Advertisement

“ಸ್ಪೈಡರ್‌-ಮ್ಯಾನ್‌’ಕನ್ನಡಕ್ಕೆ ಡಬ್‌ ಆಗುತ್ತಾ?

03:45 AM Apr 05, 2017 | Harsha Rao |

ಬೆಂಗಳೂರು: ಹಾಲಿವುಡ್‌ ಚಿತ್ರ “ಸ್ಪೈಡರ್‌-ಮ್ಯಾನ್‌ -ಹೋಂಕಮಿಂಗ್‌’ ಕನ್ನಡಕ್ಕೆ ಡಬ್‌ ಆಗಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಅದಕ್ಕೆ ಪೂರಕವಾಗಿ ಈಗ ಯೂಟ್ಯೂಬ್‌ನಲ್ಲಿ ಕನ್ನಡಕ್ಕೆ ಡಬ್‌ ಆಗಿರುವ “ಸ್ಪೈಡರ್‌-ಮ್ಯಾನ್‌ – ಹೋಂಕಮಿಂಗ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿರುವುದಷ್ಟೇ ಅಲ್ಲ, ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಮಾರ್ವಲ್‌ ಸ್ಟುಡಿಯೋಸ್‌ ನಿರ್ಮಾಣದ “ಸ್ಪೈಡರ್‌-ಮ್ಯಾನ್‌ – ಹೋಂಕಮಿಂಗ್‌’ ಜುಲೈ 7 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇಂಗ್ಲಿಷ್‌ ಅಲ್ಲದೆ ಹಿಂದಿ, ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲೂ ಚಿತ್ರ ಡಬ್‌
ಆಗಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಸೋನಿ ಪಿಕ್ಚರ್, ಈ ಚಿತ್ರವನ್ನು ಕನ್ನಡಕ್ಕೂ ಡಬ್‌ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಸಂಸ್ಥೆ ವತಿಯಿಂದ ಬಿಡುಗಡೆಯಾಗಿರಲಿಲ್ಲ. ಈಗ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದ್ದು, ದಿನದಾಂತ್ಯಕ್ಕೆ ಸುಮಾರು 40 ಸಾವಿರ ಹಿಟ್‌ಗಳನ್ನು ದಾಖಲಿಸಿದೆ. ಸಾಕಷ್ಟು ಹಿಟ್‌ಗಳನ್ನು ದಾಖಲಿಸಿರುವುದರ ಜತೆಗೆ, ಚಿತ್ರವು ಡಬ್ಬಿಂಗ್‌ ಕುರಿತಾದ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಇದುವರೆಗೂ ಹಾಲಿವುಡ್‌ನ‌ ಯಾವೊಂದು ಚಿತ್ರ ಕನ್ನಡಕ್ಕೆ ಡಬ್‌ ಆಗಿದ್ದಿಲ್ಲ. ಆದರೆ, ಇದೇ ಮೊದಲ ಬಾರಿಗೆ “ಸ್ಪೈಡರ್‌-ಮ್ಯಾನ್‌ – ಹೋಂಕಮಿಂಗ್‌’ ಚಿತ್ರವು ಕನ್ನಡಕ್ಕೆ ಡಬ್‌ ಆಗಿರುವುದರ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕನ್ನಡದಲ್ಲಿ ಹಾಲಿವುಡ್‌ ಚಿತ್ರವೊಂದು ಡಬ್‌ ಆಗುತ್ತಿರುವುದು ಸರಿ, ತಪ್ಪು ಎಂದು ಚರ್ಚೆಯಾಗುವುದರ ಜತೆಗೇ, ಕನ್ನಡದಲ್ಲಿ ಡಬ್ಬಿಂಗ್‌ ಮಾಡಿದ್ದು, ಸಾಕಷ್ಟು ಅಪಭ್ರಂಶದಿಂದ ಕೂಡಿದೆ ಎಂಬ ಟೀಕೆಗಳು ಸಹ ಕೇಳಿ ಬಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next