ಬೆಂಗಳೂರು: ಸರ್ಕಾರಿ ವೈದ್ಯಾಧಿಕಾರಿಗಳ ವರ್ಗಾವಣೆ ಸಂದರ್ಭದಲ್ಲಿ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಮೂವರು ತಜ್ಞ ವೈದ್ಯರ ಎರಡು ತಂಡ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಒಂದು ತಂಡ ಇರುವುದು ಕಡ್ಡಾಯ.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಕಡ್ಡಾಯವಾಗಿ ಲಭ್ಯವಿರಬೇಕು ಎಂಬ ಕಾರಣಕ್ಕೆ ವರ್ಗಾವಣೆ ಸಂದರ್ಭದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞ ವೈದ್ಯರನ್ನೊಳಗೊಂಡ ಎರಡು ತಂಡಗಳು ಜಿಲ್ಲಾಸ್ಪತ್ರೆಗಳಲ್ಲಿ ಮತ್ತು ಒಂದು ತಂಡ ತಾಲೂಕು ಆಸ್ಪತ್ರೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ರಾಜ್ಯದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಪರ್ವ ಆರಂಭವಾಗಿದ್ದು, ಇದರೊಂದಿಗೆ ಸರ್ಕಾರಿ ವೈದ್ಯಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯ ವರ್ಗಾವಣೆಯೂ ನಡೆಯಲಿದೆ. ಈ ವೇಳೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಲು ಮಾರ್ಗಸೂಚಿಯಲ್ಲಿ ಹಲವು ಸೂಚನೆಗಳನ್ನು ನೀಡಲಾಗಿದೆ. ಅಲ್ಲದೆ, ಜೂನ್ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದೂ ತಿಳಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಲು ಕೂಡ ಸೂಚನೆ ನೀಡಲಾಗಿದೆ. ವೈದ್ಯಕೀಯ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಜ್ಞ ವೈದ್ಯರ ಖಾಲಿ ಹುದ್ದೆಗಳನ್ನು ತುಂಬುವ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ತುಂಬಲು ಆದ್ಯತೆ ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ವರ್ಗಾವಣೆ ಮಿತಿಯನ್ನು ಶೇ. 5ಕ್ಕೆ ಸೀಮಿತಗೊಳಿಸಲು ಕೂಡ ನಿರ್ಧರಿಸಲಾಗಿದೆ. ಹೀಗಾಗಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎಂಬ ನಿಯಮ ಜಾರಿಗೊಳಿಸುವಾಗ ಜೆಷ್ಠತೆ ಪರಿಗಣಿಸಲು ತೀರ್ಮಾನಿಸಲಾಗಿದೆ. 10 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅಥವಾ ಸಿಬ್ಬಂದಿ ವರ್ಗಾವಣೆ ಕಡ್ಡಾಯಗೊಳಿಸಿದರೆ ಮಿತಿ ಶೇ. 5ನ್ನು ಮೀರುತ್ತದೆ. ಮಿತಿ ಹೆಚ್ಚಿಸಬೇಕಾದರೆ ಕಾಯ್ದೆಗೆ ತಿದ್ದುಪಡಿ ತರಬೇಕು. ಈ ಹಿನ್ನೆಲೆಯಲ್ಲಿ 10 ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವವರಲ್ಲೂ ಜೇಷ್ಠತೆ ಆಧಾರದಲ್ಲಿ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.
10 ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವವರಿಗೆ ಮಾಡುವ ವರ್ಗಾವಣೆ ಎ, ಬಿ ಮತ್ತು ಸಿ ವರ್ಗದ ನೌಕರರಿಗೆ ಮಾತ್ರ (ಚಾಲರಕರನ್ನು ಹೊರತುಪಡಿಸಿ) ಅನ್ವಯವಾಗುತ್ತದೆ. 10 ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಡಿ ದರ್ಜೆ ನೌಕರರು ಬಯಸಿದರೆ ಮಾತ್ರ ಅವರಿಗೆ ವರ್ಗಾವಣೆ ನೀಡಬೇಕು ಎಂದು ಹೇಳಲಾಗಿದೆ.
ಉಳಿದಂತೆ ಬೆಂಗಳೂರು ನಗರ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಪರಸ್ಪರ ವರ್ಗಾವಣೆ ಪರಿಗಣಿಸಬೇಕು. ಪತಿ-ಪತ್ನಿ ಪ್ರಕರಣಗಳಲ್ಲಿ ಒಮ್ಮೆ ವರ್ಗಾವಣೆ ಪಡೆದುಕೊಂಡಿದ್ದಲ್ಲಿ ಮೂರು ವರ್ಷದ ನಂತರವೇ ಪರಿಗಣಿಸಬೇಕು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ದಂತ ಕುರ್ಚಿಗಳು ಇದ್ದರೆ ಅಲ್ಲಿ ಕಡ್ಡಾಯವಾಗಿ ದಂತ ವೈದ್ಯರು ಇರುವಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಲಾಗಿದೆ.