Advertisement
ನಮ್ಮ ಮಾತನ್ನು ಕೇಳುತ್ತಿರುವವರೋ ಓದುತ್ತಿರುವವರೋ ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದೋ ತಪ್ಪು ತಿಳಿಯದಿರಲಿ ಎಂದೋ ಪ್ರಯತ್ನಪೂರ್ವಕವಾಗಿ ಅಥವಾ ರೂಢಿಬದ್ಧವಾಗಿ, ಜಾಣತನದಲ್ಲಿ, ಎಚ್ಚರದಲ್ಲಿ ನುಡಿಸುವ ಮಾತು ಅದು. ಕೇಳುವವರಿಲ್ಲದಾಗ ಮನಸ್ಸಿನಲ್ಲಿ ಮೂಡುವ ಹರಿವ ಹೊನಲಿನಂತಾ ಮಾತಿಗೆ ಹೀಗೆ ಜಾಡಿನ ಹಂಗು ಇರಬಲ್ಲದೆ? ಅಥವಾ ಎಚ್ಚರವೇ ಇಲ್ಲದ ನಿದ್ದೆಯಲ್ಲಿ ನಾವು ನಡೆಸುವ ಮಾತುಕತೆಯಾದ ಕನಸಿನ ಸಂರಚನೆಗೆ ಯಾವ ತರ್ಕ, ಯಾವ ವ್ಯಾಕರಣ? ಎಲ್ಲೋ ಹುಟ್ಟಿ ಎಲ್ಲೋ ಹರಿದು ಇದ್ದಕ್ಕಿದ್ದಂತೆ ವೇಷ ಬದಲಿಸಿ, ಕಾಲ-ದೇಶಗಳ ಹಂಗಿಲ್ಲದೆ ಸಾಗಿಬಿಡುವಾಗಲೂ ಎಚ್ಚರದಲ್ಲಿ ಮತ್ತೆ ನೆನೆವಾಗ ಕೊಟ್ಟ ಹಾಗೆಯೇ ಕೊಟ್ಟ ಅರ್ಥವನ್ನು ಪಡೆದುಕೊಳ್ಳುವ ಕನಸೆಂಬ ಮನೋವ್ಯಾಪಾರವೇ ಮನುಷ್ಯರ ನಿಜವಾದ ಮಾತಿನ ಸ್ವರೂಪ ಇರಬಹುದೇ?
ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನು
ದುಡು ದುಡು ದುಡನೇ ಓಡುವಾ…
ನಡಿ ನಡಿ ನಡಿ ಎಂದು ಮೆಲ್ಲನೆ ಪಿಡಿಯಲು
ಬಿಡಿ ಬಿಡಿ ಬಿಡಿ ದಮ್ಮಯ್ನಾ ಎಂದೆನುವಾ…!
ಅಯ್ಯೋ, ದಮ್ಮಯ್ಯ ಗುಡ್ಡೆ ಹಾಕುವ ಈ ಕೃಷ್ಣನನ್ನು ನಾವ್ಯಾಕೆ ಹಿಡಿದು ಒರಳಿಗೆ ಕಟ್ಟಬೇಕು? ಅವನ ಪಾಡಿಗೆ ಅವನು ಒಲಿದಂತೆ ನಲಿದಂತೆ ಆಡಿ ಹಾಡಿಕೊಂಡಿರಲು ಬಿಡದೆ, ಮಾತು ಎಂಬ ಈ ಮುದ್ದು ಕಂದನನ್ನು ನಾವ್ಯಾಕೆ ಹಿಡಿಯಹೋಗಬೇಕು? ತಾನೇ ತಾನಾಗಿ ತನಗೆ ಬೇಕೆಂದೇ ಮತ್ತೆ ಹಿಂದೆ ಮುಂದೆ ಸುಳಿದು “ಹಿಡಿ ಹಿಡಿ ಹಿಡಿ’ ಎಂದು ತಾನಾಗೇ ಕರೆಯುವವರೆಗೆ ನಾವ್ಯಾಕೆ ಸುಮ್ಮನೆ ಕಾಯಬಾರದು?
Related Articles
Advertisement
ಬಂದರೆ ಬಂದೀತು, ಇಲ್ಲದಿದ್ದರೆ ಇಲ್ಲ ಎಂಬ ನಿರಾಳದಲ್ಲಿ ಮಾತಿಗಾಗಿ ಕಾಯುವುದು ಬೇರೆ ಮಾತು. ಆದರೆ ಆಡಿ ಹಾಡಿ ನಲಿದಾಡಿಕೊಂಡಿದ್ದ ಮಾತೊಂದು ಹೇಳ ಹೆಸರಿಲ್ಲದೆ, ಆಡುವವರೇ ಇಲ್ಲದೆ ಮಾಯುವಾಗುವ ಹೊತ್ತಿನಲ್ಲಿ ಆ ಮಾತನ್ನು ಉಳಿಸಿಕೊಳ್ಳಲು ಹಂಬಲಿಸುವುದು ಇನ್ನೊಂದು ಬೇರೆಯದೇ ಪಾಡು. ಇದು ಬಿಟ್ಟಿದ್ದನ್ನು, ಬಿಡಬೇಕಾಗಿ ಬಂದಿದ್ದನ್ನೂ ಹಾಗೆ ಬಿಟ್ಟ ಕಾರಣಕ್ಕೇ ಮತ್ತೆ ಹಿಡಿಯಲು ಹಂಬಲಿಸುವ, ಕಳೆದಿದ್ದನ್ನು ಹೇಗಾದರೂ ಹುಡುಕಿ ಮತ್ತೆ ತನ್ನದಾಗಿಸಿಕೊಳ್ಳುವ, ಹಾಗೆ ತನ್ನದಾಗಿಸಿಕೊಂಡಾಗಲಷ್ಟೇ ತಾನು ಪೂರ್ಣವಾಗಲು ಸಾಧ್ಯ ಎಂದು ನಂಬುವ ಸಂಕಟ.
ಒಳಿತೆನುವುದನ್ನು ಬಿಡದೆ ಹಿಡಿ,ಅದು ಒಂದು ಹಿಡಿ ಮಣ್ಣಾದರೂ ಸರಿ
ಬಿಡದೆ ಹಿಡಿ ನೀನು ಮನಸಾರೆ ನಂಬಿದ್ದನ್ನ,
ಅದು ಸುಮ್ಮನೆ ತನ್ನಷ್ಟಕ್ಕೇ ನಿಂತಿರುವ
ಮರವಷ್ಟೇ ಆದರೂ ಸರಿ.
ಮಾಡಲೇ ಬೇಕಾದ್ದನ್ನು ಮಾಡಿಯೇ ತೀರು
ಇಲ್ಲಿಂದ ಅದು ಎಷ್ಟು ದೂರವಿದ್ದರೂ ಸರಿ.
ಎಷ್ಟೇ ಕಷ್ಟವಾದರೂ ಸರಿ,
ಸಾಯುವ ಕಡೆ ಗಳಿಗೆಯವರೆಗೂ
ಕೈ ಬಿಡಬೇಡ ಈ ಬದುಕನ್ನ.
ನಿನ್ನಿಂದ ನಾನೆಷ್ಟೇ ದೂರ ಹೋದರೂನೂ
ಬಿಡಬೇಡ ಎಂದೂ
ನನ್ನ ಕೈಯನ್ನ.
ಪಾಬ್ಲೋ ಇಂಡಿಯನ್ನರಾಡುತ್ತಿದ್ದ ಯಾವುದೋ ಭಾಷೆಯಲ್ಲಿರುವ ಈ ಮಾತಂತೂ ಮಾತೇ ಮತ್ತೆ ತನ್ನನ್ನಾಡುವಂತೆ ಆ ಭಾಷಿಕರಲ್ಲಿ ಮೊರೆಯಿಡುವಂತೆ ಕೇಳುತ್ತಿದೆ. ಆದರೆ ಈ ಮೊರೆ ಆ ಭಾಷಿಕರದ್ದೇ ಹೊರತು ಭಾಷೆಯದ್ದಲ್ಲ. ಸೃಷ್ಟಿ, ವಿಕಾಸ, ನಾಶಗಳ ನೆನಪಿನ ನೋವಿನ ಹಂಗು ಮಾತಿಗೆಲ್ಲಿದೆ? ಒಂದೊಮ್ಮೆ ಹತ್ತಾರು ಬೇರೆ ಬೇರೆ ಭಾಷೆಗಳನ್ನು ಆಡುತ್ತಿದ್ದ ಅಮೆರಿಕನ್ ಇಂಡಿಯನ್ ಮೂಲನಿವಾಸಿಗಳಲ್ಲೊಂದಾದ ಪಾಬ್ಲೋ ಸಮುದಾಯದ ಯಾವುದೋ ಒಂದು ಭಾಷೆಯಲ್ಲಿ ಮೂಡಿಬಂದ ಮಾತು ಇದು. ಬಹುತೇಕ ಅಮೆರಿಕನ್ ಮೂಲನಿವಾಸಿಗಳ ಭಾಷೆಗಾದ ಗತಿಯೇ ಪಾಬ್ಲೋ ಸಮುದಾಯಗಳು ಆಡುತ್ತಿದ್ದ ಒಂದಷ್ಟು ಭಾಷೆಗಳಿಗೂ ಒದಗಿಬಂದಿದೆ. ಹಿಂದೆ ಪಾಬ್ಲೋ ಸಮುದಾಯ ಪ್ರವರ್ಧಮಾನದಲ್ಲಿದ್ದಾಗ ತನ್ನದೇ ಸಮುದಾಯದ ಇನ್ನೊಂದು ಗುಂಪು ಆಡುತ್ತಿದ್ದ ಇನ್ನೊಂದೇ ಭಾಷೆಯನ್ನು ಅರಿಯಲು ಒದ್ದಾಡುತ್ತಿದ್ದ ಈ ಸಮುದಾಯ ಈಗ ತನ್ನ ಎಷ್ಟೋ ಭಾಷೆಗಳನ್ನು ಕಳೆದುಕೊಂಡು ಇಡಿಯಾಗಿ ಇಂಗ್ಲಿಶ್ ಭಾಷೆಯನ್ನೇ ಆಡುತ್ತಿದೆ. ಒಂದಾನೊಂದು ಕಾಲದಲ್ಲಿ ತನ್ನ ಮೂಲ ಭಾಷಿಕರು ಆಡಿದ್ದ ಮಾತನ್ನು, ಪ್ರಾರ್ಥನೆಯನ್ನು, ಹರಕೆ, ಹಾರೈಕೆ, ಹಾಡು, ಕಥೆಗಳನ್ನು ಇಂಗ್ಲೀಷಿನ ಮೂಲಕವೇ ಕಂಡುಕೊಳ್ಳುತ್ತಾ ಅಳಿದುಳಿದ ಬಿಡಿ ಮಾತುಗಳನ್ನು ಕಲೆ ಹಾಕಿ ತನ್ನ ಮೂಲ ಭಾಷೆಗಳಲ್ಲಿ ಕೆಲವನ್ನಾದರೂ ಮತ್ತೆ ಅದು ಇದ್ದ ಹಾಗೇ ಕಾಣಲು, ಕಲಿಯಲು, ಆಡಲು ಸಾಧ್ಯವಾ ನೋಡುತ್ತಿದೆ. ಕಾಲದ ಅನಿವಾರ್ಯಗಳಲ್ಲಿ, ಪರಕೀಯತೆಯ ದಾಳಿಯಲ್ಲಿ ಕಾಣೆಯಾಗಿ ಹೋದ ಮೂಲ ನಿವಾಸಿ ಅಮೆರಿಕನ್ನರಾಡುತ್ತಿದ್ದ ನೂರಾರು ಸಾವಿರಾರು ಮಾತುಗಳೆಲ್ಲಾ
ಹೀಗೇ ತಮ್ಮನ್ನು ತಾವು ಮತ್ತೆ ಕಟ್ಟಿಕೊಳ್ಳುವ ಹಂಬಲದಲ್ಲಿವೆ. ಅಂದು ಅವರಾಡುತ್ತಿದ್ದ ಎಷ್ಟೊಂದು ಮಾತುಗಳು, ಎಷ್ಟೊಂದು ಭಾವಗಳು, ಎಷ್ಟೊಂದು ನೋಟಗಳು ಅಂದಿನ ಅದದೇ ಹೆಸರಿನಲ್ಲಿ ಅಥವಾ ಅಲ್ಪ ಸ್ವಲ್ಪ ವೇಷ ಬದಲಿಸಿಕೊಂಡು ನದಿ, ಗುಡ್ಡ, ಬೆಟ್ಟ, ಬಯಲು, ಪ್ರಾಣಿ, ಪಕ್ಷಿ, ಊರುಕೇರಿಗಳ ಹೆಸರುಗಳಾಗಿ ಈ ದೊಡ್ಡ ದೇಶದ ತುಂಬೆಲ್ಲಾ ಹಾಗೇ ಉಳಿದುಕೊಂಡಿವೆ! ಮಾತು ಅಥವಾ ಮೌನವೊಂದು ಹುಟ್ಟುವುದು ಹೇಗೆಂದು ಪೂರ್ಣವಾಗಿ ಅರಿಯಲಾರದ ಮನುಷ್ಯ ಮಾತ್ರರಾದ ನಮಗೂ ನಿಮಗೂ ಅದು ಇಲ್ಲದಾಗುವುದನ್ನು ಮಾತ್ರ ಸಹಿಸದೆ ಸಂಕಟವಾಗುವುದಕ್ಕೆ ಕಾರಣವನ್ನು ವಿವರಿಸಲಾಗದ್ದಕ್ಕೆ ಎಷ್ಟೆಲ್ಲಾ
ಮಾತನಾಡಬೇಕಿದೆ! ಅಥವಾ ಮೌನವನ್ನೇ ಮೊರೆಹೊಕ್ಕು ಈಗ ಸಧ್ಯಕ್ಕೆ ಸುಮ್ಮನೆ ಕುಳಿತು ಡ್ರೀಮ್ ಕ್ಯಾಚರ್‌ನಂಥ ಯಾವುದಾದರೂ ಬಣ್ಣದ ಬಲೆ ಹೆಣೆದು, ಕಾಲವೆಂಬ ಹರಿವ ನೀರಿನಲ್ಲಿ ಅದನ್ನು ಬಿಟ್ಟು, ಕಳೆದುಕೊಂಡ ಮಾತನ್ನೆಲ್ಲಾ
ಮತ್ತೆ ಹಿಡಿಯುವ ಕನಸು ನೇಯಬೇಕಿದೆ. ಮೀರಾ ಪಿ. ಆರ್., ನ್ಯೂಜೆರ್ಸಿ