Advertisement
ಆದರೆ ಕೆಲವರಿಗೆ ಮಾತಿನ ಮೂಲಕ ಸಂವಹನ ನಡೆಸುವುದಕ್ಕೆ ಅಡಚಣೆಗಳಿರುತ್ತವೆ ಹಾಗೂ ಇದನ್ನವರು ಒಪ್ಪಿಕೊಳ್ಳುವುದಕ್ಕೆ ಮತ್ತು ಅದರಿಂದ ಎದುರಾಗುವ ಸವಾಲುಗಳನ್ನು ಎದುರಿಸುವುದಕ್ಕೆ ಹಿಂಜರಿಯುತ್ತಾರೆ. “ನಾನೇ ಏಕೆ? ನನ್ನ ಮಗುವೇ ಏಕೆ?’ ಎಂಬುದು ಇಂಥವರ ಸಾಮಾನ್ಯವಾದ ಕೂಗು. ಇದು ಇಂಥ ಸಮಸ್ಯೆಯುಳ್ಳವರಿಂದ ಪ್ರಾಥಮಿಕವಾಗಿ ವ್ಯಕ್ತವಾಗುವ ಜಾಗತಿಕವಾದ ಪ್ರತಿಕ್ರಿಯೆ. ಸಾಮಾನ್ಯವಾಗಿ ದೈಹಿಕ, ಮಾನಸಿಕ ಅಥವಾ ಸಂವಹನಾತ್ಮಕ ವೈಕಲ್ಯ ಅಥವಾ ಸವಾಲನ್ನು ಹೊಂದಿರುವ ಯಾರೇ ಆದರೂ (ಕೆಲವೊಮ್ಮೆ ಈ ಸಮಸ್ಯೆಗಳು ಪ್ರತ್ಯಕ್ಷವಾಗಿರಬಹುದು, ಕೆಲವು ಸಲ ಅಪ್ರತ್ಯಕ್ಷವಾಗಿರಬಹುದು) ಹತಾಶೆ ಮತ್ತು ಸಿಟ್ಟಿನಿಂದ ವಿಧಿಯನ್ನು ಹಳಿಯುತ್ತಾರೆ ಅಥವಾ ಕುಟುಂಬ ಸದಸ್ಯರನ್ನು ದೂರುತ್ತಾರೆ. “ತಮ್ಮ ಪಾಲಿಗೆ ಇನ್ನಷ್ಟು ಉತ್ತಮ ಜಗತ್ತನ್ನು, ಬದುಕನ್ನು ಸೃಷ್ಟಿಸುವ ಕನಸು ಕನಸಾಗಿಯೇ ಉಳಿಯುತ್ತದೆ, ಅದನ್ನು ನನಸು ಮಾಡುವ ಯಾವ ಪ್ರಯತ್ನವೂ ಸಾಧ್ಯವಿಲ್ಲ, ಹಾಗೆ ಪ್ರಯತ್ನಿಸುವುದು ಮೂರ್ಖತನ’ ಎಂದು ಭಾವಿಸುತ್ತಾರೆ.
Related Articles
Advertisement
ನಿಜ, ಇದೆ. ಈ ವಿಚಾರದಲ್ಲಿ ಮೊದಲನೆಯ ಹೆಜ್ಜೆ ಎಂದರೆ, ತಿಳಿವಳಿಕೆಯನ್ನು ವಿಸ್ತರಿಸುವುದು. ಮಾತನಾಡಲು ತೊಂದರೆ ಹೊಂದಿರುವ ಮಕ್ಕಳು ಮತ್ತು ಹದಿಹರಯದವರ ಅಗತ್ಯಗಳನ್ನು ಆದಷ್ಟು ಶೀಘ್ರವಾಗಿ ಗುರುತಿಸಬೇಕಾಗಿದೆ. ಆಗ ಸಂವಹನ ಕೌಶಲಗಳನ್ನು ಕಲಿತುಕೊಳ್ಳುವುದಕ್ಕಿರುವ ಸವಾಲುಗಳನ್ನು ಎದುರಿಸುವಲ್ಲಿ ಅವರಿಗೆ ನೆರವಾಗಲು ಸಾಧ್ಯವಾಗುತ್ತದೆ. ಕಲಾಪ್ರಕಾರಗಳು, ಸಿನೆಮಾ, ಸಾಹಿತ್ಯ ಮತ್ತು ಇತರ ಸಮೂಹಮಾಧ್ಯಮಗಳಲ್ಲಿ ವೈಕಲ್ಯವನ್ನು ನಾಟಕೀಯವಾಗಿ, ರೂಢಿಗತವಾಗಿ ಚಿತ್ರಿಸಲಾಗುತ್ತಿದ್ದು, ಇದರಿಂದ ಜನರೂ ಅದೇ ಬಗೆಯ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಭಾರತೀಯ ಸಿನೆಮಾ ರಂಗದಲ್ಲಿ ಹಿಂದೆ ವೈಕಲ್ಯಗಳನ್ನು ಹೊಂದಿರುವವರ ಬಗ್ಗೆ ಋಣಾತ್ಮಕ ನಿಲುವು, ಅಭಿಪ್ರಾಯ ಹೊಂದಿರುವ ಸಿನೆಮಾಗಳೇ ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಜ್ಞಾನ ಮತ್ತು ಅರಿವನ್ನು ವೃದ್ಧಿಸುವಂತಹ ಕೆಲವು ಸಿನೆಮಾಗಳು ಬಂದಿವೆ ಎನ್ನುವುದು ಸ್ವಲ್ಪವಾದರೂ ಸಮಾಧಾನಕರ ವಿಚಾರ. ಹಿಂದೆ, ವೈಕಲ್ಯವು ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮಗಳ ಫಲ ಎಂಬ ಚಿತ್ರಣವಿರುವ ಸಿನೆಮಾಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ಉದಾಹರಣೆಗೆ, ಜೀವನ ನ್ಯಾಯ (1936), ಆದ್ಮಿ (1968) ಮತ್ತು ಧನ್‌ವಾನ್ (1981). ಮಾನಸಿಕ ತೊಂದರೆಯುಳ್ಳವರ ಪಾತ್ರಗಳನ್ನು ತಮಾಶೆಗಾಗಿ ಉಪಯೋಗಿಸಲಾಗುತ್ತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಸಿನೆಮಾಗಳಲ್ಲಿ ವೈಕಲ್ಯಗಳನ್ನು ಹೊಂದಿರುವ ಜನರ ಚಿತ್ರಣ ಬದಲಾಗಿದೆ. “ಬ್ಲ್ಯಾಕ್’ (2005)ಕಿವುಡು, ಕುರುಡು ಮತ್ತು ಮೂಗಳಾಗಿದ್ದರೂ ಸಾಕಷ್ಟು ಶ್ರಮಪಟ್ಟು ಶೈಕ್ಷಣಿಕವಾಗಿ ಸಾಧನೆ ಮಾಡುವ ಸಾಧಕಿ ಬಾಲಕಿಯೊಬ್ಬಳ ಕಥೆಯನ್ನು ಚಿತ್ರಿಸುವ ಮೂಲಕ ಈ ಸಿನೆಮಾ ಬದಲಾವಣೆಯ ಗಾಳಿಯನ್ನು ಬೀಸಿತ್ತು. ಡಿಸ್‌ಲೆಕ್ಸಿಯಾ ಹೊಂದಿರುವ ಜನರ ಜೀವನವನ್ನು ಅಮೀರ್ ಖಾನ್ ಅವರ “ತಾರೇ ಜಮೀನ್ ಪರ್’ (2007) ಚಿತ್ರಿಸುತ್ತದೆ. ಪ್ರೊಜೇರಿಯಾ, ಅಸ್ಪರ್ಗರ್‌ನಂತಹ ಅನಾರೋಗ್ಯ ಸ್ಥಿತಿಗಳನ್ನೂ ಸಿನೆಮಾಗಳಲ್ಲಿ ಚಿತ್ರಿಸುವ ಪ್ರಯತ್ನ ನಡೆಸಲಾಗಿದೆ. ಸಾಕಷ್ಟು ಹೆಸರು ಮಾಡಿರುವ ಈ ಸಿನೆಮಾಗಳಿಗಿಂತ ಮುನ್ನವೂ ಕೆಲವು ಸಿನೆಮಾಗಳು ಇಂತಹ ಪ್ರಯತ್ನಗಳನ್ನು ನಡೆಸಿದ್ದವು. “ಕೋಶಿಶ್’ (1972) ಮತ್ತು “ಸ್ಪರ್ಶ್’ (1980) ಸಿನೆಮಾಗಳು ಕಿವುಡು ಮತ್ತು ಅಂಧತ್ವಗಳನ್ನು ಚಿತ್ರಿಸಿವೆ. ಈ ಎಲ್ಲ ಸಿನೆಮಾಗಳು ಕೂಡ ಸಂವಹನ ಸಮಸ್ಯೆಗಳ ಬಗ್ಗೆ ಅರಿವನ್ನು ವಿಸ್ತರಿಸಿವೆ.
ಹಾಗಾದರೆ ಈಗ ಉದ್ಭವಿಸುವ ಪ್ರಶ್ನೆ, ಸಂವಹನ ಸಮಸ್ಯೆ ಇದ್ದರೆ ಯಾರೊಂದಿಗೆ ಸಮಾಲೋಚಿಸಬೇಕು?
ಸಂವಹನ ಸಮಸ್ಯೆಗಳು, ವೈಕಲ್ಯಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡಲು, ಅವರ ಬದುಕಿನ ಗುಣಮಟ್ಟವನ್ನು ಉತ್ತಮಪಡಿಸಲು, ವೈಕಲ್ಯ – ತೊಂದರೆಗಳನ್ನು ಗುರುತಿಸಲು ಮತ್ತು ತೊಂದರೆಗಳನ್ನು ಉಪಶಮನಗೊಳಿಸಲೆಂದೇ ಇರುವ ಆರೋಗ್ಯ ಸೇವಾ ಪರಿಣತರು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ಗಳು ಮತ್ತು ಆಡಿಯಾಲಜಿಸ್ಟ್‌ಗಳು. ಇವರ ಜತೆಗೆ ವೈದ್ಯಕೀಯವಾದ ಬಹುವಿಭಾಗೀಯವಾದ ತಂಡವೂ ಇರುತ್ತದೆ. ಇವರು ಖಾಸಗಿ/ ಸರಕಾರಿ ಆಸ್ಪತ್ರೆಗಳಲ್ಲಿ, ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆಗಳಲ್ಲಿ, ಖಾಸಗಿ ಕ್ಲಿನಿಕ್‌ಗಳಲ್ಲಿ, ಕೆಲವು ಶಾಲೆಗಳಲ್ಲಿ, ಆರೋಗ್ಯ ಸೇವಾ ಕೇಂದ್ರಗಳಲ್ಲಿ, ನ್ಯೂರೊಹ್ಯಾಬಿಲಿಟೇಶನ್ ಕೇಂದ್ರಗಳಲ್ಲಿ, ಎನ್‌ಜಿಒಗಳಲ್ಲಿ ಇವರು ಲಭ್ಯರಿರುತ್ತಾರೆ. ಇನ್ನು ಕೆಲವು ಖಾಸಗಿಯಾಗಿ ಸೇವೆಯನ್ನೊದಗಿಸುತ್ತಾರೆ. ಇವರು ಮಾತು ಮತ್ತು ಭಾಷೆಯ ಕೌಶಲಗಳನ್ನು ಉತ್ತಮಪಡಿಸುವುದಕ್ಕಾಗಿ ಸ್ಪೀಚ್ ಥೆರಪಿ ಒದಗಿಸುತ್ತಾರೆ. ಈ ದಿನಗಳಲ್ಲಿ ನೀವು ಮನೆಯಲ್ಲಿ ಕುಳಿತಿದ್ದೇ ಪಡೆಯಬಹುದಾದ ಟೆಲೆ ರಿಹಾಸ್ಯಬಿಲಿಟೇಶನ್ ಸೇವೆಗಳು ಕೂಡ ಲಭ್ಯವಿವೆ.
ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಗಳು ಮತ್ತು ಆಡಿಯಾಲಜಿಸ್ಟ್ ಗಳ ಬಗ್ಗೆ ಮತ್ತು ಅವರ ಸೇವೆ, ಕೆಲಸಕಾರ್ಯಗಳ ಬಗ್ಗೆ ತಿಳಿಯಲು ನೀವು ಭಾರತೀಯ ಸ್ಪೀಚ್-ಲ್ಯಾಂಗ್ವೇಜ್ ಆ್ಯಂಡ್ ಹಿಯರಿಂಗ್ ಅಸೋಸಿಯೇಶನ್ (ಇಶಾ)ದ ವೆಬ್‌ಸೈಟ್ www.ishaindia.com ಗೆ ಭೇಟಿ ನೀಡಬಹುದು.
ನಾವು – ನೀವು ಮತ್ತು ಪ್ರತಿಯೊಬ್ಬರೂ ಸಂವಹನ ವೈಕಲ್ಯ, ತೊಂದರೆ, ಅಸಾಮರ್ಥ್ಯ ಹೊಂದಿರುವ ಜನರ ಬಾಳಿನಲ್ಲಿ ಬದಲಾವಣೆಯನ್ನು ತರಬಹುದು. ಅವರನ್ನು ಅರ್ಥ ಮಾಡಿಕೊಂಡು, ಅವರನ್ನು ತಿಳಿದುಕೊಂಡು ಅವರು ಕೂಡ ನಮ್ಮವರೇ ಎಂದು ಪರಿಗಣಿಸುವುದರಿಂದ ಇದು ಸಾಧ್ಯವಾಗುತ್ತದೆ. ಹೀಗಾಗಿ ಸೂಕ್ಷ್ಮಗ್ರಾಹಿಗಳಾಗಿ, ನಿಮ್ಮ ಕುಟುಂಬ, ವಾಸಸ್ಥಳ, ಸುತ್ತಮುತ್ತ ಸಂವಹನ ತೊಂದರೆಗಳನ್ನು ಹೊಂದಿರುವ ಮಕ್ಕಳು ಮತ್ತು ವಯಸ್ಕರಿದ್ದರೆ ಆದಷ್ಟು ಬೇಗನೆ ಗುರುತಿಸಿ. ಅಲ್ಲದೆ, ಅವರು ಆದಷ್ಟು ಬೇಗನೆ ಸ್ಪೀಚ್ ಲ್ಯಾಂಗ್ವೇಜ್ ಥೆರಪಿಸ್ಟ್ ಮತ್ತು / ಅಥವಾ ಆಡಿಯಾಲಜಿಸ್ಟ್ ಜತೆಗೆ ಸಮಾಲೋಚನೆ ನಡೆಸುವಂತೆ ನೆರವಾಗಿ. ನಾವೆಲ್ಲರೂ ಜತೆಗೂಡಿ ಅವರ ಬದುಕಿನಲ್ಲಿ ಹೊಸ ಬೆಳಕು ಮೂಡುವಂತೆ ಮಾಡೋಣ.
ಡಾ| ಕೃಷ್ಣ ವೈ.
ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಎಂಸಿಎಚ್ಪಿ, ಮಾಹೆ, ಮಣಿಪಾಲ
ಡಾ| ಅಮೂಲ್ಯಾ ಪಿ. ರಾವ್
ರಿಸರ್ಚ್ ಅಸೋಸಿಯೇಟ್, ಇಂಡಿಯನ್ ಸ್ಪೀಚ್ ಲ್ಯಾಂಗ್ವೇಜ್ ಆ್ಯಂಡ್ ಹಿಯರಿಂಗ್ ಅಸೋಸಿಯೇಶನ್ (ಇಶಾ)