ತಿ.ನರಸೀಪುರ: ದೇಶವನ್ನು ಕಟ್ಟುವ ಕೆಲಸದಲ್ಲಿ ಯುವಕರನ್ನು ಕ್ರೀಯಾಶೀಲರಾಗಿಸಲು ಪಂಡಿತ್ ಧೀನದಯಾಳ್ ಉಪಾಧ್ಯಯರ ಜನ್ಮ ಶತಾಬ್ಧಿ ಪ್ರಯುಕ್ತ ದೇಶದಾದ್ಯಂತ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ಹಿಂ.ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜು ಕ್ರೀಡಾಂಗಣದಲ್ಲಿ ಬಿಜೆಪಿ ಹಿಂ.ವರ್ಗಗಳ ಮೋರ್ಚಾದಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಸ್ಫೂರ್ತಿ ತುಂಬುವ ಕ್ರೀಡಾಕೂಟಗಳಿಗೆ ಉತ್ತೇಜನ ನೀಡಬೇಕು. ಯುವಶಕ್ತಿಯನ್ನು ಸನ್ಮಾರ್ಗದಲ್ಲಿ ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದರು.
ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಯುವ ಸಮೂಹಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಕ್ರೀಡಾಕೂಟಗಳ ಜವಾಬ್ದಾರಿಯನ್ನು ಯುವ ಮೋರ್ಚಾಕ್ಕೆ ವಹಿಸಲಾಗಿದೆ. ಹಲವು ಕಡೆಗಳಲ್ಲಿ ಯುವ ಮೋರ್ಚಾದಿಂದಲೇ ದೇಶಿಯ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ನರಸೀಪುರದಲ್ಲಿ ವಿಶೇಷವಾಗಿ ಹಿಂ.ವರ್ಗಗಳ ಮೋರ್ಚಾದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬಿ.ಎಂ.ನಟರಾಜು ತಿಳಿಸಿದರು.
ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಮಾತನಾಡಿ, ಜನಸಂಘದ ಮೂಲಕ ದೇಶ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡು ಪಂಡಿತ್ ಧೀನದಯಾಳ್ ಉಪಾಧ್ಯಯರು ದೇಶಕ್ಕಾಗಿ ಜೀವ ನೀಡಿದ್ದಾರೆ ಎಂದರು. ಅವರ ಜನ್ಮ ಶತಾಬ್ಧಿ ಸಂದರ್ಭದಲ್ಲಿ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ದೇಶದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕ್ರೀಡಾಕೂಟಗಳನ್ನು ನಡೆಸುವ ಮೂಲಕ ಯುವಕರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಸದಸ್ಯ ಎಂ.ರಮೇಶ, ಬಿಜೆಪಿ ಹಿಂ.ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ, ಎಸ್ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎನ್.ರಂಗುನಾಯಕ, ಮುಖಂಡರಾದ ಬಿ.ಮಹೇಶ, ಪ್ರಸನ್ನ, ಸೋಮ, ಚಂದು, ಶಂಕರ್, ರಘು, ಅರಸು ಹಾಗೂ ಕ್ರೀಡಾ ಪಟುಗಳು ಹಾಜರಿದ್ದರು.