ಗಂಗಾವತಿ: ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ನೇತೃತ್ವದಲ್ಲಿ ತಾಲೂಕಿನ ಆನೆಗೊಂದಿ ನವವೃಂದಾವನ ನಡುಗಡ್ಡಿಯಲ್ಲಿ ಶ್ರೀ ರಘುವರ್ಯ ತೀರ್ಥರ ಮಧ್ಯಾರಾಧನೆ ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ನೆರವೇರಿತು.
ಬೆಳಗ್ಗೆ ದಂಡೋದಕ ಸ್ನಾನ ಪೂರೈಸಿ, ಶಿಷ್ಯ ಸಮೂಹಕ್ಕೆ ತಪ್ತ ಮುದ್ರಾಧಾರಣೆ ಅನುಗ್ರಹಿಸಿದರು. ಶ್ರೀಮನ್ಮೂಲಸೀತಾ ಸಮೇತ ಮೂಲರಾಮ-ದಿಗ್ವಿಜಯ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದ ನಂತರ ರಘುವರ್ಯ ತೀರ್ಥರ ಮೂಲ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, ಹಸ್ತೋದಕ ಸಮರ್ಪಣೆ, ಮಹಾ ಮಂಗಳಾರತಿ ನೆರವೇರಿಸಿದರು. ಅನ್ನ ಸಂತರ್ಪಣೆ ನಂತರ ಶಿಷ್ಯ ಸಮೂಹಕ್ಕೆ ಫಲಮಂತ್ರಾಕ್ಷೆ ಅನುಗ್ರಹಿಸಿದರು.
ಭಕ್ತರ ಅನುಕೂಲಕ್ಕಾಗಿ ಹೊಸಪೇಟೆಯಿಂದ ಉಚಿತ ಬಸ್ ವ್ಯವಸ್ಥೆ, ವೆಂಕಟಾಪುರದಿಂದ ಉಚಿತ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ನವವೃಂದಾವನ ನಡುಗಡ್ಡಿಯಲ್ಲಿ ಸ್ಥಾಪಿಸಿದ್ದ ಪ್ರಾಥಮಿಕ ಚಿಕಿತ್ಸಾ ಕೇಂದ್ರದಿಂದ ಆರೋಗ್ಯ ಸಮಸ್ಯೆ ಇರುವ ಭಕ್ತರಿಗೆ ಚಿಕಿತ್ಸೆ ನೀಡಲಾಯಿತು. ಗಂಗಾವತಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಭಾನುಪ್ರಕಾಶ, ಡಾ.ಎಸ್.ಆರ್.ಜೋಶಿ, ಆನೆಗೊಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ದಾದಾಪೀರ್, ಬಾಳಮ್ಮ ಪೊಲೀಸ್‌ಗೌಡರ್, ಖಾಸಗಿ ವೈದ್ಯ ಪ್ರಮೋದ್ ಮೆಡಿಕಲ್ಸ್‌ನ ಪ್ರಹ್ಲಾದ್ ತಿಕೋಟಿಕರ್ ಇತರರು ವೈದ್ಯಕೀಯ ತಂಡದಲ್ಲಿದ್ದರು.