ಲೋಕಾಪುರ: ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಲು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಉದಪುಡಿ ಇನ್ನೋವೇಟಿವ್ ಫೌಂಡೇಶನ್ ಅಧ್ಯಕ್ಷ ಡಾ| ಕೆ.ಎಲ್. ಉದಪುಡಿ ಹೇಳಿದರು.
ಪಟ್ಟಣದ ಅಕ್ಷರ ಅಕಾಡೆಮಿ ಶಾಲಾ ಆವರಣದಲ್ಲಿ ನಡೆದ ಲಕ್ಷಾನಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಿಂದ ತಾಳ್ಮೆ ಹಾಗೂ ಏಕಾಗ್ರತೆ ಸಾಧ್ಯ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಕುರಣಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಮತ್ತು ಗೆಲವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನು ಸಮನಾಗಿ ಸ್ವೀಕರಿಸುವ ಮನೋಭಾವ ವನ್ನು ಕ್ರೀಡಾಪಟುಗಳು ಹೊಂದಿದ್ದರೆ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು.
ಸಿಆರ್‌ಪಿ ಗಂಗಾಧರ ಗಾಣಿಗೇರ ಮಾತನಾಡಿ, ಕೋರೋನಾ ಪರಿಣಾಮದಿಂದ ಎರಡು ವರ್ಷಗಳ ಕಾಲ ಶೈಕ್ಷಣಿಕ ಚಟುವಟಿಕೆ ನಡೆಯದಿರುವುದು ಮಕ್ಕಳಲ್ಲಿ ಉತ್ಸಾಹ, ಚೇತರಿಕೆ ಕಡಿಮೆಯಾಗಿತ್ತು. ಈ ಕ್ರೀಡಾಕೂಟದಿಂದ ಮಕ್ಕಳ ಮುಖದಲ್ಲಿ ನಗೆ ಕಾಣಬಹುದು ಎಂದು ಹೇಳಿದರು.
ಉದಪುಡಿ ಇನ್ನೋವೇಟಿವ್ ಫೌಂಡೇಶನ್ ನಿರ್ದೇಶಕ ಗುರುರಾಜ ಉದಪುಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಳುಗಳಿಗೆ ದೈಹಿಕ ಶಿಕ್ಷಕ ದಾಸನಗೌಡರ ಪ್ರಮಾಣವಚನ ಬೋ ಸಿದರು. ಸಿಆರ್‌ಪಿ ಕೆ.ಎಲ್. ಮಾಳೇದ, ಸುರೇಶ ಹರಕಂಗಿ, ಆದರ್ಶ ವಿದ್ಯಾಲಯ ಮುಖ್ಯಶಿಕ್ಷಕ ಎಸ್.ಕೆ. ಸತ್ತಿಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ಬೆಳಗಲಿ, ಎಸ್. ಎಂ. ರಾಮದುರ್ಗ, ಎಸ್.ಡಿ. ನೀಲಗುಂದ, ಆನಂದ ಪೂಜಾರಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸದಾಶಿವ ಉದಪುಡಿ, ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಬಟಕುರ್ಕಿ, ಮುತ್ತು ತುಂಗಳ, ಮುಖ್ಯಶಿಕ್ಷಕ ಪ್ರಭಾಕರ ದರ್ಜೆ ಇದ್ದರು.