Advertisement
ಸೋಮವಾರ ನಸುಕಿನ ವೇಳೆ ಹೊಸಮಠ ಹಳೆ ಸೇತುವೆಗೆ ತಾಗಿಕೊಂಡಂತೆ ಭೂ ಕುಸಿತ ಉಂಟಾಗಿ ರಸ್ತೆ ಹಾನಿಗೊಂಡು ವಾಹನ ಸಂಚಾರಕ್ಕೆ ತೊಡಕಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ನೂತನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ, ಮಳೆ ಬಿರುಸಾಗುವ ಮೊದಲು ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವಾಗುವಂತೆ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದ್ದರು.
ಸೇತುವೆಯ ಎರಡೂ ಕಡೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 45 ಸೆಂಟ್ಸ್ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಹಿಂದೆ ಗುರುತಿಸಲಾಗಿತ್ತು. ಇದೀಗ ಅದನ್ನು ಕಡಿತಗೊಳಿಸಿ ಕಡಬ ದಿಕ್ಕಿನಲ್ಲಿ ಸುಕೇಶ್ ಹೆಬ್ಟಾರ್ (2 ಸೆಂಟ್ಸ್) ಹಾಗೂ ಗಿರಿಯಪ್ಪ ಗೌಡ (16 ಸೆಂಟ್ಸ್) ಅವರಿಗೆ ಸೇರಿದ ಒಟ್ಟು 18 ಸೆಂಟ್ಸ್ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಉಪ್ಪಿನಂಗಡಿ ಭಾಗದಲ್ಲಿ ಸುಮಾರು 200 ಮೀ. ಹಾಗೂ ಕಡಬ ಭಾಗದಲ್ಲಿ ಸುಮಾರು 300 ಮೀ. ಉದ್ದದ ಸಂಪರ್ಕ ರಸ್ತೆ ನಿರ್ಮಿಸಬೇಕಿದೆ. ಉಪ್ಪಿನಂಗಡಿ ಭಾಗದಲ್ಲಿ ಸಂಪರ್ಕ ರಸ್ತೆಯ ಕಾಮಗಾರಿಗೆ ತೊಡಕಾಗಿರುವ ಎಚ್‌ಟಿ ಲೈನ್‌ನ ವಿದ್ಯುತ್ ಕಂಬ ವನ್ನು ಮೆಸ್ಕಾಂ ಅಧಿಕಾರಿಗಳು ತೆರವುಗೊಳಿಸಿ ಕೊಡಬೇಕಿದೆ. ಕಡಬ ಭಾಗದಲ್ಲಿ ಸಂಪರ್ಕ ರಸ್ತೆ ನಿರ್ಮಿಸಬೇಕಾದ ಜಾಗದ ಪಕ್ಕದಲ್ಲಿರುವ ನೀರು ಹರಿಯುವ ತೋಡಿಗೆ ತಡೆಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಸೇತುವೆ ನಿರ್ಮಾಣ ನಡೆಸುತ್ತಿದ್ದು, ಸಂಪರ್ಕ ರಸ್ತೆಯ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಉಸ್ತವಾರಿಯಲ್ಲಿ ನಡೆಯುತ್ತಿದೆ. ಶೀಘ್ರ ಸಂಪರ್ಕ ರಸ್ತೆಯ ಕಾಮಗಾರಿ ಮುಗಿಸಿ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿ ಯರ್ ಪ್ರಮೋದ್ ಕುಮಾರ್ ಕೆ.ಕೆ. ಅವರು ತಿಳಿಸಿದ್ದಾರೆ.