ಕೋಲಾರ: ಬಹು ಉಪಯೋಗಿ ಹಲಸು ಬಯಲು ಸೀಮೆ ರೈತರ ಆದಾಯ ಹೆಚ್ಚಿಸುವಲ್ಲಿ ನವಕಲ್ಪವೃಕ್ಷ ಬೆಳೆಯಾಗಿದೆ ಎಂದು ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಬಿ.ಜಿ.ಪ್ರಕಾಶ್ ಅಭಿಪ್ರಾಯಪಟ್ಟರು. ಕೋಲಾರದ ತೋಟಗಾರಿಕೆ
ಮಹಾವಿದ್ಯಾಲಯದಿಂದ ಹಮ್ಮಿಕೊಂಡ “ಒಣ ಪ್ರದೇಶ ರೈತರ ಆದಾಯ ಹೆಚ್ಚಿಸುವಲ್ಲಿ ಭವಿಷ್ಯದ ನವ-ಕಲ್ಪವೃಕ್ಷ ಹಲಸು’ ಎಂಬ ಅಂತರ್ಜಾಲ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲಸಿನಲ್ಲಿ ಅಗಾಧ ಪೋಷಕಾಂಶಗಳಿದ್ದು, ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಇದರ ಎಲೆ ಮತ್ತು ಬೇರಿನಿಂದ ಹಲವು ಔಷಧಿಗಳನ್ನು ತಯಾರು ಮಾಡುತ್ತಾರೆ ಎಂದು ಹೇಳಿದರು.
ಹಲಸಿಗೆ ಪ್ರಾಮುಖ್ಯತೆ ಹೆಚ್ಚು:ತೋಟಗಾರಿಕೆ ಮಹಾವಿದ್ಯಾಲಯದ ಹಣ್ಣು ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ನಾಗರಾಜ ಮಾತನಾಡಿ, ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ತಿಪಟೂರು ತಾಲೂಕುಗಳು ಕೆಂಪು ತೊಳೆ ಹಲಸಿನ ತಾಣವಾಗಿದೆ ಎಂದರು. ಕರಾವಳಿ ಪ್ರದೇಶಕ್ಕಿಂತ ಒಣಪ್ರದೇಶದ ಹಲಸುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ ಕಾಣಬಹುದಾಗಿದ್ದು, ರೈತರ ಆದಾಯದ ಮೂಲವಾಗಿದೆ ಎಂದರು.
ಸ್ವಾದಿಷ್ಟ ತಿನಿಸುಗಳಲ್ಲಿ ಬಳಕೆ: ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಚಿಕ್ಕಣ್ಣ, ಹಲಸಿನ ತೊಳೆಗಳನ್ನು ಇತ್ತೀಚಿನ ದಿನಗಳಲ್ಲಿ ತರಕಾರಿ ಮಾಂಸವಾಗಿ ಬಳಸಲಾಗುತ್ತಿದ್ದು, ಇದು ತರಕಾರಿ ಕಬಾಬ್, ತರಕಾರಿ ಬಿರಿಯಾನಿ ಮತ್ತಿತರ ಸ್ವಾದಿಷ್ಟ ತಿನಿಸುಗಳಲ್ಲಿ ಹೆಚ್ಚಿನ ಬಳಕೆಯಾಗುತ್ತಿದ್ದು, ಶಾಖಾಹಾರಿಗಳಿಗೆ ಉತ್ತಮ ಆಹಾರವಾಗಿದೆ ಎಂದು ಹೇಳಿದರು.
ಸಂವಾದದಲ್ಲಿ ಕೋಲಾರದ ಪ್ರಗತಿಪರ ರೈತರಾದ ಧರ್ಮಲಿಂಗಂ, ಮಂಗಳೂರಿನ ಬಾಲಕೃಷ್ಣ, ತುಮಕೂರಿನ ಸುರೇಶ ಮತ್ತು ಕೋಲಾರದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿ ಹಲಸು ಬೆಳೆಯ ಕುರಿತು ಚರ್ಚೆಯಲ್ಲಿ ಪಾಲ್ಗೊಂಡರು.