Advertisement
ಕೊರೊನಾ ಕಾಟ ಇಲ್ಲದೇ ಇದ್ದಿದ್ದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆ (1-9ನೇ ತರಗತಿ) ವಿದ್ಯಾರ್ಥಿಗಳು ಏ. 10ರಂದು ತಮ್ಮ ಫಲಿತಾಂಶ ಪಟ್ಟಿ ಪಡೆದು ಬೇಸಿಗೆ ರಜೆಯ ಸಂಭ್ರಮಕ್ಕೆ ತೆರಳುತ್ತಿದ್ದರು. ದುರದೃಷ್ಟವಶಾತ್ ಈ ವರ್ಷ ಪೂರ್ತಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಾಲೆ ಹಾಗೂ ಶಿಕ್ಷಕರ ದರ್ಶನ ಭಾಗ್ಯವೇ ಸಿಕ್ಕಿಲ್ಲ. ಇದು ಈ ಕಿರಿಯ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆಯೂ ಕರಾಳ ಛಾಯೆಯ ಆತಂಕ ಮೂಡಿದೆ. ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷವನ್ನು ಒಂದೆರಡು ತಿಂಗಳು ವಿಸ್ತರಣೆ ಮಾಡಿದರೂ 1-5ನೇ ತರಗತಿ ಮಕ್ಕಳಿಗೆ ಶಾಲಾ ಪ್ರವೇಶ ಭಾಗ್ಯ ದೊರಕುವ ಸಾಧ್ಯತೆ ಕಡಿಮೆ ಇದೆ.
Related Articles
Advertisement
ಶೈಕ್ಷಣಿಕ ಬುನಾದಿಗೆ ಪೆಟ್ಟು: ಒಂದರಿಂದ ಐದನೇ ತರಗತಿ ಮಕ್ಕಳು ವರ್ಷ ಪೂರ್ಣ ಶಾಲೆಗೆ ಹೋಗದೆ ಇರುವುದರಿಂದ ಅವರ ಶೈಕ್ಷಣಿಕ ಬುನಾದಿಗೆ ಭಾರೀ ಧಕ್ಕೆಯಾಗುವ ಸಾಧ್ಯತೆ ಬಗ್ಗೆ ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ಕಾರಣದಿಂದ ಅಂಗನವಾಡಿ, ಶಿಶುವಿಹಾರಗಳು ಸಹ ಬಂದ್ ಆಗಿವೆ. ಇದರಿಂದಾಗಿ ಪ್ರಸಕ್ತ ವರ್ಷ ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳು ಆರಂಭಿಕ ಅಕ್ಷರ ಜ್ಞಾನದಿಂದಲೂ ಹೊರಗುಳಿದಿದ್ದಾರೆ. ಇಡೀ ವರ್ಷ ಯಾವುದೇ ಅಧ್ಯಯನ ಇಲ್ಲದೇ ಮುಂದಿನ ತರಗತಿಗೆ ಹೋಗುತ್ತಿರುವ ಈ ಮಕ್ಕಳನ್ನು ಶೈಕ್ಷಣಿಕವಾಗಿ ಯಾವ ರೀತಿ ಸದೃಢಗೊಳಿಸಬೇಕು ಎಂಬುದು ಪಾಲಕರ ಜತೆಗೆ ಶಿಕ್ಷಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೇತುಬಂಧ ವಿಸ್ತರಣೆ: ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಹೋದ ಆರಂಭದಲ್ಲಿ ಶಿಕ್ಷಣ ಇಲಾಖೆ ಪ್ರತಿ ವರ್ಷ ಜೂ.20ವರೆಗೆ “ಸೇತುಬಂಧ’ ಕಾರ್ಯಕ್ರಮ ನಡೆಸುತ್ತದೆ. ಇದರಲ್ಲಿ ಹೊಸ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಯನ್ನು ಪರೀಕ್ಷೆಗೊಳಪಡಿಸಿ ಆ ವಿದ್ಯಾರ್ಥಿ ಹಿಂದಿನ ತರಗತಿಯಲ್ಲಿ ಎಷ್ಟು ಗ್ರಹಿಸಿದೆ, ಎಷ್ಟು ತಿಳಿದಿದೆ ಎಂಬುದನ್ನು ಅರಿಯಲಾಗುತ್ತದೆ. ಬಳಿಕ ಅಂಥ ವಿದ್ಯಾರ್ಥಿಗಳ ಮೇಲೆ 20 ದಿನಗಳ ಕಾಲ ವಿಶೇಷ ಕಾಳಜಿ ವಹಿಸಿ ಅವರನ್ನು ಶೈಕ್ಷಣಿಕವಾಗಿ ಮುಂದೆ ತರುವ ಪ್ರಯತ್ನ ಮಾಡಲಾಗುತ್ತದೆ. ಫಲಿತಾಂಶಕ್ಕಾಗಿ ಇದಕ್ಕೂ ಪರೀಕ್ಷೆ ಮಾಡಿ ಹೊಸ ತರಗತಿಯ ಪಾಠಗಳನ್ನು ಶುರು ಮಾಡಲಾಗುತ್ತದೆ.
ಕೊರೊನಾ ಸಂದರ್ಭದಲ್ಲಿ ಶಾಲೆಗಳೇ ಆರಂಭವಾಗದೇ ಇರುವುದರಿಂದ ಈ ಬಾರಿ ಈ ಸೇತುಬಂಧ ಕಾರ್ಯಕ್ರಮ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಇದರ ಅವಧಿಯನ್ನು ನಾಲ್ಕರಿಂದ ಆರು ತಿಂಗಳವರೆಗೂ ವಿಸ್ತರಿಸುವ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ.
-ಎಚ್.ಕೆ. ನಟರಾಜ