ಗಿರ್ಮಿಟ್, ಮೆಣಸಿನಕಾಯಿ ಬಜ್ಜಿ, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ ಉತ್ತರ ಕರ್ನಾಟಕದಲ್ಲಿ ತುಂಬಾ ಜನಪ್ರಿಯ ತಿಂಡಿ. ಇದು ಸಾಮಾನ್ಯವಾಗಿ ಎಲ್ಲಾ ಖಾನಾವಳಿಗಳಲ್ಲೂ ಸಿಗುತ್ತದೆ. ಆದರೆ, ಮಸಾಲೆ ಮೆಣಸಿನ ಕಾಯಿ, ಮಸಾಲೆ ಬದನೆಕಾಯಿ ಸಿಗುವುದು ಸ್ವಲ್ಪ ಕಷ್ಟ. ಈ ಹೆಸರನ್ನು ಹಲವರು ಕೇಳಿರಬಹುದು, ನೋಡಿರಬಹುದು. ಆದರೆ, ತಿಂದಿರು ವವರ ಸಂಖ್ಯೆ ತೀರಾ ಕಡಿಮೆ. ಏಕೆಂದರೆ, ಎಲ್ಲಾ ಕಡೆ ಈ ಮಸಾಲೆ ಮಿರ್ಚಿ, ಬದನೆ ಕಾಯಿ ಮಾಡಲ್ಲ. ಗದಗ್‌ನ ಶ್ರೀಗುರು ತೋಂಟದಾರ್ಯ ಮಿರ್ಚಿ ಸೆಂಟರ್‌ಇಲ್ಲಿ ಇದು ಜನಪ್ರಿಯ ತಿಂಡಿ.
ಗದಗ್ ನಗರದವರೇ ಆದ ಈರಮ್ಮ ಮತ್ತು ತಿಪ್ಪಣ್ಣ 1988ರಲ್ಲಿ ಈ ಸೆಂಟರ್ ಪ್ರಾರಂಭಿಸಿದರು. ಮೊದಲು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ಇವರಿಗೆ, ಅದರಲ್ಲಿ ಅಂತಹ ಆದಾಯ ಬರುತ್ತಿರಲಿಲ್ಲ. ಹೀಗಾಗಿ, ಅಂಗಡಿ ಮುಂದೆ ಸಂಜೆ ವೇಳೆ ಮೆಣಸಿನಕಾಯಿ ಬಜ್ಜಿ, ವಡೆ ಹೀಗೆ.. ಕೆಲವು ತಿಂಡಿ ಮಾಡಲು ಶುರು ಮಾಡಿದ್ರು. ಈ ಹೊಸ ಕೆಲಸ ಇವರ ಕೈಹಿಡಿದ್ದುದನ್ನು ಗಮನಿಸಿ ಕೇವಲ ಗಿರ್ಮಿಟ್, ಬಜ್ಜಿ ಮಾಡಿದ್ರೆ ಗ್ರಾಹಕರಿಗೆ ಸಮಾಧಾನ ಇರುವುದಿಲ್ಲ, ಏನಾದ್ರೂ ವಿಶೇಷ ತಿನಿಸು ತಯಾರಿಸಬೇಕು ಎಂದುಕೊಂಡು ಈ ಮಸಾಲೆ ಮೆಣಸಿನಕಾಯಿ ಮತ್ತು ಮಸಾಲೆ ಬದನೆಕಾಯಿ ಮಾಡಲು ಆರಂಭಿಸಿದ್ರು.
ಜನರಿಗೂ ಅದು ಇಷ್ಟವಾಯ್ತು. ಈಗ ಅದನ್ನೇ ಪ್ರಮುಖ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಮೋಡ ಮುಸುಕಿದ ವಾತಾವರಣ, ಸಂಜೆ ಮಳೆಗೆ ಒಂದು ಲೋಟ ಬಿಸಿ ಚಹದ ಜೊತೆಗೆ ಗರಿಗರಿಯಾದ ಮಿರ್ಚಿ ತಿನ್ನಬೇಕು ಅನ್ನುವವರಿಗೆ ಈ ಮಿರ್ಚಿ ಸೆಂಟರ್ ಸೂಕ್ತ. ಸಂಜೆಯಾದ್ರೆ ಮಸಾಲೆ ಮಿರ್ಚಿ, ಬದನೆಕಾಯಿ, ಗಿರ್ಮಿಟ್ ತಿನ್ನಲು ಬಹುತೇಕ ಮಂದಿ ಈ ಮಿರ್ಚಿ ಸೆಂಟರ್‌ಗೆ ಬರುತ್ತಾರೆ. ಇದು ರಾತ್ರಿ 10 ಗಂಟೆವರೆಗೂ ತೆಗೆದಿರುತ್ತದೆ. ದಿನಕ್ಕೆ 25 ಕೆ.ಜಿ. ಕಡ್ಲೆಹಿಟ್ಟು, 20 ಕೆ.ಜಿ. ಬದನೆಕಾಯಿ, 10 ಕೆ.ಜಿ. ಮೆಣಸಿನಕಾಯಿ ಖರ್ಚಾಗುತ್ತದೆ. ಸದ್ಯ ಸೆಂಟರ್‌ಅನ್ನು ಬಸವರಾಜು ನೋಡಿಕೊಳ್ಳುತ್ತಿದ್ದು, ಇವರ ತಾಯಿ ಈರಮ್ಮ ಮಿರ್ಚಿ ಕರಿಯುವ ಕೆಲಸ ಮಾಡುತ್ತಾರೆ.
ಕುಟುಂಬದವರಿಗೆ ಉದ್ಯೋಗ: ಮಿರ್ಚಿ ಸೆಂಟರ್‌ನಿಂದ ಕುಟುಂಬದ ಆರು ಮಂದಿಗೆ ಉದ್ಯೋಗ ಸಿಕ್ಕಿದೆ. ಈರಮ್ಮ ಜೊತೆಗೆ ಇವರ ಮಕ್ಕಳಾದ ಬಸವರಾಜು, ಸುವರ್ಣ, ಅನ್ನಪೂರ್ಣ ಹಾಗೂ ಮೊಮ್ಮಕ್ಕಳೂ ಇಲ್ಲೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮಿರ್ಚಿ ವಿಶೇಷ: ಸಾಮಾನ್ಯವಾಗಿ ಕಡ್ಲೆಹಿಟ್ಟು ಲೇಪಿಸಿದ ಮೆಣಸಿನಕಾಯಿ ಬಜ್ಜಿಯನ್ನಷ್ಟೇ ನಾವು ತಿಂದಿದ್ದೇವೆ. ಆದರೆ, ತೋಂಟದಾರ್ಯ ಸೆಂಟರ್‌ನಲ್ಲಿ ಮಸಾಲೆ ತುಂಬಿ ಮಾಡಿದ ಮೆಣಸಿನಕಾಯಿ, ಬದನೆಕಾಯಿ ಸಿಗುತ್ತದೆ. ಇಲ್ಲಿ ಮೆಣಸಿನ ಕಾಯಿ ಮತ್ತು ಬದನೆಕಾಯಿಯನ್ನು ಸ್ವಲ್ಪ ಕೊಯ್ದು ಅದಕ್ಕೆ ಕಲಸಿದ ಮಸಾಲೆಯನ್ನು ತುಂಬಿ, ನಂತರ ಅದನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ನಂತರ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಗರಿಗರಿಯಾದ ಈ ಮೆಣಸಿನಕಾಯಿ ಮತ್ತು ಬದನೆಕಾಯಿಯನ್ನು ಟೊಮೆಟೋ ಚಟ್ನಿಯಲ್ಲಿ ಅದ್ದಿ ತಿಂದರೆ ರುಚಿಕಟ್ಟಾಗಿರುತ್ತದೆ. ದರ 10 ರೂ.
ಇತರೆ ತಿಂಡಿ: ಮಸಾಲೆ ಮೆಣಸಿನಕಾಯಿ ಜೊತೆಗೆ ಮಾಮೂಲಿ ಮಿರ್ಚಿ(5 ರೂ.), ಕಡ್ಲೆಬೇಳೆ ವಡೆ(5 ರೂ.), ಗಿರ್ಮಿಟ್(20 ರೂ.), ದಿಲ್ಲಿ ದರ್ಬಾರ್, ಚಹ(5 ರೂ.) ಹೀಗೆ… ನಾಲ್ಕೈದು ಬಗೆಯ ತಿಂಡಿಗಳು ಇಲ್ಲಿ ಸಿಗುತ್ತವೆ.
ಮಿರ್ಚಿ ಸೆಂಟರ್ ವಿಳಾಸ: ಗದಗ್ ನಗರದಲ್ಲಿನ ಗಾಂಧಿ ಸರ್ಕಲ್‌ನಿಂದ 100 ಮೀಟರ್ ಮುಂದೆ ಸಾಗಿದ್ರೆ ವೀರಭದ್ರೇಶ್ವರ ಖಾನಾವಳಿ ಬರುತ್ತೆ. ಅದರ ಎದುರೇ ಇದೆ ಶ್ರೀ ಗುರುತೋಂಟದಾರ್ಯ ಮಿರ್ಚಿ ಸೆಂಟರ್.
ಮಿರ್ಚಿ ಸೆಂಟರ್ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 10.30ರವರೆಗೆ, ವಾರದ ರಜೆ ಇಲ್ಲ. ಮನೆಯಲ್ಲಿ ಫಂಕ್ಷನ್ ಇದ್ರೆ ಮಾತ್ರ ರಜೆ.
* ಭೋಗೇಶ ಆರ್. ಮೇಲುಕುಂಟೆ/ಜಗದೀಶ್ ಕುಲಕರ್ಣಿ