Advertisement

ಸ್ಮಾರ್ಟ್‌ ಸಿಟಿ ಯೋಜನೆಗೆ ವೇಗ:ಯು.ಟಿ. ಖಾದರ್‌

12:30 AM Feb 01, 2019 | Team Udayavani |

ಬೆಂಗಳೂರು: ರಾಜ್ಯದ ಏಳು ಮಹಾನಗರಗಳಲ್ಲಿ ಸ್ಮಾಟ್‌ ಸಿಟಿ ಯೋಜನೆ ವೇಗ ಪಡೆದುಕೊಂಡಿದ್ದು, 5200  ಕೋಟಿ ರೂ. ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ತಿಂಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರು ಮಹಾನಗರಗಳಲ್ಲಿ 1499 ಕೋಟಿ ರೂ. ಯೋಜನೆಗಳು ಈಗಾಗಲೇ ಕಾರ್ಯಾರಂಭ ಮಾಡಲಾಗಿದ್ದು, 2738 ಕೋಟಿ ರೂ. ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಫೆಬ್ರವರಿ ಅಂತ್ಯದೊಳಗೆ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಗೆ 7 ಸಾವಿರ ಕೋಟಿ ರೂ. ನಿಗದಿ ಪಡಿಸಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ 3500 ಕೋಟಿ ರೂ. ಹಣ ನೀಡಲಾಗುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆಗೆ ಪ್ರತಿ ನಗರಕ್ಕೂ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ರಚಿಸಲಾಗಿದೆ.  ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲಿ ಒಂಬತ್ತನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸಂಪೂರ್ಣ ನಗರಗಳನ್ನು ಸ್ಮಾರ್ಟ್‌ ಮಾಡಲು ಸಾಧ್ಯವಾಗುವುದಿಲ್ಲ. ನಿಗದಿತ ಪ್ರದೇಶದಲ್ಲಿ ಎಲ್ಲ ರೀತಿಯ ಸೌಕರ್ಯಗಳು, ಆಧುನಿಕ ವ್ಯವಸ್ಥೆ ದೊರೆಯುವಂತೆ ಮಾಡಲಾಗುವುದು. ದಾವಣಗೆರೆಯಲ್ಲಿ ಮಂಡಕ್ಕಿ ಕಾರ್ಖಾನೆಗಳನ್ನು ಪರಿವರ್ತಿಸಿ ಆಧುನೀಕರಣಗೊಳಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ಎಲ್‌ಇಡಿ ಬಲ್ಬ್ಗಳ ಅಳವಡಿಕೆ, ಮಾರುಕಟ್ಟೆಗಳ ಅಭಿವೃದ್ಧಿ ಮಾಡಲಾಗುವುದು. ಶಿವಮೊಗ್ಗದಲ್ಲಿ ಕೆರೆಗಳ ಅಭಿವೃದ್ಧಿ, ಮಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ, ಆಸ್ಪತ್ರೆ ಅಭಿವೃದ್ಧಿ ಮಾಡಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ  ಎಲ್ಲ ನಗರಗಳಲ್ಲಿ ಈಗಾಗಲೇ 80 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೂ 65 ಕಿಲೋ ಮೀಟರ್‌ ರಸ್ತೆ ಕಾಮಗಾರಿ ಚಾಲನೆಯಲ್ಲಿದೆ ಎಂದು ಹೇಳಿದರು.

Advertisement

ವಧಾಗಾರ ಆಧುನೀಕರಣಕ್ಕೆ ಕ್ರಮ
ಮಂಗಳೂರಿನಲ್ಲಿ ವಧಾಗಾರ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಆದರೆ, ಈ ಬಗ್ಗೆ ರಾಜಕೀಯವಾಗಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಆದರೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಮತ್ತೂಂದು ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.

ವಧಾಗಾರ  ತ್ಯಾಜ್ಯದಿಂದ ನಗರದ ಇತರ ಪ್ರದೇಶಗಳಲ್ಲಿಯೂ ಅವ್ಯವಸ್ಥೆ ಉಂಟಾಗುತ್ತಿದ್ದು, ರೋಗಗಳಿಗೂ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ವಧಾಗಾರ ಆಧುನಿಕರಣ ಮಾಡುವುದು ಅಗತ್ಯವಿದೆ ಎಂದು ಸಚಿವರು ‌ಮರ್ಥಿಸಿಕೊಂಡರು.

ನಗರ ಪ್ರದೇಶಗಳಲ್ಲಿ ಮನೆಗಳ ಮೇಲೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿಕೊಳ್ಳುವ ರೂಪ್‌ ಟಾಪ್‌ ಯೋಜನೆಯಲ್ಲಿ ನಿಯಮ ಸಡಿಲಿಕೆ ಮಾಡಲಾಗಿದ್ದು, ಫ್ಲೋರ್‌ ಏರಿಯಾ ರೇಷಿಯೋ (ಎಫ್ಎಆರ್‌) ನಿಯಮವನ್ನು ಸರಳೀಕರಣಗೊಳಿಸಿದ್ದು  ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಏಕ ರೂಪ ನಿಯಮ
ರಾಜ್ಯದ 275 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕ ರೂಪದ ಕಟ್ಟಡ ನಿಯಮ ಪಾಲಿಸಲು ರಾಜ್ಯ ಸರ್ಕಾರ,  ಕಾಮನ್‌ ಬಿಲ್ಡಿಂಗ್‌ ಬೈಲಾಸ್‌ 2017 ನ್ನು ಜಾರಿಗೆ ತಂದಿದೆ. ಅದರಂತೆ ರಾಜ್ಯದ ಎಲ್ಲ ಸ್ಥಳೀಯ ನಗರ ಸಂಸ್ಥೆಗಳು ಏಕರೂಪದ ಕಟ್ಟಡ ನಿರ್ಮಾಣ ಪರವಾನಗಿ ನೀಡುವುದು, ಸ್ವಾಧೀನ ಪತ್ರ ನೀಡುವುದು, ನಾಗರಿಕರ ಸುರಕ್ಷತಾ ನಿಯಮ ಪಾಲನೆ, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುರಕ್ಷತಾ ನಿಯಮ, ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ನಿಯಮಗಳನ್ನು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪದಲ್ಲಿ ಜಾರಿಗೆ ತರುವಂತೆ ಸರ್ಕಾರ ನಿಯಮಗಳನ್ನು ಬದಲಾಯಿಸಿದೆ. ಸರ್ಕಾರದ ತಿದ್ದುಪಡಿಯನ್ನು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಅನುಮೋದನೆ ಪಡೆದು ಜಾರಿಗೆ ತರಬೇಕು ಎಂದು ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next