ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆಯಿಂದ ಹುಟ್ಟಿಕೊಂಡಿರುವ ಎರಡು ಹೊಸ ವಿಶ್ವವಿದ್ಯಾಲಯಕ್ಕೆ ಅಲ್ಲಿನ ವಿಶೇಷಾಧಿಕಾರಿಗಳನ್ನೇ ಕುಲಪತಿಗಳನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಗೂ ಪೂರ್ವದಲ್ಲೇ ಹೊಸ ವಿಶ್ವವಿದ್ಯಾಲಯದ ಆಡಳಿತ ವೈಖರಿ ಹಾಗೂ ಇತರೆ ಕೆಲಸ ಕಾರ್ಯಗಳನ್ನು ಗಮನಿಸಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಪ್ರೊ.ಎಸ್.ಜಾಫೇಟ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಪ್ರೊ.ಟಿ.ಡಿ.ಕೆಂಪರಾಜು ಅವರನ್ನು ವಿಶೇಷಾಧಿಕಾರಿಗಳನ್ನಾಗಿ ವರ್ಷದ ಹಿಂದೆಯೇ ಸರ್ಕಾರ ನೇಮಿಸಿತ್ತು. ಸದ್ಯ ಅವರನ್ನೇ ಕುಲಪತಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಿಧಾನ ಮಂಡಲ ಉಭಯ ಸದನದ ನಿರ್ಧಾರದಂತೆ ರಾಜ್ಯ ಸರ್ಕಾರ ತಿಂಗಳ ಹಿಂದೆಯಷ್ಟೆ ಬೆಂವಿವಿ ತ್ರಿಭಜನೆಗೆ ಅನುಮೋದನೆ ನೀಡಿತ್ತು. ಅದರಂತೆ ಹೊಸ ವಿಶ್ವವಿದ್ಯಾಲಯದ ಹೆಚ್ಚುವರಿ ಕಾರ್ಯ ನಿರ್ವಹಣೆಯ ಅಗತ್ಯವನ್ನು ಅರಿತ ಸರ್ಕಾರ ಕುಲಪತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಅದರಂತೆ ಬೆಂಗಳೂರು ಕೇಂದ್ರ ವಿವಿಯ ವಿಶೇಷಾಧಿಕಾರಿಯಾಗಿದ್ದ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ನಿರ್ದೇಶಕ ಪ್ರೊ.ಎಸ್.ಜಾಫೇಟ್ ಅವರನ್ನೇ ಕುಲಪತಿಯಾಗಿ ನೇಮಿಸಿದೆ. ಬೆಂಗಳೂರು ಉತ್ತರ ವಿವಿಗೆ ಅಲ್ಲಿಯ ವಿಶೇಷಾಧಿಕಾರಿಯಾಗಿದ್ದ ಹಾಗೂ ಬೆಂವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಡಿ.ಕೆಂಪರಾಜು ಅವರನ್ನೇ ಕುಲಪತಿಯಾಗಿ ನೇಮಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000, ಸೆಕ್ಷನ್ (14), ಸಬ್‌ಸೆಕ್ಷನ್(6)ರಂತೆ ಈ ಎರಡು ಹೊಸ ವಿವಿಗೆ ಮೊದಲ ಕುಲಪತಿಗಳಾಗಿ ನೇಮಕವಾಗಿರುವವರು ಮುಂದಿನ ನಾಲ್ಕು ವರ್ಷಗಳ ಕಾಲ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ಭೌಗೋಳಿಕ ಆಧಾರದಲ್ಲಿ ಮೂರು ವಿಭಾಗ ಮಾಡಿರುವ ರಾಜ್ಯ ಸರ್ಕಾರ, ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಇರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಹೊಸದಾಗಿ ಹುಟ್ಟಿಕೊಂಡಿರುವ ಬೆಂಗಳೂರು ಕೇಂದ್ರ ವಿಶ್ವದ್ಯಾಲಯದ ಆಡಳಿತ ಕಚೇರಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಕೋಲಾರದಲ್ಲಿ ಇರಲಿದೆ.
ಬೆಂವಿವಿ ಕುಲಪತಿ ನೇಮಕವಾಗಿಲ್ಲ: ಬೆಂವಿವಿ ಕುಲಪತಿ ಹುದ್ದೆ ಸದ್ಯ ಖಾಲಿ ಇದೆ. ಡಾ.ಎಂ.ಮುನಿರಾಜು ಅವರು ಹಂಗಾಮಿ ಕುಲಪತಿಯಾಗಿ ವಿವಿಯ ಆಡಳಿತ ನಿರ್ವಹಿಸುತ್ತಿದ್ದಾರೆ. ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ಶಿಫಾರಸ್ಸಿನ ಮೇರೆಗೆ ಇಬ್ಬರ ಹೆಸರನ್ನು ಸರ್ಕಾರ ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ರಾಜ್ಯಪಾಲರು ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ.