Advertisement

ಹದ ತಪ್ಪಿದ ಮಾತು- ಹಳಿ ತಪ್ಪಿದ ಚರ್ಚೆ

09:10 AM Dec 15, 2017 | |

ಹಿಂದೆಲ್ಲಾ ಚುನಾವಣಾ ಪ್ರಣಾಳಿಕೆಗಳಿಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಪಕ್ಷಗಳಲ್ಲಿರುವ ಮೇಧಾವಿಯೆನಿಸಿದ ಹಿರಿತಲೆಗಳಿಗೆ ಪ್ರಣಾಳಿಕೆ ತಯಾರಿಯ ಕೆಲಸ ನೀಡಲಾಗುತ್ತಿತ್ತು. ಇತ್ತೀಚೆಗೆ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವ ಕಳೆದುಕೊಂಡಿವೆ. ವರ್ಚಸ್ವಿ ನಾಯಕತ್ವದ ಮುಂದೆ ರಾಜಕೀಯ ಪ್ರಣಾಳಿಕೆಗಳು ಮಂಡಿಯೂರಿವೆ.

Advertisement

ಪ್ರಜಾಪ್ರಭುತ್ವದ ಪರ್ವಗಳೆನಿಸಿದ ಚುನಾವಣೆಗಳಲ್ಲಿ ಆರೋಗ್ಯಕರ ಚರ್ಚೆಗಿಂತ ರಾಜಕೀಯ ಪಕ್ಷಗಳು ಪರಸ್ಪರ ಇದಿರಾಳಿಯನ್ನು ಹೀಯಾಳಿಸುವ, ಹಣಿಯುವ ತಂತ್ರಕ್ಕೆ ಶರಣಾಗುತ್ತಿರುವುದರಿಂದ ಚುನಾವಣಾ ಚರ್ಚೆಗಳು ಹಳಿ ತಪ್ಪುತ್ತಿವೆ. ಹಿಂದೊಮ್ಮೆ ನರೇಂದ್ರ ಮೋದಿಯನ್ನು ಚಹಾ ಮಾರಲು ಯೋಗ್ಯ ಎನ್ನುವ ಟೀಕೆ ಮಾಡಿ ವಿಪಕ್ಷಕ್ಕೆ ದೊಡ್ಡ ಅಸ್ತ್ರವನ್ನೇ ಒದಗಿಸಿದ್ದ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಇತ್ತೀಚೆಗೆ,  ಮೋದಿ ನೀಚ ವ್ಯಕ್ತಿ ಎಂದು ಟೀಕಿಸಿ ಪಕ್ಷದ ಒಳ ಹೊರಗಿನವರೆಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚುನಾವಣೆಗಳಲ್ಲಿ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳ ಬದಲಾಗಿ ಆರೋಪ ಪ್ರತ್ಯಾರೋಪಗಳಿಂದ ಜನತೆಯನ್ನು ತಮ್ಮೆಡೆಗೆ ಒಲಿಸಿಕೊಳ್ಳುವ ಕೀಳು ತಂತ್ರವನ್ನೇ ಎಲ್ಲಾ ರಾಜಕೀಯ ಪಕ್ಷಗಳು ನೆಚ್ಚಿಕೊಂಡಂತಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವಿರುದ್ಧª ಮಾಡಲಾದ ಚಹಾ ಮಾರುವ ಮೂದಲಿಕೆಯನ್ನೇ ಉಪಯೋಗಿಸಿಕೊಂಡು ಚಾಯ್‌ ಪೇ ಚರ್ಚಾ ನಡೆಸಿ ಬಿಜೆಪಿ ತನ್ನ ಗೆಲುವಿನ ದಾರಿಯನ್ನು ಕಂಡುಕೊಂಡಿತು. ಜನತೆಯೊಂದಿಗೆ ಸಂಪರ್ಕವಿಟ್ಟುಕೊಳ್ಳದ, ಕೇವಲ ಚುನಾವಣೆಯ ಹೊತ್ತಿನಲ್ಲಿ ಕ್ಷೇತ್ರ ದರ್ಶನಕ್ಕೆ ಬರುವ ಹೆಚ್ಚಿನ ಜನಪ್ರತಿನಿಧಿಗಳು ನಾಯಕರ ವರ್ಚಸ್ಸು, ಅನುಕಂಪ, ಹಣ ಬಲ, ಜಾತಿ-ಮತಸ್ಥರ ಬೆಂಬಲ, ಎದುರಾಳಿಯ ವಿರುದ್ಧ ಅಪಪ್ರಚಾರಗಳೇ ಮುಂತಾದ ತಂತ್ರಗಳಿಂದ ಚುನಾವಣಾ ವೈತರಣಿ ದಾಟುವ ಪ್ರಯತ್ನದಲ್ಲಿರುತ್ತಾರೆ.

ಮಹತ್ವ ಕಳೆದುಕೊಂಡ ಚುನಾವಣಾ ಪ್ರಣಾಳಿಕೆಗಳು
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ತಾವು ಅನುಷ್ಠಾನಕ್ಕೆ ತರಲಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನೊಳಗೊಂಡ ಭರಪೂರ ಆಶ್ವಾಸನೆಗಳಿರುವ ಚುನಾವಣಾ ಪ್ರಣಾಳಿಕೆಯನ್ನು ಜನತೆಯ ಮುಂದಿಡುತ್ತವೆ. ಅಧಿಕಾರಕ್ಕೆ ಬಂದ ಮೇಲೆ ಈ ಪ್ರಣಾಳಿಕೆಯನ್ನು ಮರೆತು ಬಿಡುತ್ತವೆ. ಪಕ್ಷಗಳ ಕಾರ್ಯಕ್ರಮಗಳು ಮತ್ತು ಆಕರ್ಷಕ ಯೋಜನೆಗಳು ಕಾಗದದಲ್ಲೇ ಉಳಿದುಬಿಡುತ್ತವೆ. ಮತ್ತೆ ಅವುಗಳ ನೆನಪು ಬರುವುದು ಮುಂದಿನ ಚುನಾವಣೆಯಲ್ಲೇ. ಹಿಂದೆಲ್ಲಾ ಚುನಾವಣಾ ಪ್ರಣಾಳಿಕೆಗಳಿಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಪಕ್ಷಗಳಲ್ಲಿರುವ ಮೇಧಾವಿಯೆನಿಸಿದ ಹಿರಿತಲೆಗಳಿಗೆ ಪ್ರಣಾಳಿಕೆ ತಯಾರಿಯ ಕೆಲಸ ನೀಡಲಾಗುತ್ತಿತ್ತು. ಇತ್ತೀಚೆಗೆ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವ ಕಳೆದುಕೊಂಡಿವೆ. ವರ್ಚಸ್ವಿ ನಾಯಕತ್ವದ ಮುಂದೆ ರಾಜಕೀಯ ಪ್ರಣಾಳಿಕೆಗಳು ಮಂಡಿಯೂರಿವೆ. ಚುನಾವಣಾ ಭರವಸೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. 

ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಬಲ್ಲವರಿಗೆ ಎಲ್ಲಾ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿವೆ. ಕ್ಷೇತ್ರೀಯ ಪ್ರಭಾವದ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಟಿಕೇಟುಗಳನ್ನು ಮಾರಿಕೊಂಡ ಆಪಾದನೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಈ ಹಿಂದೆ ಕೇಳಿ ಬಂದಿತ್ತು. ರಾಜ್ಯದಲ್ಲೂ ಕೆಲವು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೂಟ್‌ಕೇಸ್‌ಗಳು ಪ್ರಮುಖ ಪಾತ್ರ ವಹಿಸುತ್ತಿರುವುದರ ಕುರಿತು ಸಾಕಷ್ಟು ವದಂತಿಗಳು ಕೇಳಿ ಬಂದಿದ್ದವು. ಈ ಎಲ್ಲಾ ಕಾರಣಗಳಿಂದ ಸ್ಥಳೀಯ ಸಂಸ್ಥೆಗಳಿಂದ ಮೊದಲ್ಗೊಂಡು ಸಂಸತ್ತಿನವರೆಗಿನ ಚುನಾವಣೆಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಕುರಿತು ಮತದಾರರಲ್ಲಿ ಸಾಕಷ್ಟು ಗೊಂದಲಗಳಿರುತ್ತವೆ. ಕೆಲವೊಮ್ಮೆ ಆಯ್ಕೆಯ ಅವಕಾಶವೂ ಸೀಮಿತವಾಗಿರುತ್ತದೆ. ಹಣದ ಪ್ರಭಾವಳಿಯ ಚುನಾವಣಾ ರಾಜಕಾರಣದಲ್ಲಿ ಮತದಾರ ಗೊಂದಲಕ್ಕೊಳಗಾಗಿದ್ದಾನೆ. 

ಜನರ ನಿರೀಕ್ಷೆಗಳು ಹೇಗಿರಬೇಕು?
ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿರುವೆ ಎನ್ನುವ ಉದಾತ್ತ ಚಿಂತನೆ ಎಷ್ಟು ಜನರಲ್ಲಿದೆ? ಚುನಾಯಿತ ಸರ್ಕಾರಗಳ ಸಾಧನೆಗಳ ಮೌಲ್ಯಮಾಪನ ಮಾಡುವಾಗ, ನಾವು ನಮಗೆ ಸರಕಾರ ಏನು ಮಾಡಿದೆ? ಏನು ಕೊಟ್ಟಿದೆ? ಎನ್ನುವ ಆಲೋಚನೆ ಮಾಡುವ ಬದಲಾಗಿ ಸರ್ಕಾರ 5 ವರ್ಷಗಳಲ್ಲಿ ತನ್ನ ಮೂಲ ಕರ್ತವ್ಯವಾದ ಕಾನೂನು ಮತ್ತು ಶಾಂತಿ ಪಾಲನೆ ಹೇಗೆ ಕಾಪಾಡಿದೆ? ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೇ ಕಾರ್ಯ ನಿರ್ವಹಿಸಿದೆಯೇ? ರಸ್ತೆ, ಆರೋಗ್ಯ, ಶಿಕ್ಷಣ, ವಿದ್ಯುತ್‌ ಮುಂತಾದ ಮೂಲಸೌಕರ್ಯ ಒದಗಿಸುವಲ್ಲಿ ಎಷ್ಟರ ಮಟ್ಟಿಗೆ ದಕ್ಷತೆಯಿಂದ ಕಾರ್ಯ ನಿರ್ವಹಿಸಿದೆ? ಕೃಷಿ, ಉದ್ಯಮ, ವ್ಯಾಪಾರ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿದೆ? ನಿರುದ್ಯೋಗ, ಬಡತನ ನಿವಾರಣೆಯಂತಹ ಮಹತ್ವಪೂರ್ಣ ಕಾರ್ಯಗಳಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆಯೇ ಅಥವಾ ವೋಟ್‌ ಬ್ಯಾಂಕ್‌ ರಾಜನೀತಿ ಅನುಸರಿಸಿದೆಯೇ ಎಂದು ಯೋಚಿಸುತ್ತೇವೆಯೇ? 

Advertisement

ಇನ್ನು ಕೇಂದ್ರ ಸರ್ಕಾರದ ಮೌಲ್ಯಮಾಪನ ಮಾಡುವಾಗ ನಮ್ಮ ಸಂಸದರು ಸಂಸತ್ತಿನಲ್ಲಿ ಎಷ್ಟರ ಮಟ್ಟಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ತತ್ಪರತೆಯನ್ನು ತೋರಿದ್ದಾರೆ? ರಾಷ್ಟ್ರ ರಕ್ಷಣೆ, ರಾಷ್ಟ್ರ ಸಮ್ಮಾನದ ವಿಷಯದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿದೆ? ವಿದೇಶ ನೀತಿ ಎಷ್ಟರ ಮಟ್ಟಿಗೆ ಸಫ‌ಲತೆ ಕಂಡಿದೆ? ದೇಶದ ಆರ್ಥಿಕ ಪ್ರಗತಿ ಹೇಗಿದೆ? ಔದ್ಯೋಗಿಕ ವಿಕಾಸದ ಸ್ಥಿತಿಗತಿಗಳೇನು? ನೀತಿ ನಿರ್ಧಾರಗಳಲ್ಲಿ ಪಾರದರ್ಶಕತೆ ಮತ್ತು ಪರಿಶುದ್ಧತೆ ಇದೆಯೇ ಎಂದೆಲ್ಲಾ ಯೋಚಿಸುತ್ತೇವೆಯೇ? ದುರದೃಷ್ಟವಶಾತ್‌ ಇಂತಹ ಚಿಂತನೆ ನಮ್ಮ ಮತದಾರರ ದೊಡ್ಡ ವರ್ಗದಲ್ಲಿ ಇಲ್ಲ. ನಮ್ಮ ಯೋಚನಾ ಲಹರಿ ವೈಯಕ್ತಿಕ ಲಾಭ ನಷ್ಟಗಳಿಗೆ ಸೀಮಿತವಾಗಿಬಿಡುತ್ತದೆ. ಸರ್ಕಾರ ನಮಗೆ ಲಾಭವಾಗುವ ಯಾವ ಯೋಜನೆಯನ್ನೂ ಮಾಡಲಿಲ್ಲವೆಂದು ದುಃಖೀತರಾಗುತ್ತೇವೆ. ನಮ್ಮ ಸಮುದಾಯಕ್ಕೆ ನಿರೀಕ್ಷಿಸಿದ ಪ್ರಾಮುಖ್ಯತೆ ಸಿಗಲಿಲ್ಲವೆಂದು ಮುನಿಸಿಕೊಳ್ಳುತ್ತೇವೆ. ಜಾತಿ-ಮತ-ಧರ್ಮಗಳ ಸುಳಿಯಲ್ಲಿ ಸಿಲುಕಿ ಸಂಕುಚಿತವಾಗಿ ಆಲೋಚಿಸುತ್ತೇವೆ.

ನಮ್ಮ ಕೆಲಸಗಳಿಗಾಗಿ ನಮಗೆ ಓಟು ಕೊಡಿ ಎಂದು ಕೇಳುವ ನೈತಿಕ ಬಲ ಯಾವ ರಾಜಕೀಯ ಪಕ್ಷಗಳಲ್ಲೂ ಇಲ್ಲ. ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಎನ್ನುವಂತೆ ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಭಾಗ್ಯಗಳನ್ನು ನೀಡುವ, ದೂರದರ್ಶಿತ್ವ ಇಲ್ಲದ ಯೋಜನೆಗಳನ್ನು ಜಾರಿಗೆ ತರುವ, ಐಷರಾಮಿ ಜೀವನ ನಡೆಸಿ ತಮ್ಮ ಮುಂದಿನ ಹಲವಾರು ಪೀಳಿಗೆಗಳಿಗಾಗುವಷ್ಟು ಹಣ, ಸಂಪತ್ತು ಕೂಡಿಡುವ ರಾಜಕಾರಣಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಗ್ರಹಣ ಬಡಿದಂತಾಗಿದೆ. ಸ್ವಾತಂತ್ರ್ಯ ದೊರೆತು ಏಳು ದಶಕಗಳೇ ಸಂದರೂ ನೀರು, ವಿದ್ಯುತ್‌, ರಸ್ತೆಯಂತಹ (ಪಾನಿ, ಬಿಜಲಿ, ಸಡಕ್‌) ಮೂಲಸೌಕರ್ಯಕ್ಕಾಗಿ ಕಾತರಿಸುತ್ತಿರುವ ಅಸಂಖ್ಯ ಹಳ್ಳಿಗಳು ಇನ್ನೂ ಇವೆ. ಅಯೋಮಯ ಶಿಕ್ಷಣ, ಅಸಮರ್ಪಕ ನಾಗರಿಕ ಸೇವೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ವ್ಯವಸ್ಥೆಯ ವಿರುದ್ಧ ಜನರಲ್ಲಿ ಅಪಾರ ರೋಶ ಮಡುಗಟ್ಟಿದ್ದರೂ ಚುನಾವಣಾ ಚರ್ಚೆಗಳು ಹಳಿ ತಪ್ಪುತ್ತಿವೆ. ಜಾತಿ ಮತಗಳ ಸ್ವಾರ್ಥಚಿಂತನೆ ಬಿಟ್ಟು ರಾಷ್ಟ್ರ ಹಿತ ಚಿಂತನೆಯ ಕುರಿತು ಜಾಗೃತಿ ಉಂಟಾಗುವವರೆಗೆ ಚುನಾವಣಾ ಚರ್ಚೆಗಳಲ್ಲಿ ನೀಚ, ಚಹಾ ಮಾರುವವ, ರಕ್ತದ ವ್ಯಾಪಾರಿಯಂತಹ ವಿಚಾರಗಳೇ ಪ್ರಾಮುಖ್ಯತೆ ಪಡೆದುಕೊಂಡು ನಿಜವಾಗಿ ನಡೆಯಬೇಕಾದ ಚರ್ಚೆ ನಡೆಯದೇ ಉಳಿದುಬಿಡುತ್ತವೆ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next