ಸೇಡಂ: ಬಿರ್ಲಾ ಒಡೆತನದ ಇಲ್ಲಿನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಷರತ್ತುಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಕಾರ್ಖಾನೆ ಪ್ರಾರಂಭಕ್ಕೂ ಮುನ್ನ ಜನರಿಗೆ ನೀಡಿದ ಭರವಸೆ, ಪರಿಸರ ಕಾಳಜಿ ಮರೆತು ವರ್ತಿಸುತ್ತಿರುವ ಕಾರ್ಖಾನೆ ಆಡಳಿತದ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ರವಿವಾರ ಮಧ್ಯರಾತ್ರಿ ಕಾರ್ಖಾನೆಯಿಂದ ದಟ್ಟ ಹೊಗೆ ಹೊರಹೊಮ್ಮಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೋಮವಾರ ಮುಂಜಾವು ಕಾರ್ಖಾನೆ ಸುತ್ತಲೂ ಇರುವ ಐದಾರು ಕಿ.ಮೀ. ಅಂತರದ ಮನೆಗಳಲ್ಲಿ ಅರ್ಧ ಇಂಚಿನಷ್ಟು ಸಿಮೆಂಟಿನ ಧೂಳು ಶೇಖರಣೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರತಿನಿತ್ಯ ಪಟ್ಟಣದ ಬಹುತೇಕ ಮನೆಗಳಲ್ಲಿ ವಾಸವದತ್ತಾ ಹೊರದೂಡುವ, ಹಾನಿಕಾರಕ ಧೂಳು ಕಂಡು ಬರುತ್ತಿದೆ. ಆದರೆ ರವಿವಾರ ಏಕಾಏಕಿ ದುಪ್ಪಟ್ಟು ಧೂಳು ಮನೆಗಳಿಗೆ ನುಗ್ಗಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಭೂಕಂಪದ ಅನುಭವ: ವಾಸವದತ್ತಾ ಸಿಮೆಂಟ್ ಕಾರ್ಖಾನೆ ತನ್ನ ಗಣಿಗಾರಿಕೆಯನ್ನು ಮಿತಿ ಮೀರಿ ನಡೆಸುತ್ತಿದೆ ಎನ್ನುವ ಅನುಮಾನ ಕೆಲ ಪುರಾವೆಯಿಂದ ಸಾಬೀತಾಗುತ್ತಿದೆ. ನಿಗದಿತ ಸಮಯಕ್ಕಿಂತಲೂ ಹೆಚ್ಚಾಗಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎನ್ನು ಆರೋಪಗಳು ಕೇಳಿಬರುತ್ತಿವೆ.
ಅಲ್ಲದೆ ಪ್ರತಿನಿತ್ಯ ಮೂರ್‍ನಾಲ್ಕು ಬಾರಿ ಕಾರ್ಖಾನೆಯಿಂದ ನಾಲ್ಕೈದು ಕಿಮೀ ದೂರದಲ್ಲಿರುವ ಮನೆಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗುತ್ತಿದೆ. ಕಾರ್ಖಾನೆಗೆ ಸಮೀಪದಲ್ಲಿರುವ ಕೆಲ ಮನೆಗಳಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ, ಸ್ಥಳೀಯ ಅಧಿಕಾರಿಗಳಾಗಲಿ ಅಥವಾ ಕಾರ್ಖಾನೆ ಅಧಿಕಾರಿಗಳಾಗಲಿ ಈ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ.
ರೈಲು ಹಳಿಯಿಂದ ಪರದಾಟ: ಪಟ್ಟಣದ ಮಧ್ಯಭಾಗದಿಂದ ಕಾರ್ಖಾನೆಗೆ ಹಾಯ್ದು ಹೋಗಿರುವ ರೈಲು ಹಳಿಯಿಂದಲೂ ಪ್ರತಿನಿತ್ಯ ಸಾರ್ವಜನಿಕರು ಪರಿತಪಿಸುವಂತಾಗಿದೆ. ರೈಲು ಹಳಿ ಹಾಯ್ದು ಹೋಗಿರುವ ಕೆಇಬಿ ಕಾಲೋನಿ, ಮುಖ್ಯ ರಸ್ತೆ, ವೆಂಕಟೇಶ ನಗರ ನಿವಾಸಿಗಳು ಪರದಾಡುವಂತಾಗಿದೆ.
* ಶಿವಕುಮಾರ ಬಿ. ನಿಡಗುಂದಾ