಹಾಕುವುದನ್ನು ಕಡಿಮೆ ಮಾಡಿ ಅವರ ಸಾಧನೆ ಮಾಡುವ ಚಟುವಟಿಕೆಗಳ ಕಡೆ ಗಮನವಹಿಸುವಂತೆ ಮಾಡಿದರೆ ಶಿಕ್ಷಣದ ಜೊತೆ ಸಾಧನೆಯನ್ನು ಮಾಡುತ್ತಾರೆ ಎಂದು ತಿಳಿಸಿದರು.
ಕ್ರೀಡಾಜ್ಯೋತಿ: ಪಟ್ಟಣ ಸಮೀಪದ ನಂದರಾಮಯ್ಯನ ಪಾಳ್ಯದಲ್ಲಿ ಬ್ಲೂಮೂನ್ ಪಬ್ಲಿಕ್‌ಶಾಲೆ ಆಯೋಜಿಸಲಾಗಿರುವ ವಾರ್ಷಿಕ ಕ್ರೀಡಾಕೂಟದಲ್ಲಿ ಶತಾಯುಷಿ ತಿಪ್ಪಮ್ಮ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಉರಿದುಂಬಿಸಿದರು.
ಕ್ರೀಡೆಗಳ ಆಯೋಜನೆ: ಬ್ಲೂಮೂನ್ ಪಬ್ಲಿಕ್ ಶಾಲೆ ವಾರ್ಷಿಕ ಕ್ರೀಡಾಕೂಟದಲ್ಲಿ ವೇಗದ ಓಟ, ಗೋಲಿ ಹುಡುಕು, ಚೆಂಡು ಸಂಗ್ರಹ, ಕಬಡ್ಡಿ, ರಿಂಗಓಟ ಸೇರಿದಂತೆ ಅನೇಕ ಆಟಗಳನ್ನು ಪುಟಾಣಿ ಮಕ್ಕಳಿಂದ ಪ್ರಾಥಮಿಕ ಶಾಲೆ ಮಕ್ಕಳವರೆಗೂ ಆಟವಾಡಿಸಲಾಯಿತು. ಪುಟಾಣಿ ಮಕ್ಕಳ ವೇಗದ ಓಟ ನೋಡುಗ ಪೋಷಕರಿಗೆ ಸಂತೋಷ ಮೂಡಿಸುವಂತಿತ್ತು.