ಕಲಬುರಗಿ: ಸರ್ಕಾರದ ವಿವಿಧ ಇಲಾಖೆಯಲ್ಲಿ ಕಿವುಡ-ಮೂಕರನ್ನು ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಜಿಲ್ಲಾ ಕಿವುಡರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾದ್ಯಂತ ಅಂದಾಜು 300 ಕಿವುಡ-ಮೂಕರು ಇದ್ದು, ಹಲವರು ವಿದ್ಯಾವಂತರು ಮತ್ತು ಕುಶಲ ಕರ್ಮಿಗಳು ಆಗಿದ್ದಾರೆ. ಆದರೆ, ಸರಿಯಾದ ಸೌಲಭ್ಯ ಸಿಗದೇ ಕುಟುಂಬದ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ)ನೇ ಕಲಂ ಅಡಿ ನೇಮಕಾತಿಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಅಂಗವಿಕಲರ ಅಧಿನಿಯಮದ ಪ್ರಕಾರ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವವರಿಗೆ ವಿವಿಧ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕು. ಶೇ.75ರಿಂದ 100ರಷ್ಟು ಕಿವುಡ-ಮೂಕರು ಇದ್ದರೂ ನೇಮಕಾತಿ ಆಗುತ್ತಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಶಾಲೆಗಳಲ್ಲಿ ಸನ್ನೆ ಭಾಷೆ ಜಾರಿಗೆ ತರಲಾಗಿದೆ. ಅದರಂತೆ ಈ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲ ದಿವ್ಯಾಂಗವರಿಗೆ ಹೋಬಳಿ, ಗ್ರಾಮ ಮಟ್ಟದಲ್ಲಿ ವಿಆರ್‌ಎಂ, ಡಬ್ಲ್ಯೂಆರ್‌ಎಂ ಆಗಿ ನೇಮಕ ಮಾಡಿಕೊಡಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಇತರ ಇಲಾಖೆಯಲ್ಲೂ ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ದಿವ್ಯಾಂಗದ ಪ್ರಮಾಣ ಅಳೆಯುವ “ಬೇರಾ ಮಷಿನ್’ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಇದೆ. ಬಹಳಷ್ಟು ಜನರು ಮೈಸೂರಿಗೆ ಹೋಗದೆ ನಕಲಿ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದ ಎಲ್ಲ ಜಿಲ್ಲಾದ್ಯಂತ “ಬೇರಾ ಮಷಿನ್’ ಅಳವಡಿಸಿಕೊಳ್ಳಬೇಕು. ವಿವಾಹಿತ ದಂಪತಿಯಲ್ಲಿ ಒಬ್ಬರು ಕೇಳುವ ಮತ್ತು ಮಾತನಾಡುವ ಇದ್ದರೆ ಸರ್ಕಾರದಿಂದ 50 ಸಾವಿರ ರೂ. ನೆರವು ನೀಡಲಾಗುತ್ತದೆ. ಇದೇ ಸೌಲಭ್ಯಯು ಪತಿ-ಪತ್ನಿ ಇಬ್ಬರೂ ಕಿವುಡ-ಮೂಕ ಇದ್ದರೆ ಸಿಗುವುದಿಲ್ಲ. ಇದನ್ನು ಕಿವುಡ-ಮೂಕ ಇರುವ ದಂಪತಿಗೂ ವಿಸ್ತರಿಸಿ, ಧನಸಹಾಯವನ್ನು 50 ಸಾವಿರದಿಂದ ಒಂದು ಲಕ್ಷ ರೂ. ನೀಡಬೇಕೆಂದು ಮನವಿ ಮಾಡಿದರು.
ಪ್ರತಿ ತಿಂಗಳು 1,400ರೂ. ನೀಡುತ್ತಿರುವ ಮಾಸಾಶನದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತಿದೆ. ಹೀಗಾಗಿ ಇದನ್ನು 3 ಸಾವಿರ ರೂ. ಮಾಸಾಶನ ಹೆಚ್ಚಳ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸುರಪೂರ, ಪ್ರಧಾನ ಕಾರ್ಯದರ್ಶಿ ಧನಂಜಯ ಉದನೂರ, ಉಪಾಧ್ಯಕ್ಷ ಶಶಿಕಾಂತ ರಸ್ತಾಪುರ, ಜಂಟಿ ಕಾರ್ಯದರ್ಶಿ ಶರಣಗೌಡ ಬಿರಾದಾರ, ಖಜಾಂಚಿ ಗೋವಿಂದಸ್ವಾಮಿ ಗುತ್ತೇದಾರ, ಸದಸ್ಯರಾದ ಮಹೇಶ ರಸ್ತಾಪುರ, ಅಜೀಜ್ ಅಹ್ಮದ್, ಸಂತೋಷ ಕುಮಾರ, ಶೇಖ್ ಖಲೀಲ್ ಅಹ್ಮದ್, ಆನಂದ ಪಾಟೀಲ, ಶಾಂತಕುಮಾರ ಹೂಗಾರ, ಶಿವಕುಮಾರ ಗುತ್ತೇದಾರ, ಶಫೀಕ್ ಮತ್ತಿತರರು ಪಾಲ್ಗೊಂಡಿದ್ದರು.