ರಾಯಚೂರು: ಎಸ್‌ಸಿ, ಎಸ್‌ಟಿ ವರ್ಗಗಳ ಪ್ರಗತಿಗೆ ಮೀಸಲಿಟ್ಟಿರುವ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಖರ್ಚು ಮಾಡದೆ ನೆಪ ಹೇಳಿದರೆ ನಡೆಯದು. ಯೋಜನೆ ಜಾರಿಗೊಳಸುವ ಮೂಲಕ ಮಾರ್ಚ್ ಅಂತ್ಯಕ್ಕೆಲ್ಲ ಅನುದಾನ ಕಡ್ಡಾಯವಾಗಿ ಖರ್ಚು ಮಾಡಬೇಕು ಎಂದು ಜಿಪಂ ಸಿಇಒ ಅಭಿರಾಂ ಜಿ. ಶಂಕರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಬಹುತೇಕ ಇಲಾಖೆಗಳಲ್ಲಿ ಅನುದಾನ ಬಾಕಿ ಉಳಿದಿದೆ. ಇದು ಯಾವುದೇ ಕಾರಣಕ್ಕೂ ಹಿಂದಿರುಗಿ ಹೋಗಿವುದಿಲ್ಲ. ಅಲ್ಲದೇ, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳಿದ್ದು, ಅಷ್ಟರೊಳಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದು ಹಾಗೂ ಕಾಮಗಾರಿ ಆರಂಭಿಸುವುದಕ್ಕೆ ಕಾರ್ಯಾದೇಶ ನೀಡಬೇಕು ಎಂದು ಸೂಚಿಸಿದರು.
ಡಾ| ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸ್ವ ಉದ್ಯೋಗ, ಭೂ ಒಡೆತನ, ವೃತ್ತಿ ಕೌಶಲ ತರಬೇತಿ ಹಾಗೂ ಗಂಗಾ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಬಹಳಷ್ಟು ಬಾಕಿಯಿದೆ. ರಿಮ್ಸ್‌ನಲ್ಲಿ ನಾಲ್ಕು ಲಕ್ಷ ರೂ. ಬಾಕಿಯಿದ್ದು, ಶೀಘ್ರದಲ್ಲೇ ಖರ್ಚು ಮಾಡಬೇಕು. ನಗರಾಭಿವೃದ್ಧಿ ಇಲಾಖೆಯಡಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಅನುದಾನ ಬಾಕಿ ಉಳಿಸಿಕೊಂಡಿವೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿರುವ 24.1ರ ಅನುದಾನದೊಂದಿಗೆ ವಿಶೇಷ ಯೋಜನೆ ಅನುದಾನ ಬಳಸಬೇಕು ಎಂದು ಸೂಚಿಸಿದರು.
ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ಯರಮರಸ್ ನ ನೀರಾವರಿ ವೃತ್ತ ಕಚೇರಿಯಲ್ಲಿ ವಿಶೇಷ ಘಟಕ ಯೋಜನೆಯಡಿ 5.5 ಕೋಟಿ ರೂ. ಅನುದಾನ ಬಾಕಿ ಉಳಿದಿದೆ. ಸಾಧ್ಯವಾದಷ್ಟು ಬೇಗ ಕಾಮಗಾರಿ ಆರಂಭಿಸಿ. ಎಲ್ಲ ನಿಗಮಗಳು ಹಾಗೂ ಕಲ್ಯಾಣ ಇಲಾಖೆಗಳು ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಅನುದಾನ ಬಳಕೆಗೆ ಗಡುವು ಹಾಕಿಕೊಂಡು ಕೆಲಸ ಮಾಡಬೇಕು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಂಗಾ ಕಲ್ಯಾಣ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿದೆ. ಆದರೆ, ಪ್ರತಿ ವರ್ಷವೂ ಒಂದಿಷ್ಟು ಬಾಕಿ ಉಳಿದಿರುವುದು ಅಂಕಿ ಅಂಶಗಳಲ್ಲಿದೆ. ಜೆಸ್ಕಾಂ ಇಂಜಿನಿಯರ್‌ಗಳ ಜತೆ ಮಾತುಕತೆ ನಡೆಸಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು. ಈ ವೇಳೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿವಿಧ ಇಲಾಖೆ ಅಧಿಕಾರಿಗಳು, ಅನೇಕ ಕೆಲಸಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ.
ಆದರೆ, ತ್ವರಿತಗತಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಕಷ್ಟವಾಗಲಿದೆ. ಶಾಸಕರ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ವಿವರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.