Advertisement

ಗಿಡಮೂಲಿಕೆಗಳ ಆಗರ, ಶಿವಯೋಗಿಗಳ ತಪವನ, ತುಮಕೂರಿನ ಪ್ರವಾಸಿ ತಾಣ ಸಿದ್ದರ ಬೆಟ್ಟ

11:04 AM Jun 08, 2021 | Team Udayavani |

ಪುರಾತನ ಕಾಲದಿಂದಲೂ ಯತಿಗಳು, ಋಷಿ ಮುನಿಗಳು ಲೌಕಿಕ ಬದುಕಿನಿಂದ ದೂರ ಉಳಿಯಲು, ದೈವ ಸ್ಮರಣೆಗಾಗಿ ಹೆಚ್ಚಾಗಿ ನಿರ್ಜನ  ಪ್ರದೇಶಗಳಾದ ಬೆಟ್ಟ ಗುಡ್ಡಗಳಲ್ಲಿರುವ ಗವಿಗಳಲ್ಲಿ ತಪೋನಿರತರಾಗುತ್ತಿದ್ದರು. ಹೀಗಿರುವ ಬೆಟ್ಟಗಳ ಪೈಕಿ ತುಮಕೂರಿನ ’ಸಿದ್ದರ ಬೆಟ್ಟ’ ಕೂಡ ಒಂದು. ಈ ಬೆಟ್ಟದಲ್ಲಿ ನೂರಾರು ತಪಸ್ವಿಗಳು ಸಿದ್ದಿಯನ್ನು ಪಡೆದಿದ್ದಾರೆ. ಹಾಗಾಗಿ ಈ ಬೆಟ್ಟಕ್ಕೆ ಸಿದ್ದರ ಬೆಟ್ಟ ಎಂಬ ಹೆಸರಿದೆ.

Advertisement

ತುಮಕೂರು ಜಿಲ್ಲೆಯ ಪ್ರವಾಸಿ ತಾಣ :

ಮಹಾಶಿವಯೋಗಿಗಳಾದ ಸಿದ್ದೇಶ್ವರರು ಈ ಬೆಟ್ಟದ ಮೇಲೆ ನೆಲೆಗೊಂಡು ಪುನೀತರಾದಂತಹ ಪುಣ್ಯಕ್ಷೇತ್ರ.  ಈ ಕ್ಷೇತ್ರವು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚಂದ್ರಾಯನದುರ್ಗ ಹೋಬಳಿಯಲ್ಲಿದೆ. ಇದು ಜಿಲ್ಲಾಕೇಂದ್ರದಿಂದ ಸುಮಾರು 35 ಕಿ.ಮೀ ಅಂತರದಲ್ಲಿದ್ದು, ಬೆಂಗಳೂರಿಗೆ 110 ಕಿ.ಮೀ ದೂರದಲ್ಲಿದೆ. ಈ ಪ್ರದೇಶಕ್ಕೆ ಬೂದುಗವಿ, ಸುವರ್ಣ ಗಿರಿ, ಸಂಜೀವಿನಿ ಬೆಟ್ಟ ಎಂಬ ಹಲವು ಹೆಸರುಗಳಿಂದ ಕರೆಯುವುದುಂಟು. ಇದು ಒಂದು ಎತ್ತರವಾದ ಬೆಟ್ಟವಾಗಿದ್ದು, ಬೆಟ್ಟವನ್ನು ಏರುವಾಗ ಕೆಲವೆಡೆ ಸಲೀಸಾಗಿಯೂ, ಹಲವೆಡೆ ಕಡಿದಾಗಿಯೂ ಮೆಟ್ಟಿಲುಗಳಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದಂತಹ ತಾಣವಾಗಿದೆ.

ತುಮಕೂರಿನಲ್ಲಿರುವ ಹಲವು ಬೆಟ್ಟಗಳಲ್ಲಿ ಸಿದ್ದರಬೆಟ್ಟವು ಪ್ರಮುಕವಾದುದು. ಈ ಬೆಟ್ಟದ ಬುಡದಲ್ಲಿಯೂ ಸಹ ಒಂದು ಸಿದ್ದೇಶ್ವರ ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಅಮ್ಮಾಜಮ್ಮ ಎಂಬ ಪುಟ್ಟದಾದ ಮಠವಿದೆ. ಅಲ್ಲದೇ ಬಾಳೆಹೊನ್ನೂರಿನ ಶಾಖಾ ಮಠವು ಇದ್ದು, ಸಂಸ್ಕೃತ ಶಾಲೆಯನ್ನು ಹೊಂದಿದೆ. ಶ್ರೀ ವೀರಭದ್ರೇಶ್ವರ ಶಿವಾಚಾರ‍್ಯರು ಇಲ್ಲಿಯ ಮಠಾಧೀಶರು. ಇತ್ತೀಚೆಗೆ ಈ ಮಠವು ಹೆಚ್ಚು ಅಭಿವೃದ್ದಿಯನ್ನು ಹೊಂದುತ್ತಿದೆ. ಬೆಂಗಳೂರಿನಿಂದ ತುಮಕೂರಿಗೆ ಸಾಗುವ ಹಾದಿಯಲ್ಲಿ ದಾಬಸ್ ಪೇಟೆ ಬಳಿ ಇದೇ ಹೆಸರಿನ ಸಿದ್ದರಬೆಟ್ಟ ಎಂಬ ಇನ್ನೊಂದು ಬೆಟ್ಟವಿದೆ. ಇದನ್ನು ನಿಜಗಲ್ ಬೆಟ್ಟವೆಂದೂ ಕರೆಯುವರು. ಆದರೆ ಇವೆರಡೂ ಬೇರೆ ಬೇರೆ ಬೆಟ್ಟಗಳಾಗಿವೆ.

Advertisement

ಸಿದ್ದೇಶ್ವರನು ಪರಶಿವನ ಉದ್ಬವ ಮೂರ್ತಿ :

ಸಿದ್ದರ ಬೆಟ್ಟದ ಮೇಲಿರುವ ಸಿದ್ದೇಶ್ವರ ಗುಡಿಗೆ ಎಲ್ಲಾ ದೇವಸ್ಥಾನಗಳ ರೀತಿ ಕಟ್ಟಡವಿಲ್ಲ. ಇದು ಬಂಡೆಗಳಿಂದ ಸುತ್ತುವರಿದ ಗವಿಯಾಗಿದೆ. ಇಲ್ಲಿ ಸಿದ್ದೇಶ್ವರನು ಪರಶಿವನ ಉದ್ಬವ ಮೂರ್ತಿಯಾದ ಲಿಂಗದ ರೂಪದಲ್ಲಿ ಪೂಜಿಸಲ್ಪಡುವನು. ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ತಾವು ಸಾಕಿರುವ ಹಸು ಎಮ್ಮೆಗಳು ಕರು ಹಾಕಿದಾಗ, ಆ ಜಾನುವಾರಗಳ ಹಾಲಿನಿಂದ ದೊರೆತ ಬೆಣ್ಣೆಯಿಂದ ಮಾಡಿದ ತುಪ್ಪವನ್ನು ಸಿದ್ದೇಶ್ವರನಿಗೆ ಅರ್ಪಿಸಿ, ದೀಪ ಹಚ್ಚುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ. ಈ ಸಿದ್ದೇಶ್ವರನು ಒಬ್ಬಟ್ಟು (ಹೋಳಿಗೆ) ಪ್ರಿಯನೆಂಬ ನಂಬಿಕೆಯಿದ್ದು, ಇಲ್ಲಿಗೆ ಬರುವ ಭಕ್ತರು ದೇವರಿಗೆ ಹೋಳಿಗೆಯ ನೈವೇದ್ಯವನ್ನು ತಪ್ಪದೇ ಮಾಡಿ ತಮ್ಮ ಇಷ್ಟಾರ್ಥಗಳನ್ನು ಕೋರಿ ಈಡೇರಿಸಿಕೊಳ್ಳುವರು. ಸಿದ್ದೇಶ್ವರನ ಎದುರಿಗೆ ಸದಾ ನೀರಿನಿಂದ ತುಂಬಿರುವ ಒಂದು ಪುಶ್ಕರಣಿಯಿದೆ. ಇದುವೇ ಸುವರ್ಣಮುಕಿ ನದಿಯ ಉಗಮಸ್ತಾನವಾಗಿದೆ. ಈ ಪುಶ್ಕರಣಿಯಲ್ಲಿ ನೀರು ಸದಾ ತುಂಬಿರುತ್ತದೆ ಮತ್ತು ಇದನ್ನು ಇಲ್ಲಿಗೆ ಬರುವ ಭಕ್ತರಿಗೆ ಪವಿತ್ರ ಜಲವೆಂದು ನೀಡಲಾಗುತ್ತದೆ.

ರಾಮಾಯಣದ ನಂಬಿಕೆ ಇದೆ :

ಸಿದ್ದರಬೆಟ್ಟದಲ್ಲಿ ಹೆಚ್ಚಾಗಿ ಗವಿಗಳಿದ್ದುದ್ದರಿಂದ ನೂರಾರು ಸಾದು ಸಂತರು ಇಲ್ಲಿ ನೆಲೆಯೂರಿದ್ದರೆಂಬ ನಂಬಿಕೆಯಿದೆ. ಈ ಬೆಟ್ಟದ ಮತ್ತೊಂದು ಪ್ರಮುಕ ವಿಶೇಷತೆಯಂದರೆ, ಇಲ್ಲಿರುವ ಹಲವು ಬಗೆಯ ಔಷಧೀಯ ಗುಣಗಳುಳ್ಳ ಸಸಿಗಳ ತಳಿಗಳು. ಒಮ್ಮೆ ತ್ರೇತಾಯುಗದಲ್ಲಿ ರಾವಣನೊಡನೆ ಹೋರಾಡುವಾಗ ಲಕ್ಶ್ಮಣನು ಮೂರ್ಛೆ ತಪ್ಪಿ ಸಾವು ಬದುಕಿನ ನಡುವೆ ಸಿಲುಕಿರುತ್ತಾನೆ. ಆ ಸಮಯದಲ್ಲಿ ರಾಮನ ಆಣತಿಯಂತೆ ಹನುಮಂತನು ಸಂಜೀವಿನಿ ಸಸ್ಯವನ್ನು ತರಲು ಕೈಲಾಸ ಪರ್ವತಕ್ಕೆ ಹೋಗಿರುತ್ತಾನೆ. ಆ ಸಮಯದಲ್ಲಿ ಆಂಜನೇಯನಿಗೆ ಆ ಗಿಡ ಯಾವುದೆಂದು ಹರಿಯದೆ ಇಡೀ ಬೆಟ್ಟವನ್ನೇ ಹೊತ್ತು ತರುತ್ತಾನೆ ಎಂಬ ನಂಬಿಕೆ ಇದೆ.

ಹೀಗೆ ತರುವ ಮಾರ್ಗ ಮಧ್ಯದಲ್ಲಿ ಅದರ ತುಣುಕುಗಳು ಭೂಮಿಯ ಮೇಲೆ ಬಿದ್ದಿರುತ್ತದೆ ಎಂದು ನಂಬಲಾಗಿದೆ. ಹೀಗೆ ಬಿದ್ದ ತುಣುಕುಗಳಲ್ಲಿ ಕೆಲವು ಸಿದ್ದರ ಬೆಟ್ಟದಲ್ಲೂ ಬಿದ್ದವು ಎಂಬ ಪೌರಾಣಿಕ ಹಿನ್ನೆಲೆಯಿದೆ. ಆದ್ದರಿಂದ ಇಲ್ಲಿ ಔಷಧೀಯ ಗುಣಗಳುಳ್ಳ  ಸಸ್ಯಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಬೆಟ್ಟವನ್ನು ಸಂಜೀವಿನಿ ಬೆಟ್ಟವೆಂತಲೂ ಕರೆಯುವರು.

ಸಿದ್ದರಬೆಟ್ಟದಲ್ಲಿನ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಕಾಗೆಗಳು ಕಾಣಸಿಗುವುದಿಲ್ಲ. ಹಿಂದೆ ಕಾಕಾಸುರನೆಂಬ ಕಾಗೆಯು ಶಾಪಗ್ರಸ್ತನಾಗಿ ಇಲ್ಲಿಗೆ ಕಾಗೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಸಿದ್ದರಬೆಟ್ಟದ ಮೇಲೆ ಒಂದು ಕೋಟೆ ಇದೆ. ಇದನ್ನು ಕುರಂಕೋಟೆಯನ್ನು ಆಳುತ್ತಿದ್ದ ಕುರಂಗರಾಯನೆಂಬ ಪಾಳೆಗಾರನು ನಿರ್ಮಿಸಿದ್ದನೆಂಬ ಇತಿಹಾಸವಿದೆ. ಶಿವರಾತ್ರಿಯಂದು ಸಿದ್ದರಬೆಟ್ಟದ ಸಿದ್ದೇಶ್ವರನಿಗೆ ವಿಶೇಷ ಪೂಜೆಗಳು ಜರುಗುತ್ತವೆ ಮತ್ತು ಆಗ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಸಿದ್ದರಬೆಟ್ಟದ ಪ್ರಶಾಂತತೆ, ಹಸಿರಿನ ಹೊದಿಕೆ ಎಂತಹವರನ್ನು ಆಕರ್ಷಿಸಿಬಿಡುತ್ತದೆ. ಇಲ್ಲಿಗೆ ಬಸ್ಸು ಮತ್ತಿತರ ಸಾರಿಗೆ ಸೌಲಭ್ಯ ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next