ಮುದ್ದೇಬಿಹಾಳ: ನಿತ್ಯವೂ ಒತ್ತಡದಲ್ಲಿ ಜನರ ಸೇವೆ ಸಲ್ಲಿಸುವ ಆರೋಗ್ಯ ಇಲಾಖೆ ಸಿಬ್ಬಂದಿ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ ಹೇಳಿದರು.
ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಜ. 26ರ ಗಣರಾಜ್ಯೋತ್ಸವ ಅಂಗವಾಗಿ ಆರಂಭಗೊಂಡ ಹೆಲ್ತ್ ಪ್ರೀಮಿಯರ್ ಲೀಗ್ (ಎಚ್ ಪಿಎಲ್) ಮುದ್ದೇಬಿಹಾಳ ಕ್ರಿಕೆಟ್ ಸೀಜನ್-3 ಪಂದ್ಯಾವಳಿಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ನೌಕರರು ಹಲವಾರು ಕೆಲಸಗಳ ಮಧ್ಯೆ, ಅದರಲ್ಲೂ ಇತ್ತೀಚಿನ ಕೋವಿಡ್‌ನಂಥ ಕಠಿಣ ಕೆಲಸದ ಒತ್ತಡದಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕ್ರೀಡೆ ಪುನಶ್ಚೇತನ ನೀಡುವಂಥದ್ದಾಗಿದೆ. ಇಲಾಖೆ ನೌಕರರೆಲ್ಲರೂ ಸೇರಿಕೊಂಡು ಏರ್ಪಡಿಸಿರುವ ಈ ಪಂದ್ಯಾವಳಿಯನ್ನು ರಜಾ ದಿನಗಳಲ್ಲಿ ಮಾತ್ರ ನಡೆಸಲು ನಿರ್ಧರಿಸಿರುವುದು ಒಳ್ಳೆ ವಿಚಾರವಾಗಿದೆ. ನೌಕರರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಮತ್ತು ಮನರಂಜನೆಗಾಗಿ ಪಾಲ್ಗೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಡಾ| ಬಾಬಾಸಾಹೇಬ ವಿಜಯದಾರ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ, ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾ ಧಿಕಾರಿ ಡಾ| ಶ್ರೀಶೈಲ್ ಹುಕ್ಕೇರಿ, ವಿಜಯಪುರದ ಜೆಒಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಆನಂದಗೌಡ ಬಿರಾದಾರ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಬಿ.ಬಿ. ದೇಸಾಯಿ ಮುಖ್ಯ ಅತಿಥಿಗಳಾಗಿದ್ದರು.
ಬಸವರಾಜ ಕೋರಡ್ಡಿ ಮೊದಲಿಗರಾಗಿ ಬ್ಯಾಟ್ ಬೀಸಿ ಪ್ರಥಮ ಪಂದ್ಯಕ್ಕೆ ಚಾಲನೆ ನೀಡಿದರು. ವಿಜಯಪುರ, ಸಿಂದಗಿ, ತಾಳಿಕೋಟೆ, ಹುನಗುಂದ ಮತ್ತು ಮುದ್ದೇಬಿಹಾಳ ಸೇರಿ ಒಟ್ಟು 13 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ವಿಜೇತ ತಂಡಕ್ಕೆ ಜ. 26 ರ ಗಣರಾಜ್ಯೋತ್ಸವ ದಿನದಂದು ಬಹುಮಾನ ವಿತರಿಸಿ ಪುರಸ್ಕರಿಸಲಾಗುತ್ತದೆ. ಪಂದ್ಯಾವಳಿಯ ಆಯೋಜಕರಾದ ಆರೋಗ್ಯ ಇಲಾಖೆಯ ಡಾ| ಎಂ.ಎಸ್. ಪಾಟೀಲ, ಡಾ| ಪ್ರವೀಣ ಸುಣಕಲ್ಲ, ಯಲ್ಲಪ್ಪ ಚಲವಾದಿ, ಎಂ.ಎಸ್. ಗೌಡರ, ಬಸವರಾಜ, ಸತೀಶ ಕುಲಕರ್ಣಿ, ವೀರೇಶ ಎಸ್ .ಬಿ., ಸುನೀಲ ನಿಂಬಾಳ, ಸಚಿನ ರಾಠೊಡ, ಹಮೀದ ಹಾಲ್ಯಾಳ, ಕೃಷ್ಣಾ ಚವ್ಹಾಣ, ಸಿದ್ದು ಬಿದಗೊಂಡ, ಎಸ್.ಸಿ. ರುದ್ರವಾಡಿ ಮತ್ತಿತರರು ಭಾಗವಹಿಸಿದ್ದರು.