Advertisement

ಮಸಾಲ “ಗಿರ್ಮಿಟ್‌’

09:58 AM Nov 10, 2019 | Lakshmi GovindaRaju |

ಸಾಮಾನ್ಯವಾಗಿ ಪಕ್ಕಾ ಔಟ್‌ ಆ್ಯಂಡ್‌ ಔಟ್‌ ಕಮರ್ಶಿಯಲ್‌ ಸಿನಿಮಾಗಳು ಅಂದ್ರೆ ಅಲ್ಲಿ ಹೀರೋ-ಹೀರೋಯಿನ್‌ಗಳು ಇದ್ದೇ ಇರುತ್ತಾರೆ. ಇನ್ನು ಅದರಲ್ಲಿ ಅವರಿಗೊಪ್ಪುವಂಥ ಲವ್‌ ಸ್ಟೋರಿ, ಭರ್ಜರಿ ಹಾಡು, ಅದಕ್ಕೆ ತಕ್ಕಂತೆ ಡ್ಯಾನ್ಸ್‌, ತೊಡೆ ತಟ್ಟಿ ಶಿಳ್ಳೆ ಗಿಟ್ಟಿಸಿಕೊಳ್ಳುವ ಪಂಚಿಂಗ್‌ ಡೈಲಾಗ್‌ಗಳು, ಒಂದೇ ಏಟಿಗೆ ಹತ್ತಾರು ಎದುರಾಳಿಗಳನ್ನು ಮಕಾಡೆ ಮಲಗಿಸುವಂಥ ಆ್ಯಕ್ಷನ್‌ ದೃಶ್ಯಗಳು ಮಾಮೂಲಿ. ಇದರ ಜೊತೆಗೆ ಕಲರ್‌ಫ‌ುಲ್‌ ಮೇಕಿಂಗ್‌ ಇದ್ದರೆ ಚಿತ್ರ ಸಿನಿಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ ಅನ್ನೋದು ಸಿನಿಮಂದಿಯ ನಂಬಿಕೆ.

Advertisement

ದಶಕಗಳಿಂದ ಇದನ್ನೇ “ಪಾಲಿಸಿ’ಯಾಗಿ ಪಾಲಿಸಿಕೊಂಡು ಬಂದಿರುವ ಚಿತ್ರರಂಗದ ಮಂದಿ ಇದನ್ನು ಬಿಟ್ಟು ಸಿನಿಮಾ ಮಾಡುವ ಸಾಹಸಕ್ಕೆ ಮುಂದಾಗುವುದು ಅಪರೂಪ. ಈ ವಾರ ಕೂಡ ಇಂಥದ್ದೇ ಸಿದ್ಧಸೂತ್ರವನ್ನು ಇಟ್ಟುಕೊಂಡು “ಗಿರ್ಮಿಟ್‌’ ಚಿತ್ರವೊಂದು ಬಂದಿದೆ. ಆದರೆ ಅದರ ಜೊತೆಯಲ್ಲಿರುವ ಪ್ರಯೋಗವೊಂದು ಗಮನ ಸೆಳೆಯುತ್ತದೆ. ಅಂದಹಾಗೆ, ಆ ಚಿತ್ರದ ಹೆಸರು “ಗಿರ್ಮಿಟ್‌’. ಇಲ್ಲಿ ಪಕ್ಕಾ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಚಿತ್ರದಲ್ಲಿ ಏನೇನೂ ಇರಬೇಕೊ, ಅವೆಲ್ಲವೂ ಇದೆ. ಹಾಗಂತ ಇಲ್ಲಿ ನೀವು ಅಂದುಕೊಂಡ ಹೀರೋ-ಹೀರೋಯಿನ್‌ ಆಗಲಿ, ಸಹ ಕಲಾವಿದರಾಗಲಿ ಇಲ್ಲ.

ಹಾಡು, ಡ್ಯಾನ್ಸ್‌, ಫೈಟ್ಸ್‌ ಎಲ್ಲವೂ ಹದವಾಗಿ ಮೇಳೈಸಿದ್ದರೂ, ಅದ್ಯಾವುದನ್ನೂ ನಿಮಗೆ ಪರಿಚಯವಿರುವ ನಟರು ಮಾಡುವುದಿಲ್ಲ ಅನ್ನೋದೆ ವಿಶೇಷ. ಚಿತ್ರದಲ್ಲಿ ಬರುವ ಹೀರೋ-ಹೀರೋಯಿನ್‌, ಪೋಷಕ ನಟರು, ಖಳನಟರು, ಹಾಸ್ಯನಟರು ಎಲ್ಲಾ ಪಾತ್ರಗಳನ್ನು ಮಕ್ಕಳೇ ನಿರ್ವಹಿಸಿದ್ದಾರೆ. ಅದೇ ಚಿತ್ರದ ಬಿಗ್‌ ಹೈಲೈಟ್‌ ಅಂಶ ಎನ್ನಬಹುದು. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಖಾಸಗಿ ಕಂಪೆನಿಯೊಂದರ ಉತ್ಪನ್ನದ ಜಾಹೀರಾತೊಂದರಲ್ಲಿ ಪುಟಾಣಿಗಳು ದೊಡ್ಡವರ ಪೋಷಾಕಿನಲ್ಲಿ ಮಿಂಚುವುದು, ಅವರಂತೆ ಮಾತನಾಡುವುದು, ಹಾವ-ಭಾವ ಎಲ್ಲರದಲ್ಲೂ ದೊಡ್ಡವರನ್ನು ಮೀರಿಸುವಂತೆ ನಟಿಸುವುದನ್ನು ನೀವು ನೋಡಿರಬಹುದು.

ಅದೇ ರೀತಿ “ಗಿರ್ಮಿಟ್‌’ ಚಿತ್ರದಲ್ಲೂ ಇಡೀ ಚಿತ್ರದ ಕಥೆ ಮತ್ತು ಪಾತ್ರಗಳನ್ನು ಪುಟಾಣಿಗಳು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಇತ್ತೀಚೆಗೆ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಇಂಥ ಪ್ರಯೋಗಗಳು ಯಶಸ್ವಿಯಾಗಿದ್ದು, ಕಿರುತೆರೆ ಪ್ರೇಕ್ಷಕರಿಗೆ ಈ ಪ್ರಯೋಗ ತೀರಾ ಹೊಸದೇನಲ್ಲ. ಆದರೆ ಸಿನಿಮಾವೊಂದರಲ್ಲಿ ಬಿಗ್‌ ಸ್ಕ್ರೀನ್‌ ಮೇಲೆ ಚಿತ್ರದ ಎಲ್ಲಾ ಪಾತ್ರಗಳನ್ನು ಬಾಲ ಕಲಾವಿದರಿಂದಲೇ ಅಭಿನಯಿಸಿದ್ದು, ಕನ್ನಡದ ಪ್ರೇಕ್ಷಕರಿಗೆ ಹೊಸದಾಗಿ ಕಂಡರೂ ಕಾಣಬಹುದು. ಅದರಲ್ಲೂ ಅದನ್ನು ಹೊರತುಪಡಿಸಿದರೆ, ಚಿತ್ರದ ಕಥೆ, ನಿರೂಪಣೆ ಮತ್ತಿತರ ಯಾವುದೇ ಅಂಶಗಳಲ್ಲೂ ಹೊಸತನ ಹುಡುಕುವಂತಿಲ್ಲ.

ನಿರ್ದೇಶಕ ರವಿ ಬಸ್ರೂರು ಮಕ್ಕಳ ಅಭಿನಯಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟಿರುವುದರಿಂದ, ಚಿತ್ರಕಥೆ, ನಿರೂಪಣೆ ಅಲ್ಲಲ್ಲಿ ಕೈ ಕೊಟ್ಟಿದೆ. ಆದರೆ ಮಕ್ಕಳ ಅಭಿನಯ ಚಿತ್ರದ ಅನೇಕ ಲೋಪಗಳನ್ನು ಮರೆಮಾಚಿಸಿ, ನೋಡಿಸಿಕೊಂಡು ಹೋಗುತ್ತದೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ, ಲೊಕೇಶನ್ಸ್‌ ಎಲ್ಲವೂ “ಗಿರ್ಮಿಟ್‌’ ಅಂದವನ್ನು ಹೆಚ್ಚಿಸಿವೆ. ನಿರ್ದೇಶಕರು ಮತ್ತು ನಿರ್ಮಾಪಕರು ಮಕ್ಕಳ ಅಭಿನಯದ ಜೊತೆಗೆ, ಹೊಸ ಕಥೆಯ ಕಡೆಗೂ ಗಮನ ಕೊಟ್ಟಿದ್ದರೆ “ಗಿರ್ಮಿಟ್‌’ ಇನ್ನಷ್ಟು ಇಷ್ಟವಾಗುವ ಸಾಧ್ಯತೆಗಳಿದ್ದವು. ಒಟ್ಟಾರೆ ಥಿಯೇಟರ್‌ನಲ್ಲಿ “ಗಿರ್ಮಿಟ್‌’ ಹೊಸ ಪ್ರಯತ್ನವಾಗಿ ನೋಡಲು ಅಡ್ಡಿಯಿಲ್ಲ.

Advertisement

ಚಿತ್ರ: ಗಿರ್ಮಿಟ್‌
ನಿರ್ಮಾಣ: ಎನ್‌.ಎಸ್‌ ರಾಜಕುಮಾರ್‌
ನಿರ್ದೇಶನ: ರವಿ ಬಸ್ರೂರ್‌
ತಾರಾಗಣ: ಆಶ್ಲೇಷ್‌ ರಾಜ್‌, ಶ್ಲಾಘಾ ಸಾಲಿಗ್ರಾಮ, ನಾಗರಾಜ್‌ ಜಪ್ತಿ, ಶ್ರಾವ್ಯಾ, ತನಿಶಾ ಕೋಣೆ, ಆದಿತ್ಯ ಮತ್ತಿತರರು.

* ಜಿ.ಎಸ್‌. ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next