Advertisement
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲು ಬಂದಿದ್ದ ಭಾರತ ತಂಡ ಸದ್ಯ ಇಂಗ್ಲೆಂಡ್‌ನಲ್ಲೇ ಇದೆ. ಈ ಫೈನಲ್ ಹಾಗೂ 5 ಪಂದ್ಯಗಳ ಟೆಸ್ಟ್ ಸರಣಿ ಮಧ್ಯೆ ಸುದೀರ್ಘ ಅಂತರವಿದ್ದು, ಭಾರತದ ಕ್ರಿಕೆಟಿಗರೆಲ್ಲ ಲಂಡನ್ ಸುತ್ತಾಡುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ-ಸಂಜನಾ ಗಣೇಶ್ ದಂಪತಿ ಯೂರೋ ಕಪ್ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ತೆರಳಿದರೆ, ಕೋಚ್ ರವಿಶಾಸ್ತ್ರಿ ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಿದ ಬಗ್ಗೆ ವರದಿಯಾಗಿದೆ.
ಆದರೆ ಈ ಸಮಯವನ್ನು ವ್ಯರ್ಥವಾಗಿ ಕಳೆಯುವುದು ಬೇಡ ಎಂಬುದು ಆರ್. ಅಶ್ವಿನ್ ಲೆಕ್ಕಾಚಾರ. ಹೀಗಾಗಿ ಅವರು ಜು. 11ರಂದು ಸಾಮರ್‌ಸೆಟ್ ಕೌಂಟಿ ವಿರುದ್ಧ ಆರಂಭವಾಗಲಿರುವ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸರ್ರೆ ಕೌಂಟಿಯನ್ನು ಪ್ರತಿನಿಧಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕಾಗಿ “ವರ್ಕ್ ವೀಸಾ’ದ ಅಗತ್ಯವಿದೆ. ಇದು ಲಭಿಸೀತೆಂಬುದು ಸರ್ರೆ ಹಾಗೂ ಅಶ್ವಿನ್ ಅವರ ವಿಶ್ವಾಸ. ಸರ್ರೆ-ಸಾಮರ್‌ಸೆಟ್ ನಡುವಿನ 4 ದಿನಗಳ ಪಂದ್ಯ ಜು. 14ಕ್ಕೆ ಮುಗಿಯಲಿದ್ದು, ಅಂದೇ ಭಾರತದ ತಂಡದ ವಿರಾಮ ಅವಧಿ ಕೂಡ ಕೊನೆಗೊಳ್ಳಲಿದೆ. ಬಳಿಕ ಕೊಹ್ಲಿ ಪಡೆಗೆ ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವಿದೆ.