Advertisement

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

09:26 PM Sep 07, 2019 | Lakshmi GovindaRaju |

ನೆಲಮಂಗಲ: ಮನುಷ್ಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ. ಜತೆಗೆ ಉತ್ತಮ ಆರೋಗ್ಯ ವೃದ್ಧಿಗೂ ಸಹಾಯವಾಗುತ್ತದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ವಿವಿ ಅಂತರ್‌ಕಾಲೇಜು ಗುಡ್ಡಗಾಡು ಓಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಮಾತನಾಡಿದರು.

Advertisement

ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ದೈಹಿಕ ಹಾಗೂ ಮಾನಸಿಕವಾಗಿ ಬಲವಾಗಿದ್ದರೆ ಅವಕಾಶಗಳು ಬಹಳಷ್ಟಿದ್ದು, ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಲಭಿಸುವುದಲ್ಲದೆ ಸಾಧನೆಗೆ ಚೈತನ್ಯ ನೀಡುತ್ತದೆ. ದೇಶದಲ್ಲಿ ಈಗಾಗಲೇ ಸಕ್ಕರೆಕಾಯಿಲೆಯಂತಹ ಹತ್ತಾರು ರೋಗಗಳು ಮಾನವರನ್ನು ಚಿತ್ರಹಿಂಸೆ ನೀಡುತ್ತಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಕ್ರೀಡೆಗಳು ಔಷಧವಾಗಿದ್ದು, ದಿನದಲ್ಲಿ ಒಂದು ತಾಸು ಅಭ್ಯಾಸ ಮಾಡಬೇಕು. ಮುಂದಿನ ಭವಿಷ್ಯದ ನಿರ್ಮಾತೃಗಳಾದ ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಬೆಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವ ಅನೇಕ ಸೌಲಭ್ಯಗಳನ್ನು ವಿವಿ ನೀಡುತ್ತಿದೆ. ಸಾಧಕ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಸಾಧನೆಯ ಸಾವಿರಾರು ಕ್ರೀಡಾಪಟುಗಳು ತರಬೇತಿ ಕೊರತೆಯಿಂದ ಸ್ಪರ್ಧೆಯಲ್ಲಿ ನಿರಾಸಕ್ತರಾಗಿದ್ದಾರೆ. ಅಂತಹವರಿಗೆ ತರಬೇತಿ ನೀಡಿದರೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದರು.

ಪ್ರಶಸ್ತಿ ಪ್ರದಾನ: ಪಟ್ಟಣದ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಿಂದ ಬೆಂಗಳೂರು ವಿವಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂತರ್‌ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಪುರುಷ ವಿಭಾಗದಲ್ಲಿ ಬೆಂಗಳೂರಿನ ಸೇಂಟ್‌ ಕ್ಲಾರೆಟ್‌ ಪ್ರಥಮ ದರ್ಜೆ ಕಾಲೇಜು ಹಾಗೂ ಚಂದಾಪುರದ ಎಸ್‌.ವಿ.ಆರ್‌ ಕಾಲೇಜಿಗೆ ಚಾಂಪಿಯನ್‌ಶಿಪ್‌ ಪಡೆದುಕೊಂಡರು. ಇನ್ನೂ ಪುರುಷ ವಿಭಾಗದ ಗುಡ್ಡಗಾಡು ಸ್ಪರ್ಧೆಯಲ್ಲಿ ಬೆಂಗಳೂರಿನ ಕೆ.ಐ.ಎಂ.ಎಸ್‌.ಆರ್‌ ಕಾಲೇಜಿನ ಗೋಪಾಲ್‌ ಪ್ರಥಮ, ವಿಜಯ ಕಾಲೇಜಿನ ನವದೀಪ್‌ ದ್ವಿತೀಯ, ಸುರಾನಾ ಕಾಲೇಜಿನ ಅಂಕುರ್‌ಸಿಂಗ್‌ ತೃತೀಯ ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ಸುರಾನಾ ಕಾಲೇಜಿನ ಮಾನ್ಯಾ ಕೆ.ಎಂ ಪ್ರಥಮ, ಕೆ.ಐ.ಎಂ.ಎಸ್‌.ಆರ್‌ ಕಾಲೇಜಿನ ಹರ್ಷಿತಾ ದ್ವಿತೀಯ, ಎಸ್‌ಐಎಂಎಸ್‌ಆರ್‌ ಕಾಲೇಜಿನ ವೈಭವಿ ತೃತೀಯ ಸ್ಥಾನ ಪಡೆದಿದ್ದು ವಿಜೇತರಿಗೆ ಶಾಸಕ ಶ್ರೀನಿವಾಸಮೂರ್ತಿ ಬಹುಮಾನ ವಿತರಣೆ ಮಾಡಿದರು. ಜಿಪಂ ಸದಸ್ಯ ತಿಮ್ಮರಾಯಪ್ಪ, ಪ್ರಾಂಶುಪಾಲ ಡಾ.ಎಂ.ಎಸ್‌. ಶಿವಪ್ರಕಾಶ್‌, ಕಾಲೇಜು ವಿದ್ಯಾರ್ಥಿ ಶಿವಕುಮಾರ್‌, ಎನ್‌ಎಸ್‌ಎಸ್‌ ಅಧಿಕಾರಿ ಗಂಗರಾಜು, ಮಾಲಿನಿ, ಚನ್ನಪ್ಪ, ಆನಂದ್‌, ಉದಯ್‌ಕುಮಾರ್‌, ಪ್ರಕಾಶ್‌, ಕೋಮಲಾ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next