Advertisement

ಸೊಬಗು, ಐಶ್ವರ್ಯದ ಪ್ರತೀಕ ವಿಷು

11:46 AM Apr 15, 2018 | Team Udayavani |

ಸೌರ ಯುಗಾದಿಯನ್ನು ‘ಬಿಸು ಪರ್ಬ’ (ಎ. 15ರಂದು) ಎಂದು ತುಳುನಾಡಿನಾದ್ಯಂತ ಆಚರಿಸಲಾಗುತ್ತದೆ. ವಸಂತ ಋತುವಿನ ಚೈತ್ರಮಾಸದಲ್ಲಿ ಸೂರ್ಯ ಮೀನ ರಾಶಿಯಿಂದ ಮೇಷ ರಾಶಿ ಪ್ರವೇಶಿಸುವ ಪರ್ವಕಾಲವೇ ಸೌರಮಾನ ಯುಗಾದಿ. ವಿಷು ಎಂಬ ಪದಕ್ಕೆ ಹಗಲು-ರಾತ್ರಿ ಸಮ ಪ್ರಮಾಣದಲ್ಲಿರುವ ದಿನ ಎಂದರ್ಥ ಕೂಡ ಇದೆ.

Advertisement

ಇದು ನವ ಮನ್ವಂತರದ ಕಾಲ. ಹಬ್ಬದ ಸಡಗರದ ಜತೆಗೆ ಜನರ ಮನದಲ್ಲಿ ಹೊಸ ಕನಸುಗಳು ಚಿಗುರುವ, ಭರವಸೆ, ಆಶಯ, ಬಯಕೆ ಕವಲೊಡೆಯುವ ಸಮಯ. ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಬಾಂಧವ್ಯ, ಗೌರವ ಮನೋಭಾವ ವೃದ್ಧಿಸಲಿ. ಜೀವನದಲ್ಲಿ ಏನೇ ಏರುಪೇರುಗಳು ಸಂಭವಿಸಿದರೂ ಸರ್ವರೂ ಸಮನ್ವಯ ದಿಂದ ಒಟ್ಟಾಗಿ ಬಾಳಬೇಕೆನ್ನುವುದು ಈ ದಿನದ ಸಂಕಲ್ಪ.

ಸಮೃದ್ಧ, ಸಂಪ ದ್ಭರಿತ, ಸೊಬಗು, ಐಶ್ವರ್ಯದ ಪ್ರತೀಕವಾದ ಈ ವಿಷು ಆಚರಣೆಯಲ್ಲಿ ಕಣಿ ನೋಡುವುದು ವಿಶೇಷ. ಹೊಸ ವರುಷದ ಆರಂಭದಲ್ಲಿ ಶುಭ ಶಕುನ ನೋಡಬೇಕು, ಸುವಸ್ತುಗಳ ದರ್ಶನ ಮಾಡಿದರೆ ಮುಂದೆ ವರ್ಷವಿಡೀ ಶುಭ ವಾಗು ತ್ತದೆ ಎನ್ನುವುದು ನಮ್ಮ ಸಂಪ್ರದಾಯದ ನಂಬಿಕೆ ಕೂಡ ಹೌದು. ಇದರಿಂದ ಧನಾತ್ಮಕ ಭಾವನೆ ವೃದ್ಧಿಯಾಗುತ್ತದೆ.

ಕಣಿ ನೋಡುವುದು ವಿಶಿಷ್ಟ ಅನುಭವ
ವಿಷು ಮುನ್ನಾದಿನವೇ ಕಣಿ ಇಡಲು ಬೇಕಾಗುವ ಸಾಮಗ್ರಿಗಳನ್ನು ಮನೆಯ ಮಹಿಳೆಯರು ಜೋಡಿಸಿಡುತ್ತಾರೆ. ಮನೆಯವರೆಲ್ಲ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರ ಕೋಣೆಯಲ್ಲಿ ಇರಿಸಿದ ಕಣಿಯನ್ನು ನೋಡುವುದು ಒಂದು ವಿಶಿಷ್ಟ ಮತ್ತು ಅಪೂರ್ವ ಕ್ಷಣ. ಕಣಿ ಕಂಡ ತತ್‌ಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಕೊಳ್ಳಬೇಕು ಎಂಬ ಹೇಳಿಕೆ ಯೊಂದಿದೆ. ಇದರಿಂದ ಆಯಸ್ಸು, ಆರೋಗ್ಯ, ಐಶ್ವರ್ಯಗಳ ಸಮೃದ್ಧಿಯಾಗುವುದು ಎಂಬ ಆಶಯ. 

ಕಣಿಯಲ್ಲಿ ಇಡಲಾಗುವ ತೆಂಗಿನಕಾಯಿ ಸಂಪತ್ತಿನ ಚಿಹ್ನೆ ಯಾದರೆ, ಭತ್ತ ಬೆಳೆಯ ಸಂಕೇತ. ಆಭರಣಗಳು ಐಶ್ವರ್ಯದ, ಫಲಪುಷ್ಪ, ತರಕಾರಿಗಳು ಏಳಿಗೆಯ ಪ್ರತೀಕ. ಕಣಿ ನೋಡಿದ
ಬಳಿಕ ಮನೆಯ ಕಿರಿಯರು ಹಿರಿಯರಿಗೆ ವಂದಿಸಿ ಆಶೀರ್ವಾದ ಪಡೆಯುವುದು ವಿಷು ಆಚರಣೆಯ ಒಂದು ಭಾಗ. ಆಗ ಹಿರಿಯರು ಕಿರಿಯರಿಗೆ ದಕ್ಷಿಣೆಯಾಗಿ ನಾಣ್ಯವನ್ನು ಕೊಡುವ ಸಂಪ್ರದಾಯವೂ ಕೆಲವೆಡೆ ಇದೆ. ಕೇರಳದಲ್ಲಿ ಈ ಪದ್ಧತಿಗೆ ‘ವಿಷು ಕೈನೀಟ್ಟಂ’ ಎನ್ನುತ್ತಾರೆ. ಹಿಂದೆ ಚಿನ್ನದ ನಾಣ್ಯಗಳನ್ನೇ ಕೊಡುತ್ತಿದ್ದರಂತೆ.

Advertisement

ಕೊನ್ನೆ ಹೂವಿಗೆ ವಿಶೇಷ ಸ್ಥಾನ
ಕೇರಳದಲ್ಲಿ ಕಣಿ ಇಡಲು ಕೊನ್ನೆ ಹೂವು ಬೇಕೇ ಬೇಕು. ಅಲ್ಲಿನ ರಾಜ್ಯ ಪುಷ್ಪ ಎಂದು ಗುರುತಿಸಲಾದ ಕರ್ಣಿಕಾರ (ಕೊನ್ನೆ ಹೂ) ಹೊಂಬಣ್ಣದಿಂದ ಕಂಗೊಳಿ ಸುವುದರಿಂದ ಅದರಂತೆ ಸಂಪತ್ತು ಸಮೃದ್ಧಿಯಾಗಲಿ ಎಂಬುದು ಅವರ ನಂಬಿಕೆ.

ಈ ದಿನ ತಮ್ಮ ಹಿತ್ತಲಲ್ಲಿ ಬೆಳೆದ ತರಕಾರಿ ಗಳನ್ನೋ ಇನ್ನಿತರ ವಸ್ತುಗಳನ್ನೋ ಊರಿನ ಮುಖ್ಯಸ್ಥರ, ಧಣಿಗಳ ಮನೆಗೆ, ಊರಿನ ಪ್ರಮುಖ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ ಬಿಸುಕಾಣಿಕೆ ನೀಡುವ ಕ್ರಮ ಕೂಡ ಕೆಲವೆಡೆ ಆಚರಣೆಯಲ್ಲಿದೆ.

ಅಂದು ವಿಶೇಷವಾಗಿ ಹಲಸಿನ ಕಾಯಿ, ಹಣ್ಣು, ಮಾವಿನ ಹಣ್ಣುಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಖಾದ್ಯ, ಎಳೆಗೇರು ಬೀಜದ ಪಾಯಸ, ಉದ್ದು, ಅಕ್ಕಿ ಬಳಸಿ ವಿವಿಧ ರೀತಿಯ ಕಡುಬುಗಳನ್ನು ತಯಾರಿಸುತ್ತಾರೆ.

ಕೃಷಿ ಚಟುವಟಿಕೆಗಳಿಗೆ ಚಾಲನೆ
ವಿಷು ಹಬ್ಬದಂದು ತುಳುನಾಡಿನಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ. ಗದ್ದೆ ಉಳು ವುದು, ಬೀಜ ಬಿತ್ತುವುದು ಇತ್ಯಾದಿ ಕೆಲಸ ಕಾರ್ಯಗಳಿಗೆ ಅಂದು ಮುಹೂರ್ತ ನೆರವೇರಿಸಲಾಗುತ್ತದೆ. ಕೇರಳದಲ್ಲಿ ಈ ದಿನವನ್ನು ‘ಕಾರ್ಷಿಕೋತ್ಸವ’ (ಕೃಷಿ ಉತ್ಸವ) ಎಂದೇ ಆಚರಿಸಲಾಗುತ್ತದೆ. 

‘ಕಣಿ’ ಎಂದರೇನು?
ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ರಂಗೋಲಿ ಹಾಕಿ, ತೆಂಗಿನಕಾಯಿ, ಅಕ್ಕಿ, ಅಡಿಕೆ, ವೀಳ್ಯದೆಲೆ, ಕಲಶ, ಕನ್ನಡಿ, ಭತ್ತ, ಅರಶಿನ ಕುಂಕುಮ, ನವ ಧಾನ್ಯಗಳು, ಬಂಗಾರದ ಆಭರಣ, ಹೂಮಾಲೆ, ವಿವಿಧ ರೀತಿಯ ಹಣ್ಣುಹಂಪಲು, ತರಕಾರಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಜೋಡಿಸಿ ಇಡುವುದನ್ನು ಕಣಿ ಎನ್ನುವರು.

ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next