ಯಲಬುರ್ಗಾ: ಇಂಟರ್‌ನೆಟ್ ವ್ಯಸನಕ್ಕೆ ತುತ್ತಾಗಿರುವ ಯುವಕರು ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಫೇಮಸ್ ಕ್ರಿಕೆಟ್ ಕ್ಲಬ್ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಆಸಕ್ತಿಯಿಂದ ತೊಡಗಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆಯವರು ಯುವಕರಲ್ಲಿ ಕ್ರೀಡಾಭಿಮಾನ ಹೆಚ್ಚು ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಯುವಕರು ದುಶ್ಚಟಗಳಿಗೆ ಅಂಟಿಕೊಂಡು ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೇ, ಕ್ರೀಡೆಯಲ್ಲಿ ತೊಡಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ವನಮಿತ್ರ ಪ್ರಶಸ್ತಿ ವಿಜೇತ ರಮೇಶ ಬಳೊಟಗಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಅವುಗಳನ್ನು ಉಳಿಸಿ ಬೆಳೆಸಬೇಕು. ನಿತ್ಯ ಕ್ರೀಡೆಗೆ ಆದ್ಯತೆ ನೀಡಬೇಕು. ದೈಹಿಕ ಬೆಳವಣಿಗೆ ಕ್ರೀಡೆ ಹೆಚ್ಚು ಪೂರಕವಾಗಿದೆ ಎಂದರು.
ವರ್ತಕ ಸಂಗಣ್ಣ ಟೆಂಗಿನಕಾಯಿ, ಪಪಂ ಸದಸ್ಯ ವಸಂತ ಬಾವಿಮನಿ, ಡಾ| ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಈರಪ್ಪ ಬಣಕಾರ, ಬಸವರಾಜ ಮ್ಯಾಗೇರಿ, ಪೇದೆ ಪ್ರಕಾಶ ಮಾನಶೆಟ್ಟರ್, ಸಂಗಪ್ಪ ಕೊಪ್ಪಳ, ಯಲ್ಲಪ್ಪ ಲಮಾಣಿ, ಪ್ರಕಾಶ ಛಲವಾದಿ ಇತರರಿದ್ದರು.