ಮುಂಬಯಿ: ಅಣ್ಣ-ತಂಗಿಯರ ನಡುವಿನ ಬಾಂಧವ್ಯದ ಸಂಕೇತವಾದ ರಕ್ಷಾಬಂಧನವನ್ನು ಸೋಮವಾರ ಭಾರತದ ಕ್ರೀಡಾವಲಯದಲ್ಲೂ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ ಸಚಿನ್ ತೆಂಡುಲ್ಕರ್, ‘ಈ ವರ್ಷದ ರಕ್ಷಾ ಬಂಧನ ತುಸು ಭಿನ್ನ. ಇಲ್ಲೊಂದು ತಾತ್ಕಾಲಿಕ ಅಂತರ ಕಂಡುಬಂದಿದೆ. ಆದರೆ ಸಹೋದರಿಯೊಂದಿಗಿನ ಪ್ರೀತಿಯ ಬಂಧನ ಎಂದಿಗಿಂತ ಹೆಚ್ಚು ಗಟ್ಟಿಯಾಗಿದೆ’ ಎಂದಿದ್ದಾರೆ. ಜತೆಗೆ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
“ಎಲ್ಲ ಸೋದರ ಸೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು. ಇಷ್ಟು ಮಂದಿ ಸೋದರಿಯರು ನನ್ನ ಜತೆಯಲ್ಲಿರುವುದೇ ಒಂದು ಭಾಗ್ಯ. ಈ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳೋಣ’ ಎಂದು ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮ ಟ್ವೀಟ್ ಮಾಡಿದ್ದಾರೆ.
ಸುರೇಶ್ ರೈನಾ ತಮ್ಮ ಸೋದರಿ ರೇಣುಗೆ ರಕ್ಷಾ ಬಂಧನದ ಶುಭ ಸಂದೇಶ ರವಾನಿಸಿದ್ದಾರೆ. ‘ರೇಣು, ನೀನು ನನ್ನ ನೆಚ್ಚಿನ ಒಡನಾಡಿ. ಸದಾ ನಿನಗಾಗಿಯೇ ಇರುತ್ತೇನೆ. ನನ್ನೆಲ್ಲ ಸೋದರ ಸೋದರಿಯರೇ, ಈ ಪ್ರೀತಿಯ ಬಂಧನವನ್ನು ಸಂಭ್ರಮದಿಂದ ಆಚರಿಸೋಣ’ ಎಂದಿದ್ದಾರೆ.
ಬಾಕ್ಸರ್ ವಿಜೇಂದರ್ ಸಿಂಗ್ ತುಸು ಭಿನ್ನ ಶೈಲಿಯಲ್ಲಿ ರಕ್ಷಾಬಂಧನದ ಸಂದೇಶವನ್ನು ರವಾನಿಸಿದ್ದಾರೆ. ಅವರು ದೇಶ ಕಾಯುವ ಸೈನಿಕರಿಗೆ ಹಾಗೂ ಅನ್ನ ನೀಡುವ ರೈತರ ಒಳಿತನ್ನು ಹಾರೈಸಿದ್ದಾರೆ.