ಕುಂದಾಪುರ: ಸರಕಾರಿ ನೌಕರರು ತಮ್ಮ ಕಾರ್ಯದ ಒತ್ತಡವನ್ನು ನಿವಾರಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಎಲ್ಲರೂ ಕೂಡ ಕೆಲಸದ ಒತ್ತಡದ ಮಧ್ಯೆಯೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಸಿಕ್ಕ ಅಲ್ಪ ಸಮಯದಲ್ಲಾದರೂ ವ್ಯಾಯಾಮದ ಮೂಲಕ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಪ್ರಯತ್ನಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಿವಿಮಾತು ಹೇಳಿದರು.
ರವಿವಾರ ಕಂದಾಯ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಕುಂದಾಪುರದ ಆಶ್ರಯದಲ್ಲಿ ತಾಲೂಕು ಆಡಳಿತದ ಸಹಯೋಗದಲ್ಲಿ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ರೆವೆನ್ಯೂ ಕಪ್ ಅನ್ನು ತ್ರೋಬಾಲ್ ಹಾಗೂ ಕ್ರಿಕೆಟ್ ಆಡುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಶುಭಹಾರೈಸಿದರು. ಕುಂದಾಪುರ ತಹಶೀಲ್ದಾರ್ ಎಚ್.ಕೆ. ತಿಪ್ಪೇಸ್ವಾಮಿ ಮಾತನಾಡಿ, ಕಂದಾಯ ಇಲಾಖೆಯ ನೌಕರರು ಯಾವಾಗಲೂ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುವವರು. ಅವರ ಮಾನಸಿಕ, ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ, ವ್ಯಾಯಾಮ ಸಹಕಾರಿಯಾಗಲಿದ್ದು, ಇಲ್ಲಿ ಸೋಲು- ಗೆಲುವಿಗಿಂತಲೂ ಕ್ರೀಡಾ ಮನೋಭಾವ ದಿಂದ ಪಾಲ್ಗೊಳ್ಳಿ ಎಂದರು.
ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಮಾತನಾಡಿದರು.
ಶ್ರದ್ಧಾಂಜಲಿ
ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ದಕ್ಷ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ, ಸಾಹೇಬ್ ಪಟೇಲ್, ಪರಶುರಾಮ್ ಅವರಿಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಪುಷ್ಪನಮನದ ಮೂಲಕ ಶ್ರದ್ದಾಜಲಿ ಸಲ್ಲಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಭರತ್ ವಿ. ಶೆಟ್ಟಿ ಸ್ವಾಗತಿಸಿ, ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ಅಶೋಕ್ ಕುಮಾರ್ ವಂದಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.