ಅರಸೀಕೆರೆ: ನಗರದ ವಿವಿಧ ಶಿವ ದೇವಾಲಯಗಳಲ್ಲಿ ಮಹಾಶಿವರಾತಿ ಪ್ರಯುಕ್ತ ಶಿವಭಕ್ತರು ಬೆಳಗಿನಿಂದಲೇ ಉಪವಾಸ ವ್ರತ ಆಚರಿಸಿ ಶಿವಪೂಜೆ ಮಾಡಿದ ನಂತರ ರಾತ್ರಿ ಶಿವದೇವಾಲಯಗಳಿಗೆ ತೆರಳಿ ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಾವಿದಿವಿಧಾನಗಳ ಮೂಲಕ ರಾತ್ರಿಯಿಡಿ ಶಿವನಾಮಸ್ಮರಣೆ, ಶಿವಭಜನೆ, ಶಿವಕೀರ್ತನೆಯಲ್ಲಿ ತಲ್ಲೀನರಾಗಿದ್ದರು.
ನಗರದಲ್ಲಿನ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಚಂದ್ರಮೌಳೀಶ್ವರಸ್ವಾಮಿ ದೇವಾಲಯವನ್ನು ಶಿವಾಲಯ ಸಮಿತಿ ಸದಸ್ಯರು ವಿಶೇಷ ಆಸಕ್ತಿಯನ್ನು ವಹಿಸಿ ದೇವಾಲಯದ ಒಳಾಂಗಣ ಮತ್ತು ಹೊರಾಗಂಣವನ್ನು ಬಣ್ಣ,ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದರು.
ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಆಕರ್ಷಕವಾಗಿ ಶೃಂಗರಿಸಲಾಗಿದ್ದ ಶಿವಲಿಂಗದ ದರ್ಶನ ಪಡೆದರು. ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ವಿವಿಧ ಭಜನ ತಂಡಗಳಿಂದ ಎರ್ಪಡಿಸಿದ್ದ ಭಜನೆ ಕಾರ್ಯಕ್ರಮಗಳು ಭಕ್ತರ ಮನ ಸೆಳೆಯಿತು.
ಮೂರು ಕಳಸದ ಮಠದ ಸಿದ್ದರಾಮೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜಾ ಕೈಂಕರ್ಯಗಳು ನೆರವೇರಿದವು. ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಭವಾನಿಶಂಕರ ದೇವಾಲಯ, ಸುಭಾಷ್ ನಗರದಲ್ಲಿರುವ ಕೆಂಗಲ್ ಸಿದ್ದೇಶ್ವರ ಸ್ವಾಮಿ ದೇವಾಲಯ,
ಮಿನಿವಿಧಾನಸೌಧದ ಬಳಿಯಿರುವ ಕೆಂಗಲ್ ಬಸವೇಶ್ವರಸ್ವಾಮಿ ದೇವಾಲಯ, ರುದ್ರಗುಡಿ ಬೀದಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯ, ವೃಷಭೇಂದ್ರ ನಗರದಲ್ಲಿನ ವೀರಭದ್ರ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಕಾರ್ಯವನ್ನು ನೆರವೇರಿಸಿ ದೇವರ ದರ್ಶನವನ್ನು ಪಡೆದು ಪುನೀತರಾದರು.
ಮಲ್ಲೇಶ್ವರ ನಗರದ ಬೆಟ್ಟದ ಮೇಲಿರುವ ಮಳೆಮಲ್ಲೇಶ್ವರಸ್ವಾಮಿ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ಪಂಚಾಮೃತಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗಿನಿಂದಲೇ ಭಕ್ತರು ಸಾಲು ಸಾಲಾಗಿ ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಬೆಳಗ್ಗೆ ಬೆಟ್ಟದ ಮೇಲೆ ರಥೋತ್ಸವ ನಡೆಯಲಿದೆ.