– ಶ್ರೀಮದ್ಭಗವದ್ಗೀತೆ
ಅಧ್ಯಾತ್ಮವೆ ನಿಚಿತ ಪ್ರಯೋಜನವೆನಗೆ
– ರತ್ನಾಕರವರ್ಣಿ
ಕಳೆದ ಐವತ್ತು ವರ್ಷಗಳ ಹಿಂದಿನ ಸಂದರ್ಭ! ಆಗ ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ಸಂಗೀತ ಮತ್ತು ಸಾಹಿತ್ಯ ನನ್ನ ಮನಸ್ಸನ್ನು ಗಾಢವಾಗಿ ಆವರಿಸಿಕೊಂಡಿದ್ದ ದಿನಗಳು. ಅವು ನನ್ನನ್ನು ಹಿಂಬಾಲಿಸುತ್ತಿದ್ದವು; ಇಲ್ಲ , ನಾನೇ ಅವುಗಳನ್ನು ಹಿಂಬಾಲಿಸುತ್ತಿದ್ದೆನೇನೊ. ನಮ್ಮ ಮನೆಯ ಕರಿಯಜ್ಜಿ, ನಮ್ಮ ತಂದೆಯ ತಾಯಿ ಹಾಗೂ ನನ್ನ ದೊಡ್ಡಪ್ಪನ ಹೆಂಡತಿ ಇಬ್ಬರಿಗೂ ನನ್ನನ್ನು ಕಂಡರೆ ಕಕ್ಕುಲಾತಿ! ನಮ್ಮ ಅಜ್ಜಿ ಸ್ವಾರಸ್ಯಕರವಾಗಿ ಹತ್ತಾರು ಕತೆಗಳನ್ನು ಹೇಳುತ್ತಿದ್ದಳು. ಅವಳು ಹೇಳಿದ ಕತೆಗಳ ಬೆನ್ನುಹತ್ತಿ ವಿಹರಿಸುತ್ತಿದ್ದೆ. ಅವು ನನ್ನ ಕನಸಿನಲ್ಲೂ ಲಗ್ಗೆ ಹಾಕುತ್ತಿದ್ದವು. ನಮ್ಮ ದೊಡ್ಡಮ್ಮ ಸುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡುತ್ತಿದ್ದಳು. ನಾನು ಆಕೆಯಿಂದ ಮೊತ್ತಮೊದಲು ಗೋವಿನ ಹಾಡು ಕೇಳಿದ್ದೆ. ಆಕೆ ಅದನ್ನು ಎಲ್ಲಿಂದ ಕಲಿತಳೊ ನನಗೆ ತಿಳಿಯದು! ನಾನು ಮಾಧ್ಯಮಿಕ ತರಗತಿಯಲ್ಲಿ ಇದ್ದಾಗಲೇ ಅವಳು ಹೇಳುತ್ತಿದ್ದ ನೆನಪು! ನಾನು ದೊಡ್ಡಮ್ಮನ ಹಾಡಿಗೆ ಮರುಳಾದದ್ದು ಉಂಟು. ಆಕೆ ಸ್ವಲ್ಪಒರಟಾದ ಹೆಂಗಸು. ಆದರೆ, ನಾನು ಎಲೆ-ಅಡಿಕೆ ಕೊಟ್ಟು ಗೀತೆಗಳನ್ನು ಅವಳಿಂದ ಕೇಳುತ್ತಿದ್ದೆ. ಇದು ನಾನು ಚಿಕ್ಕಂದಿನಲ್ಲಿಯೇ ಸಾಹಿತ್ಯ-ಸಂಗೀತದ ಕಡೆ ಒಲಿದ ಕ್ಷಣಗಳು. ಐವತ್ತು ವರ್ಷಗಳ ಹಿಂದಿನ ಆ ನೆನಪು ಇನ್ನೂ ಹಸುರಾಗಿದೆ.
Advertisement
ಪ್ರೌಢಶಾಲೆಯಲ್ಲಿದ್ದಾಗ ಹರಿಶ್ಚಂದ್ರಕಾವ್ಯ ಮತ್ತು ಲಕ್ಷ್ಮೀಶನ ಜೈಮಿನಿಭಾರತ ನನ್ನ ಅಚ್ಚುಮೆಚ್ಚಿನ ಕಾವ್ಯಗಳಾಗಿದ್ದುವು. ಆ ಕಾವ್ಯಗಳನ್ನು ಹೇಗೋ ಸಂಪಾದಿಸಿಕೊಂಡು ಓದಿದ್ದರ ನೆನಪು. ನನಗೆ ಈ ಕಾವ್ಯಗಳನ್ನು ಕೊಟ್ಟು ಓದಿಸಿದವರು ನೆಲಮಂಗಲದ ಅಡೇಪೇಟೆಯಲ್ಲಿ ಸಣ್ಣದಾದ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡಿದ್ದ ಒಬ್ಬ ಶೆಟ್ಟರು! ಅವರ ಹೆಸರು ನೆನಪಿಲ್ಲ. ಅವರು ಲಕ್ಷ್ಮೀಶನ ಜೈಮಿನಿಭಾರತದ ಹಳೆಪ್ರತಿಯೊಂದನ್ನು ಓದಲು ನೀಡಿದರು. ಅನಂತರ ತಮ್ಮಲ್ಲಿದ್ದ ಇನ್ನಷ್ಟು ಕೃತಿಗಳನ್ನು ಕೊಟ್ಟರು. ಆ ಹಳೆಯ ಸುಂದರ ನೆನಪುಗಳು ನನ್ನ ಹೃದಯದಲ್ಲಿ ತುಂಬಿ ನಿಂತಿವೆ! ಅದೇ ರೀತಿ ದೇವಾಂಗ ಬೀದಿಯಲ್ಲಿದ್ದ ಒಬ್ಬ ಗೃಹಸ್ಥರು ಹರಿಶ್ಚಂದ್ರಕಾವ್ಯವನ್ನು ಕೊಟ್ಟು ಓದಿಸಿದ್ದು ಅಚ್ಚಳಿಯದೇ ಉಳಿದಿದೆ. ನಾನು ಇಂಥವರ ಜತೆ ಓಡಾಡುವಾಗ ನಾನೇನೊ ಸಾಧಿಸುತ್ತಿದ್ದೇನೆಂಬ ಭಾವ ಒತ್ತರಿಸಿಕೊಂಡು ಬರುತ್ತಿತ್ತು. ನಾನು ಹನ್ನೊಂದನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗ, ನಮಗೆ ಅರ್ಥಶಾಸ್ತ್ರದ ಪಾಠವನ್ನು ಹೇಳುತ್ತಿದ್ದ ಆರ್.ಎಂ. ಶಿವಕುಮಾರ ಆರಾಧ್ಯರಿಗೆ ನನ್ನನ್ನು ಕಂಡರೆ ಅತೀವ ಪ್ರೀತಿ. ಅವರು ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದರು. ನನಗೆ ಓದುವ ಚಪಲ. ಅವರು ಸಂಜೆ ನನ್ನನ್ನು ಗ್ರಂಥಾಲಯಕ್ಕೆ ಬಿಟ್ಟು, ಬೀಗಹಾಕಿಕೊಂಡು ಆಟವಾಡಲು ಹೋಗುತ್ತಿದ್ದರು. ನಾನು ಒಂದೊಂದೇ ಕಪಾಟುಗಳನ್ನು ತೆರೆಯುತ್ತ ಪುಸ್ತಕಗಳನ್ನು ನೋಡುತ್ತ ಆನಂದಿಸುತ್ತಿದ್ದೆ. ನಾನು ಅಲ್ಲಿ ಚಿಕ್ಕಚಿಕ್ಕ ಪುಸ್ತಕಗಳನ್ನು ಓದುತ್ತ ಕೂರುತ್ತಿದ್ದೆ. ಮನೆಗೆ ಹೋಗುವಾಗ ಯಾವುದಾದರೊಂದು ಪುಸ್ತಕವನ್ನು ಓದಲು ಕೊಡುತ್ತಿದ್ದರು. ನಾನು ಮನೆಗೆ ಬರುವಾಗ ನನ್ನ ಕಾಲುಗಳು ಭೂಮಿಯ ಮೇಲೆ ನಿಲ್ಲುತ್ತಿರಲಿಲ್ಲ. ಆಕಾಶದಲ್ಲಿ ಹಾರುತ್ತಿರುವ ಅನುಭವ ನನಗಾಗುತ್ತಿತ್ತು!
Related Articles
Advertisement
ನಾನು ಓದನ್ನು ಮುಗಿಸಿ 1976ನೆಯ ಇಸವಿಯಲ್ಲಿ ಬೆಂಗಳೂರಿಗೆ ಬಂದೆ. ಕೆಲವು ತಿಂಗಳಲ್ಲೆ ಅನೇಕ ವಿದ್ವಾಂಸರ ಹಾಗೂ ಸಾಧುಗಳ ಪರಿಚಯ ನನಗೆ ಆಯಿತು! ಆಗ ಶ್ರೀಮೂರ್ತಿ ನುಲೇನೂರು ಎಂಬುವರು ಪರಿಚಯವಾಗಿ ಗಾಢವಾದ ಅನುಬಂಧ ನಮ್ಮಿಬ್ಬರಲ್ಲಿ ಬೆಳೆಯಿತು. ಅವರು ಸ್ವಾಮಿ ರಾಮತೀರ್ಥರ ಬರೆಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಹಲವಾರು ಅಧ್ಯಾತ್ಮ ಸಂಬಂಧಿ ಕೃತಿಗಳನ್ನು ರಚಿಸಿದ್ದರು. ಅವರು ಖೋಡೆ ಅವರ ಮನೆಯಲ್ಲಿ ಇರುತ್ತಿದ್ದರು. ಅವರ ಸ್ನೇಹದಿಂದ ನನಗೆ ಅಧ್ಯಾತ್ಮಸಂಬಂಧಿ ವಿಚಾರಗಳು, ವ್ಯಕ್ತಿಗಳು ಸಾಧನಕ್ರಮಗಳು ತಿಳಿದುವು. ನಾನು ಅನೇಕ ಹಿರಿಯರನ್ನು ಕಂಡೆ! ಸಂನ್ಯಾಸಿಗಳ ಸಹವಾಸವಂತೂ ಆಗ ಇದ್ದೇ ಇತ್ತು. ಈ ಹೊತ್ತಿನಲ್ಲೇ ಶಂಬಾಜೋಶಿ ಅವರ ಕೃತಿವ್ಯಾಸಂಗಕ್ಕೆ ತೊಡಗಿದೆ. ಅವರು ಬರೆದ ಅರವಿಂದ ಘೋಷ್ ಕೃತಿ ನನ್ನ ಮನಸ್ಸನ್ನು ಆಳವಾಗಿ ಸೆಳೆಯಿತು! ಅವರ ಬರೆಹದ ವಿಚಾರಕ್ರಮ ಇಷ್ಟವಾಯಿತು. ಮುಂದೆ ಕರ್ನಾಟಕ-ಮಹಾರಾಷ್ಟ್ರ ಸಂತರ ಪರಮಾರ್ಥದ ನೆಲೆಗಳನ್ನು ತಿಳಿಯಲು ಇವರಿಂದ ಸಹಾಯಕ ವಾಯಿತು. ತಮಿಳುನಾಡಿನ ಆಳ್ವಾರರ ಹಾಗೂ ನಾಯನ್ಮಾರರ ಭಕ್ತಿಯ ನೆಲೆಗಳನ್ನು ಅರಿಯತೊಡಗಿದೆ. ನನ್ನ ಪ್ರೌಢಶಾಲೆಯ ಗುರುಗಳಾದ ಮಹಾವಿದ್ವಾನ್ ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್ ಅವರು ತಿರುವಾಯೊ¾ಳಿ, ತಿರುಪ್ಪಾವೈ, ತಿರುಕ್ಕುರುಳ್ ಮುಂತಾದ ಕೃತಿಗಳನ್ನು ಪರಿಚಯ ಮಾಡಿಕೊಟ್ಟರು. ಈ ರೀತಿ ನಡಿಗೆಯ ಅಧ್ಯಾತ್ಮ ಸಂಬಂಧೀ ಸ್ತರಗಳಿಂದ ವಿದ್ವದ್ ಸ್ತರಗಳ ಕಡೆಗೆ ಸಂಚರಿಸಲು ನನಗೆ ಅವಕಾಶವಾಯಿತು. ಆಗ ನವಕರ್ನಾಟಕದಲ್ಲಿದ್ದ ಎಸ್. ಆರ್. ಭಟ್ ಎಂಬ ವಿದ್ವಾಂಸ ಮಹನೀಯರು ಬೌದ್ಧ-ಜೈನ-ಚಾರ್ವಾಕ ದರ್ಶನಗಳ ಕಡೆಗೆ ನನ್ನ ಗಮನವನ್ನು ಸೆಳೆದರು. ಅವರು ರಾಹುಲ ಸಾಂಕೃತ್ಯಾಯನರ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ನಾನು ರಾಹುಲರ ಕೆಲವು ಕೃತಿಗಳನ್ನು ನೋಡಿದೆ, ಓದಿದೆ.
ನನ್ನ ಹಿರಿಯ ಸನಿ¾ತ್ರರಾದ ಪಂ. ಷಣ್ಮಖಯ್ಯ ಅಕ್ಕೂರಮಠ ಅವರ ನೆರವಿನಿಂದ ರಾಹುಲರ ದರ್ಶನ್ ಔರ್ ದಿಗªರ್ಶನ್ ಕೃತಿಯ ಅಭ್ಯಾಸಕ್ಕೆ ನನಗೆ ಅವಕಾಶವಾಯಿತು. ಈ ನಡುವೆ ಹಿರಿಯರಾದ ಶಾಸ್ತ್ರ ಚೂಡಾಮಣಿ ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರ ಪರಿಚಯ ಲಾಭ ಲಭಿಸಿತು. ಇದು ಪೂರ್ವಜನ್ಮದ ಪುಣ್ಯಫಲವೇ ಸರಿ! ಅವರ ಜತೆಗಿನ ಒಡನಾಟದಲ್ಲಿ ನಾನು ಅನುಭಾವ, ಅಧ್ಯಾತ್ಮ, ತಣ್ತೀಶಾಸ್ತ್ರಗಳ ಸೂಕ್ಷ್ಮಪರದೆಗಳನ್ನು ಅವರ ವಾಕ್‌ಪ್ರಪಂಚದಿಂದ ಗ್ರಹಿಸಿದೆ. ಅವರು ನನ್ನನ್ನು ಕಿರಿಯ ಸ್ನೇಹಿತನಂತೆ ಕಂಡು ತಮ್ಮ ಅನೇಕ ಅನುಭವಗಳನ್ನು ನನ್ನೊಡನೆ ಹಂಚಿಕೊಂಡರು!
ನಾನು ಅವರನ್ನು ಮೊದಲಿಗೆ ಕಂಡದ್ದು 1982-83ರಲ್ಲಿ ಎಂದು ತೋರುತ್ತದೆ. ಆಗ ನಾನು ಹೈಸ್ಕೂಲಿನ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅವರ ಪ್ರಸನ್ನ ಮುಖಮಂಡಲ, ಪ್ರೀತಿಯೇ ಮೈವೆತ್ತಿದಂತೆ ಹೃದಯದಿಂದ ಬರುತ್ತಿದ್ದ ಮಾತುಗಳು, ಅನೇಕ ಅಪೂರ್ವಗ್ರಂಥಗಳಿಂದ ಉದ್ಧರಿಸುತ್ತಿದ್ದ ಶ್ಲೋಕಗಳೂ ವಾಕ್ಯಗಳೂ ಮನೋಹರವಾಗುತ್ತಿದ್ದುವು. ನಾನೊಮ್ಮೆ “”ತಾವು ಯಾವುದಾದರೊಂದು ಪ್ರಕರಣಗ್ರಂಥವನ್ನು ನನಗೆ ಪಾಠಮಾಡಿ” ಎಂದು ಕೇಳಿಕೊಂಡೆ. ಆದರೆ, ಅವರು ಅದಕ್ಕೆ ಸಮ್ಮತಿಸದೆ “”ಇಬ್ಬರೂ ಕುಳಿತು ಓದೋಣ” ಎಂದು ಬಿಟ್ಟರು. ಆದರೆ, ಅನೇಕ ಗ್ರಂಥಗಳ ಬಗೆಗೆ ಪರಸ್ಪರ ಚರ್ಚಿಸಿದ್ದುಂಟು! ಅವರ ವ್ಯಾಖ್ಯಾನಕ್ಕೆ ನಾನು ತಲೆಬಾಗುತ್ತಿದ್ದೆ. ಆಮೇಲೆ ಡಾ. ಬನ್ನಂಜೆ ಗೋವಿಂದಾಚಾರ್ಯರ ಸಂಪರ್ಕಕ್ಕೆ ಬಂದೆ. ಅವರ ಗ್ರಂಥರಾಶಿಗಳಿಂದ ಹೊಸದಿಕ್ಕನ್ನು ಕಂಡುಕೊಂಡೆ. ಅವರು ಸಂಸ್ಕೃತದಲ್ಲಿ ಬರೆದ ಸೂತ್ರ, ಭಾಷ್ಯ, ವ್ಯಾಖ್ಯಾನಗಳು ನನ್ನನ್ನು ಇನ್ನಿಲ್ಲದಂತೆ ಹೊಸಹೊಸ ದಿಕ್ಕುಗಳನ್ನು ತೋರಿಸಿದುವು. ಉಪನಿಷತ್ತು, ಗೀತೆ, ರಾಮಾಯಣ, ಮಹಾಭಾರತ, ಭಾಗವತ, ತಂತ್ರಶಾಸ್ತ್ರ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಹತ್ತಾರು ಮೌಲಿಕ ಗ್ರಂಥಗಳು “ತಣ್ತೀಶಾಸ್ತ್ರ’ದ ಪ್ರಪಂಚಕ್ಕೂ ಅಧ್ಯಾತ್ಮಶಾಸ್ತ್ರದ ಪ್ರಪಂಚಕ್ಕೂ ಬೆಲೆಯುಳ್ಳ ಕೊಡುಗೆಗಳಾಗಿವೆ. ನಾನು ಮಧ್ಯರಾತ್ರಿಯ ನಿತಾಂತ ಮೌನದಲ್ಲಿ ಅವರ ಮಾತುಗಳನ್ನು ಕೃತಿಗಳ ಮೂಲಕ ಆಲಿಸಿದ್ದೇನೆ. ನಾನು ಇಂಥ ಇಬ್ಬರು ಋಷಿಸದೃಶರ ಸಹವಾಸಕ್ಕೆ ಬಂದದ್ದು ಭಾಗ್ಯವೇ ಸರಿ. “ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ’ ಎನ್ನದೆ ಬೇರೇನನ್ನು ಹೇಳಬಹುದು?
– ಮಲ್ಲೇಪುರಂ ಜಿ. ವೆಂಕಟೇಶ