ಪ್ರತಿಯೊಬ್ಬರನ್ನು ವೇದಿಕೆಗೆ ಕರೆಯುವ ಮುನ್ನ ನಾಯಕ ರೋಹಿತ್ ಅವರ ಬಗ್ಗೆ ಒಂದು ದೀರ್ಘವಾದ ವಿವರಣೆ ಕೊಡುತ್ತಿದ್ದರು. ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕ ಇಂಟ್ರೋಡಕ್ಷನ್ ಬಿಲ್ಡಪ್‌ನಂತೆ ಕಾಣುತ್ತಿದುದು ಮಾತ್ರ ಸುಳ್ಳಲ್ಲ. ಹೀಗೆ ಒಬ್ಬೊಬ್ಬರನ್ನೇ ವೇದಿಕೆಗೆ ಕರೆಯುವಷ್ಟರಲ್ಲಿ ಬಹುತೇಕ ಸಮಯ ಕಳೆದು ಹೋಗಿತ್ತು. “ಬಕಾಸುರ’ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಸಿಗಬಹುದೆಂದುಕೊಂಡಿದ್ದ ಪತ್ರಕರ್ತರಿಗೆ ನಿರಾಸೆಯಾಗಿದ್ದಂತೂ ಸುಳ್ಳಲ್ಲ.
ಹೌದು, “ಬಕಾಸುರ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶ್ರೀಮುರುಳಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. “ಇವತ್ತು ನಿಮ್ಮ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಬಂದಿದ್ದಾರೆಂದರೆ ಅದಕ್ಕೆ ಕಾರಣ ನಿಮ್ಮ ಮೇಲೆ ಅವರಿಗಿರುವ ಪ್ರೀತಿ. ಚಿತ್ರರಂಗದಲ್ಲಿ ನಾವು ತುಂಬಾ ಮಂದಿಯನ್ನು ಇಷ್ಟಪಡಬಹುದು, ಮೆಚ್ಚಿಕೊಳ್ಳಬಹುದು.
ಆದರೆ, ನಮ್ಮನ್ನು ಇಷ್ಟಪಡುವ ಹಾಗೂ ಮೆಚ್ಚಿಕೊಳ್ಳುವ ಮಂದಿ ಇದ್ದಾಗಲಷ್ಟೇ ನಮಗೆ ಪ್ರೋತ್ಸಾಹ, ಪ್ರೀತಿ ಸಿಗಲು ಸಾಧ್ಯ’ ಎನ್ನುತ್ತಾ “ಬಕಾಸುರ’ ತಂಡದ ಬೆನ್ನುತಟ್ಟಿದರು ಮುರುಳಿ. “ಕರ್ವ’ ಚಿತ್ರದ ಟ್ರೇಲರ್ ಅನ್ನು ಕೂಡಾ ಮುರುಳಿ ಬಿಡುಗಡೆ ಮಾಡಿದ್ದರಂತೆ. ಆ ಸಿನಿಮಾ ಹಿಟ್ ಆಗಿದ್ದು, ಈಗ “ಬಕಾಸುರ’ ಕೂಡಾ ಅದೇ ರೀತಿ ಯಶಸ್ಸು ಕಾಣುವ ನಿರೀಕ್ಷೆ ಚಿತ್ರತಂಡಕ್ಕಿದೆ.
ಆರಂಭದಲ್ಲಿ “ಬಕಾಸುರ’ ಚಿತ್ರಕ್ಕಿದ್ದ ನಿರ್ಮಾಪಕರು ಬಿಟ್ಟು ಹೋದ ಕಾರಣ, ಚಿತ್ರತಂಡವೇ ಸೇರಿಕೊಂಡು ಸಿನಿಮಾ ಮಾಡಿದೆ. ನಾಯಕ ರೋಹಿತ್ ಕೂಡಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಪ್ರತಿ ಕಲಾವಿದರು, ತಂತ್ರಜ°ರು ಸೇರಿದಂತೆ ಇತರರನ್ನು ಆಯ್ಕೆ ಮಾಡಿದ ಬಗ್ಗೆ ಹಾಗೂ ಚಿತ್ರೀಕರಣದ ಅನುಭವವನ್ನು ರೋಹಿತ್ ಹಂಚಿಕೊಂಡರು.
ಅಂದಹಾಗೆ, ಚಿತ್ರದ ನಿರ್ದೇಶಕ ನವನೀತ್. “ಕರ್ವ’ ನಂತರ ಅವರು ನಿರ್ದೇಶಿಸಿರುವ ಎರಡನೇ ಸಿನಿಮಾ. ಸಿನಿಮಾ ಬಗ್ಗೆ ನಿರ್ದೇಶಕರಿಗಿಂತ ಹೆಚ್ಚು ಮಾತನಾಡಿದ್ದು, ರೋಹಿತ್. ಚಿತ್ರದಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಅವರಿಲ್ಲಿ ಇಲ್ಲಿ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಓಕೆ, ಚಿತ್ರದಲ್ಲಿ ಹಣದ ಹಿಂದೆ ಬೀಳುವ ವ್ಯಕ್ತಿ ಏನೆಲ್ಲಾ ಮಾಡುತ್ತಾನೆ,
ಆತನ ಜೀವನದಲ್ಲಿ ನಡೆಯುವ ರೋಚಕ ಘಟನೆಗಳೇನೂ ಎಂಬುದರ ಸುತ್ತ ಸಿನಿಮಾ ಸಾಗುತ್ತದೆಯಂತೆ. ಅದೇ ಕಾರಣಕ್ಕೆ “ಬಕಾಸುರ’ ಚಿತ್ರಕ್ಕೆ “ಫಾರ್ ಮನಿ’ ಎಂಬ ಟ್ಯಾಗ್‌ಲೈನ್ ಇದೆ. “ಕರ್ವ’ ಸಿನಿಮಾ ಹಾರರ್ ಜಾನರ್‌ಗೆ ಸೇರಿತ್ತು. ಈಗ “ಬಕಾಸುರ’ ಚಿತ್ರದಲ್ಲೂ ಹಾರರ್ ಅಂಶವನ್ನು ಸೇರಿಸಿದ್ದಾಗಿ ಹೇಳುತ್ತಾರೆ ನವನಿತ್.
ಚಿತ್ರದಲ್ಲಿ ಕಾವ್ಯಾ ಗೌಡ ನಾಯಕಿ. “ಗಾಂಧಾರಿ’ ಧಾರಾವಾಹಿಯಲ್ಲಿ ನಟಿಸಿರುವ ಕಾವ್ಯಾ ಅವರಿಗೆ ಇದು ಮೊದಲ ಸಿನಿಮಾ. ಚಿತ್ರೀಕರಣದ ಅನುಭವ ಹಂಚಿಕೊಂಡು ಥ್ರಿಲ್ ಆದರು ಕಾವ್ಯಾ. ಚಿತ್ರದಲ್ಲಿ ನಟಿಸಿದ ವಿಜಯ್ ಚೆಂಡೂರು ಕೂಡಾ ಮಾತನಾಡಿದರು. ಚಿತ್ರಕ್ಕೆ ಅವಿನಾಶ್ ಸಂಗೀತ, ಮೋಹನ್ ಛಾಯಾಗ್ರಹಣವಿದೆ.