Advertisement

ಇಂದು ಎಸ್‌ಪಿಜಿ ತಂಡ ಆಗಮನ ನಿರೀಕ್ಷೆ: ಮೈದಾನದಲ್ಲಿ ಭರದ ಸಿದ್ಧತೆ

01:03 AM Aug 29, 2022 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2ರಂದು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಪೊಲೀಸ್‌ ಭದ್ರತೆಗೆ ಸಿದ್ಧತೆ ನಡೆಸಲಾಗುತ್ತಿದೆ.

Advertisement

ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ಪೊಲೀಸ್‌ ಅಧಿಕಾರಿ, ಸಿಬಂದಿ ಆ. 30ರಂದು ಮಂಗಳೂರು ತಲುಪಲಿದ್ದಾರೆ. ಎಸ್‌ಪಿಜಿ ತಂಡಗಳು ಆ. 29ರಂದು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಪೊಲೀಸ್‌ ತಪಾಸಣೆ ತೀವ್ರಗೊಳಿಸಲಾಗಿದ್ದು ಹೊರ ಜಿಲ್ಲೆ, ರಾಜ್ಯಗಳ ಜನರ ಓಡಾಟದ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ವಾಹನಗಳ ತಪಾಸಣೆಯನ್ನು ಹೆಚ್ಚಿಸಲಾಗಿದ್ದು ನಗರದ ವಸತಿ ಗೃಹಗಳಲ್ಲಿ ತಂಗುವವರ ಬಳಿ ಸೂಕ್ತ ದಾಖಲೆಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

3 ಹೆಲಿಪ್ಯಾಡ್‌
ಪ್ರಧಾನಿಯವರು ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಬಜಪೆಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಗೋಲ್ಡ್‌ ಫಿಂಚ್‌ ಸಿಟಿ ಮೈದಾನಕ್ಕೆ ಬರಲಿದ್ದಾರೆ. 3 ಹೆಲಿಕಾಪ್ಟರ್‌ಗಳು ಆಗಮಿಸಲಿದ್ದು, ಮೈದಾನದ ಮುಂಭಾಗದಲ್ಲಿ 3 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ನವಮಂಗಳೂರು ಬಂದರಿನಲ್ಲಿರುವ ಹೆಲಿಪ್ಯಾಡನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಾ| ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಮಂಗಳೂರು ಉಪವಿಭಾಗಾಧಿಕಾರಿ ಮದನಮೋಹನ್‌ ಸೇರಿದಂತೆ ಅಧಿಕಾರಿಗಳು ಸಿದ್ಧತೆಯ ಪ್ರಗತಿಯನ್ನು ರವಿವಾರ ಪರಿಶೀಲಿಸಿದರು.

30 ಎಕ್ರೆ ಪ್ರದೇಶದಲ್ಲಿ
ಗೋಲ್ಡ್‌ಫಿಂಚ್‌ ಸಿಟಿ ಮೈದಾನ ಸುಮಾರು 100 ಎಕ್ರೆ ಪ್ರದೇಶವನ್ನು ಹೊಂದಿದ್ದು ಇದರಲ್ಲಿ 30 ಎಕ್ರೆ ಪ್ರದೇಶದಲ್ಲಿ ತಾತ್ಕಾಲಿಕ ಸಭಾಂಗಣ ನಿರ್ಮಿಸ ಲಾಗುತ್ತಿದೆ. ಸಭಾಂಗಣ ನಿರ್ಮಾಣವನ್ನು ಆ. 31ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಸಭಾಂಗಣದ ವಿವಿಧೆಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ.

ಸಭಾಂಗಣದ ಹೊರಭಾಗದಲ್ಲಿ ದ್ವಿಚಕ್ರ, ಚತುಷcಕ್ರ ಸೇರಿದಂತೆ ಲಘುವಾಹನಗಳ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗುತ್ತಿದೆ. ಬಸ್‌ಗಳ ನಿಲುಗಡೆಗೆ ಸ್ವಲ್ಪ ದೂರದಲ್ಲಿ ವಿವಿಧೆಡೆ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪಕ್ಕದ ಸ್ಟಾಕ್‌ ಎಕ್ಸ್‌ ಚೇಂಜ್‌ ಮೈದಾನ, ಕೆಪಿಟಿ ಮೈದಾನ ಹಾಗೂ ಸಮೀಪದ ಖಾಸಗಿ ಸಂಸ್ಥೆಗಳಿಗೆ ಸೇರಿದ ಪ್ರದೇಶಗಳಲ್ಲಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಜನರನ್ನು ಇಳಿಸಿ ಬಳಿಕ ಈ ತಾಣಗಳಿಗೆ ಹೋಗಿ ನಿಲುಗಡೆಯಾಗಲಿವೆ.

Advertisement

ಸುತ್ತ ಶೀಟುಗಳ ಬೇಲಿ
ಸಭಾಂಗಣ ಪ್ರವೇಶಕ್ಕೆ ನಾಲ್ಕು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಿ ಪ್ರವೇಶಕ್ಕೆ ಪ್ರತ್ಯೇಕ ದ್ವಾರವಿರುತ್ತದೆ. ಎಸ್‌ಪಿಜಿ ತಂಡದವರು ಬಂದ ಬಳಿಕ ಅವರ ನಿರ್ದೇಶನದಂತೆ ಕೆಲವು ಬದಲಾವಣೆ ಸಾಧ್ಯತೆಗಳಿವೆ. ಸಭಾಂಗಣ ಸುತ್ತಲೂ ಶೀಟುಗಳ ಬೇಲಿ ಹಾಕಿ ಹೊರಗಡೆ ಕಾಣದಂತೆ ಮುಚ್ಚಲಾಗುತ್ತದೆ.

ವಾಹನ ಸಂಚಾರ ಬದಲಾವಣೆ ಸಾಧ್ಯತೆ
ಸಮಾವೇಶ ನಡೆಯಲಿರುವ ಗೋಲ್ಡ್‌ಫಿಂಚ್‌ ಸಿಟಿ ಮೈದಾನ ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವುದರಿಂದ ಸಮಾವೇಶ ದಂದು ಬೆಳಗ್ಗಿನಿಂದ ರಾತ್ರಿವರೆಗೂ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮೂಲ್ಕಿ ಮತ್ತು ಹಳೆಯಂಗಡಿಯಲ್ಲಿ ಹಾಗೂ ಮಂಗಳೂರಿನಲ್ಲಿ ನಂತೂರು ಮತ್ತು ಕೆಪಿಟಿ ಬಳಿಯಿಂದ ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿ ಕೊಡಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ. ಪರ್ಯಾಯ ಮಾರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ದೊರೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next