ಗುಂಡ್ಲುಪೇಟೆ: ಮಹಾಶಿವರಾತ್ರಿ ಹಬ್ಬವನ್ನು ಪಟ್ಟಣದ ಹಾಗೂ ತಾಲೂಕಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಪಟ್ಟಣದ ರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು.
ಹಬ್ಬದ ದಿನವಾದ ಮಂಗಳವಾರ ಮುಂಜಾನೆ 5 ರಿಂದ ಲಿಂಗಸ್ವರೂಪಿಯಾದ ಶಿವನಿಗೆ ಬೆಣ್ಣೆಯ ಅಲಂಕಾರ ಮಾಡಲಾಗಿತ್ತು. ಜೊತೆಗೆ ವಿವಿಧ ಪುಷ್ಪಗಳೊಂದಿಗೆ ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.
ಭಕ್ತರಿಗೆ ಗಂಗಾಜಲ ವಿತರಣೆ:ಹಬ್ಬದ ಅಂಗವಾಗಿ ಮುಜರಾಯಿ ಇಲಾಖೆಯಿಂದ ಗಂಗಾಜಲವನ್ನು ದೇವಸ್ಥಾನಕ್ಕೆ ತಲುಪಿಸಲಾಗಿತ್ತು. ಶಿವನ ದರ್ಶನ ಪಡೆದ ಪ್ರತಿ ಭಕ್ತರಿಗೂ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಗಂಗಾಜಲ ವಿತರಣೆ ಮಾಡಿದರು.
ಐದು ಜಾವಗಳು ಏರ್ಪಡಿಸಿದ್ದ ಶಿವರಾತ್ರಿಯ ವಿಶೇಷ ಪೂಜಾ ಕೈಂಕರ್ಯದಲ್ಲಿ ವೆಂಕಟಪತಿ ಜೋಯಿಸ್ ಮತ್ತು ರಂಗನಾಥ ಜೋಯಿಸ್ ಭಾಗವಹಿಸಿದ್ದರು. ಇದರೊಂದಿಗೆ ತಾಲೂಕಿನ ವಿವಿಧ ದೇವಾಲಯಗಳು ಹಾಗೂ ಮಠಮಂದಿರಗಳಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳು ನಡೆದವು.
ದುಂದಾಸನಪುರದ ಮಹದೇಶ್ವರ ದೇವಸ್ಥಾನ, ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಬಾ ಸೋಮೇಶ್ವರ ದೇವಸ್ಥಾನ, ತ್ರಿಯಂಭಕಪುರ ತ್ರಿಯಂಭಕೇಶ್ವರ ದೇವಸ್ಥಾನ ಹಾಗೂ ತೆರಕಣಾಂಬಿಯ ಮೂಲಸ್ಥಾನೇಶ್ವರ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದರೊಂದಿಗೆ ಸ್ವಾಮಿಯ ಕೃಪೆಗೆ ಪಾತ್ರರಾದರು.