ಹನೂರು: ಭಕ್ತಾದಿಗಳ ನಿಷೇಧದ ನಡುವೆಯೂ ಮಲೆ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರಾಮಹೋತ್ಸವದ ಹಾಲರವೆ ಉತ್ಸವ ಮತ್ತುಅಮಾವಾಸ್ಯೆ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನೆರವೇರಿದವು.
ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ, ತ್ರಿಕಾಲ ಅಭಿಷೇಕ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿದವು. ಬಳಿಕ ಮಾದಪ್ಪನಿಗೆ ರುದ್ರಾಭಿಷೇಕ,ವಿಭೂತಿ ಅಭಿಷೇಕ ಮತ್ತು ಬಿಲ್ವಾರ್ಚನೆಸೇರಿದಂತೆ ವಿವಿಧ ಅಭಿಷೇಕಗಳನ್ನು ಬೇಡಗಂಪಣ ಅರ್ಚಕರು ನೆರವೇರಿಸಿದರು.
ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆ ಬೇಡಗಂಪಣ ಸಮುದಾಯದ 108 ಹೆಣ್ಣುಮಕ್ಕಳು ಬೆಳ್ಳಂಬೆಳಗ್ಗೆಯೇ ದಟ್ಟಡವಿಯ ಮಧ್ಯೆ ಸಾಗಿ ಮಲೆ ಮಹದೇಶ್ವರರ ಪರಮ ಶಿಷ್ಯರಾದ ಕಾರಯ್ಯ ಮತ್ತು ಬಿಲ್ಲಯ್ಯ ಮಡುವನ್ನು ತಲುಪಿದ್ದರು. ಬಳಿಕ ಪವಿತ್ರ ಸ್ನಾ ಮಾಡಿ ಹಾಲರುವೆ ಗುಂಬಗಳಿಗೆ ಧೂಪ – ದೀಪಗಳೊಂದಿಗೆ ಮಂಗಳಾರತಿ ಪೂಜೆಗಳನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ನಂತರ ಬೇಡಗಂಪಣ ಅರ್ಚಕರಿಂದ ಕತ್ತಿ ಪವಾಡ ಸೇವೆ ನೆರವೇರಿಸಲಾಯಿತು.
ಬಳಿಕ ಸತ್ತಿಗೆ-ಸುರಪಾನಿ, ತಮಟೆ, ಮಂಗಳ ವಾದ್ಯ ನಂದಿಕಂಬ, ಜಾಗಟೆ ಸಮೇತ ದೇವಾಲಯವನ್ನು ತಲುಪಿ ಮಾಯ್ಕರ ಮಾದಪ್ಪವಿಗೆ ಮಜ್ಜನ ಸೇವೆ ನೆರವೇರಿಸಲಾಯಿತು.
ಭಕ್ತಾದಿಗಳಿಗೆ ನಿಷೇಧ:ಕೋವಿಡ್ ಮಹಾಮಾರಿ ಹಿನ್ನೆಲೆ ಈ ಬಾರಿಯ ದೀಪಾವಳಿ ಜಾತ್ರಾ ಮಹೋ ತ್ಸವಕ್ಕೆ ಶ್ರೀಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶವನ್ನು4 ದಿನಗಳ ಕಾಲ ನಿಷೇಧಿಸಲಾಗಿದೆ. ಪ್ರತಿ ವರ್ಷ ಬಲಿಪಾಡ್ಯಮಿ ದಿನದಂದು ಮಹಾ ರಥೋತ್ಸವ ಜರುಗುತಿತ್ತು. ಈ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ಭಕ್ತಾದಿಗಳ ದಂಡೇ ಹರಿದು ಬರುತಿತ್ತು. ಪ್ರತಿ ಬಾರಿಯೂ ಮಹಾರಥೋತ್ಸವದಲ್ಲಿ 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ಶ್ರೀಕ್ಷೇತ್ರದಲ್ಲಿ ಮಹಾರಥೋತ್ಸವವು ರದ್ದಾಗಿದೆ.