Advertisement

ಶಿಲ್ಪಕಲೆ ವೈಶಿಷ್ಟ್ಯದ ಉಂಡಾರು ದೇವಸ್ಥಾನ 

01:29 PM Apr 11, 2020 | Karthik A |

ಕಾಪು : ಇನ್ನಂಜೆ ಗ್ರಾಮದ ಪ್ರಸಿದ್ಧ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸುಮಾರು 6 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಅಪೂರ್ವ ಶಿಲ್ಪಕಲೆ ನಿರ್ಮಿತಿಗಳು ಗಮನಸೆಳೆಯುತ್ತಿವೆ. ಉಡುಪಿ ಶ್ರೀ ಸೋದೆ ಮಠದ ಆಡಳಿತಕ್ಕೊಳಪಟ್ಟಿರುವ ಈ ಕ್ಷೇತ್ರದಲ್ಲಿ ಬ್ರಹ್ಮಕಲಶ ಕಾರ್ಯಕ್ರಮ ನಡೆಯುತ್ತಿದೆ.

Advertisement

ಪ್ರಾಸಾದ 
ಸಮಚತುರಶ್ರೀ ಆಕೃತಿಯ 6 ಕೋಲು 10 ಅಂಗುಲ ವಿಸ್ತಾರದ‌ ವೃಷಭಾಯದಲ್ಲಿ ಪ್ರಾಸಾದವಿದೆ. ಗೋಡೆಯಲ್ಲಿ ಶಿಲೆಯಲ್ಲಿ ನಿರ್ಮಿಸಿದ  ಅಪರೂಪದ ಶಾಲಾ – ಕೂಟ – ನಾಸಿಕ ಪಂಜರ ಎಂಬ ಅಲಂಕಾರಗಳಿವೆ. ಪ್ರಾಸಾದವು ದ್ವಿತಲವಾಗಿದ್ದು ತಾಮ್ರದ ಮಾಡನ್ನು ಹೊಂದಿದೆ.

ನಮಸ್ಕಾರ ಮಂಟಪ
ಚತುರಶ್ರೀ ಆಕಾರದ ನಮಸ್ಕಾರ ಮಂಟಪವು ಕದಂಬ ಹಾಗೂ ಹೊಯ್ಸಳರ ಶೈಲಿಯ ಘಂಟೆಯಾಕಾರದ ನಾಲ್ಕು ಸ್ತಂಭಗಳನ್ನು ಹೊಂದಿದೆ. ಇದನ್ನು ಸ್ಥಳೀಯವಾದ ಕರಿಶಿಲೆಯಲ್ಲಿ (ಸೋಮನಾಥ ಶಿಲೆ) ಕೆತ್ತಲಾಗಿದ್ದು ಇದರಲ್ಲಿ ಪ್ರತಿಬಿಂಬವು ನೇರವಾಗಿ ಹಾಗೂ ತಲೆಕೆಳಗಾಗಿ ಏಕಕಾಲದಲ್ಲಿ ಮೂಡುತ್ತದೆ.

ಎಂಟೆಂಟು ಸಣ್ಣ ಕಂಬಗಳನ್ನು ಒಳಗೊಂಡಿರುವ ಸಂಗೀತ ಸ್ತಂಭ (ಹಂಪೆಯ ವಿಜಯ ವಿಠಲ ದೇಗುಲದಂತೆ) ಇಲ್ಲಿದ್ದು, ವೃತ್ತಾಕಾರದಲ್ಲಿವೆ. ನಮಸ್ಕಾರ ಮಂಟಪದ ಮೇಲ್ಭಾಗದ ಮುಚ್ಚಿಗೆಗೆ ಪ್ರಾಚೀನ ಹೊಯ್ಸಳ ಹಾಗೂ ಇತ್ತೀಚಿನ ಕೆಳದಿ ಶೈಲಿಗಳನ್ನು ಅನುಸರಿಸಲಾಗಿದೆ.

ನಕ್ಷತ್ರಾಕಾರದ ಮುಖ್ಯಪ್ರಾಣ ಗುಡಿ


ಹೊರಸುತ್ತಿನಲ್ಲಿ ಭೂತರಾಜರ ಮಾಡವನ್ನು ಪ್ರಾಚೀನ ಶೈಲಿಯಲ್ಲಿ ರಚಿಸಲಾಗಿದೆ. ದೇವಾಲಯದ ಈಶಾನ್ಯ ಭಾಗದಲ್ಲಿ ಮುಖ್ಯಪ್ರಾಣ ದೇವರ ಗುಡಿಯನ್ನು ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ಬಲಿಮಂಟಪ ಅಗ್ರ ಸಭೆಗಳ ಮೇಲ್ಭಾಗದಲ್ಲಿ ಮುಚ್ಚಿಗೆಯಲ್ಲಿ ದಾರುಶಿಲ್ಪಗಳನ್ನು ರಚಿಸಲಾಗಿದೆ. ಅಷ್ಟದಿಕ್ಪಾಲಕರು – ಕೃಷ್ಣಾವತಾರದ ಲೀಲೆಗಳ ಶಿಲ್ಪಗಳು ಅತ್ಯಾಕರ್ಷಕವಾಗಿ ಮೂಡಿ ಬಂದಿದೆ. ಮಂಟಪದ ಸ್ತಂಭಗಳಲ್ಲಿ ದಶವತಾರದ ಶಿಲ್ಪಗಳಿವೆ. ಮಂಟಪದ ಮಾಡಿಗೆ ತಾಮ್ರ ಹೊದೆಸಿ ಅಲಂಕರಿಸಲಾಗಿದೆ.

Advertisement

ಸುತ್ತುಪೌಳಿ
ಸುತ್ತುಪೌಳಿಯ ತಳಭಾಗ ಶಿಲಾಮಯವಾಗಿದ್ದು, ಗೋಡೆಯನ್ನು ಕೆಂಪುಕಲ್ಲಿನಿಂದ (ಮುರ) ರಚಿಸಲಾಗಿದೆ. ನೈವೇದ್ಯ ಶಾಲೆ, ಭದ್ರತಾ ಕೊಠಡಿ, ಯಾಗಶಾಲೆ, ಉಗ್ರಾಣಗಳಿವೆ. (ಗಣಪತಿ ಹಾಗೂ ವಿಷ್ಣು ಬಿಂಬಗಳಿಗೆ ಶಿಲಾಮಯ ಗುಡಿಯನ್ನು ರಚಿಸಲಾಗಿದೆ.)

ಮುಂಭಾಗದ ಪೌಳಿ


ಮುಂಭಾಗದ ಪೌಳಿಯನ್ನು ಮೂರು ನೆಲೆಯಲ್ಲಿ ರೂಪಿಸಲಾಗಿದೆ. ತಳಭಾಗ ಶಿಲಾಮಯವಾಗಿಸಿ ಮುಂಭಾಗದಲ್ಲಿ ಸ್ತಂಭಗಳನ್ನು ನಿಲ್ಲಿಸಲಾಗಿದೆ. ಇದರಲ್ಲಿ ಎರಡು ಸಂಗೀತ ಸ್ತಂಭಗಳನ್ನು ಅಳವಡಿಸಲಾಗಿರುವುದು ವಿಶೇಷ. ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಇವರ ಮಾರ್ಗದರ್ಶನ ದಲ್ಲಿ ಎಂಜಿನಿಯರ್‌ ವಿಷ್ಣುಮೂರ್ತಿ ಭಟ್‌ ಎಲ್ಲೂರು ಜೀರ್ಣೋದ್ಧಾರದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next