Advertisement
ಜಿಲ್ಲಾ ಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಉಡುಪಿ ಕರಾವಳಿ ಭಾಗದ ಪ್ರಮುಖ ಶ್ರದ್ಧಾಕೇಂದ್ರವೂ ಹೌದು. ಮಾತ್ರವಲ್ಲದೇ ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿ ಭಾಗಗಳನ್ನು ಸಂಪರ್ಕಿಸುವ ಕೊಂಡಿಯಾಗಿಯೂ ಈ ನಗರ ಕಾರ್ಯನಿರ್ವಹಿಸುತ್ತಿದೆ. ನೀವೆಲ್ಲಾ ಗಮನಿಸಿದ್ದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ಸುತ್ತಮುತ್ತಲಿನ ಪರಿಸರದಲ್ಲಿ ಅನಾಥ ರೀತಿಯಲ್ಲಿ ತಿರುಗಾಡುತ್ತ, ಸಿಕ್ಕಸಿಕ್ಕಲ್ಲಿ ಮಲಗಿಕೊಂಡು ದಿನದೂಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಮಾನಸಿಕ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿರುವವರಾದರೆ ಇನ್ನು ಕೆಲವರು ವಯಸ್ಸಾದವರು ಮತ್ತೆ ಕೆಲವರು ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ಕಾರಣದಿಂದ ತಮ್ಮ ಮನೆಮಂದಿಯಿಂದ ನಿರ್ಲಕ್ಷಿಸಲ್ಪಟ್ಟವರು. ಈ ರೀತಿಯ ಮೂವರು ಅನಾಥ ವ್ಯಕ್ತಿಗಳ ಬಾಳಿಗೆ ಆಶಾಕಿರಣವಾದ ಅನ್ಸಾರ್ ಅಹಮ್ಮದ್ ಮತ್ತು ಆಪದ್ಭಾಂಧವ ಆಸೀಫ್ ಎಂಬ ಇಬ್ಬರ ಕುರಿತಾಗಿ ಮತ್ತು ಅವರು ಮಾಡಿರುವ ಸಮಾಜಮುಖಿ ಪ್ರಶಂಸಾರ್ಹ ಕೆಲಸದ ಕುರಿತಾದ ಬರಹ ಇಲ್ಲಿದೆ.
ಇವರಿಬ್ಬರು ಬುಧವಾರದಂದು ಉಡುಪಿ ಪರಿಸರದಲ್ಲಿ ಸಾಗಿಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಅನಾಥರಾಗಿ ಕುಳಿತಿದ್ದ ವೃದ್ಧರೊಬ್ಬರು ಕಾಣಸಿಗುತ್ತಾರೆ. ಇವರ ಬಳಿಗೆ ಹೋದ ಅನ್ಸಾರ್ ಮತ್ತು ಆಸೀಫ್ ಅವರು ನಿಮ್ಮ ಕಥೆಯೇನು ಎಂದು ಕೇಳಿದಾಗ ಅವರ ಹೆಸರು ಮಾತ್ರವೇ ತಿಳಿದುಬಂದು ಉಳಿದ ವಿವರಗಳ್ಯಾವುದೂ ಸಿಗುವುದಿಲ್ಲ. ಬೆಳ್ಮಣ್ ಸಮೀಪದ ಜಾನ್ ಮೆಂಡೋನ್ಸ ಎಂಬ ವ್ಯಕ್ತಿ ಇವರಾಗಿದ್ದು, ತಮ್ಮ ಮನೆ ಮಂದಿಯಿಂದಲೇ ನಿರ್ಲಕ್ಷಿಸಲ್ಪಟ್ಟು ರಸ್ತೆಬದಿಯಲ್ಲೇ ಕಾಲಕಳೆಯುವ ಸ್ಥಿತಿಗೆ ಬಂದಿರುತ್ತಾರೆ. ವಿಚಾರ ತಿಳಿದ ಇವರಿಬ್ಬರು ಅವರನ್ನು ತಮ್ಮ ಆ್ಯಂಬುಲೆನ್ಸ್ ನಲ್ಲಿ ಕುಳ್ಳಿರಿಸಿಕೊಂಡು ಅವರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಆಹಾರ ನೀಡಬೇಕೆಂದು ನಿರ್ಧರಿಸುತ್ತಾರೆ. ಇವರನ್ನು ಮನೆಯವರು ಎಲ್ಲಿಯವರೆಗೆ ನಿರ್ಲಕ್ಷಿಸಿದ್ದರೆಂದರೆ ಇವರ ಮಗಳ ಮದುವೆಗೂ ಇವರಿಗೆ ಆಹ್ವಾನ ಇರಲಿಲ್ಲವಂತೆ! ಹೀಗೆ ಮೆಂಡೋನ್ಸ ಅವರನ್ನು ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದ ಯುವಕನೊಬ್ಬ ಕಾಣಸಿಗುತ್ತಾನೆ. ಗಾಡಿ ನಿಲ್ಲಿಸಿ ‘ಏನಪ್ಪಾ ನಿನ್ನ ಕಥೆ..’ ಎಂದು ಕೇಳಿದಾಗ ಈ ಯುವಕ ಸಾಸ್ತಾನ ಪರಿಸರದ ಶರತ್ ಶೆಟ್ಟಿ ಎಂದು ತಿಳಿದು ಬರುತ್ತದೆ. ಸರಿ, ಅವರನ್ನೂ ಆ್ಯಂಬುಲೆನ್ಸ್ ಗೆ ಹತ್ತಿಸಿ ಮುಂದುವರೆದು ಬರುತ್ತಿರುವಾಗ ಬೀಡಿನಗುಡ್ಡೆ ಪರಿಸರದಲ್ಲಿ ಇನ್ನೋರ್ವ ವ್ಯಕ್ತಿ ಅನಾಥ ಸ್ಥಿತಿಯಲ್ಲಿ ಮಲಗಿರುವುದು ಕಂಡುಬರುತ್ತದೆ. ಇವರು ದಾವಣಗೆರೆಯವರಾಗಿದ್ದು ಇವರ ಹೆಸರು ಶರೀಫ್ ಎಂದು ತಿಳಿಯುತ್ತದೆ. ಇವರು ನಗರ ಸಭೆಯ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಇವರ ಕಾಲಿಗೆ ಗಾಯವಾಗಿದ್ದರಿಂದ ಕೆಲಸ ಮಾಡಲು ಅಸಮರ್ಥರಾಗಿದ್ದರು.
Related Articles
ಹೀಗೆ ಬೇರೆ ಬೇರೆ ಸ್ಥಿತಿಯಲ್ಲಿ ಸಿಕ್ಕಿದ ಈ ಮೂವರನ್ನೂ ಅನ್ಸಾರ್ ಅವರ ಮನೆಗೆ ಕರೆದುಕೊಂಡು ಬಂದು ಅಲ್ಲಿ ಅವರಿಗೆ ಕ್ಷೌರ ಮತ್ತು ಸ್ನಾನ ಮಾಡಿಸಿ ಬಳಿಕ ಸ್ವಚ್ಛ ಬಟ್ಟೆಗಳನ್ನು ನೀಡಿ ಮೂವರಿಗೂ ಊಟ ನೀಡಲಾಯಿತು. ಈ ಸಂದರ್ಭದಲ್ಲಿ ಆ ಮೂವರ ಕಣ್ಣಿನಲ್ಲಿ ಕಂಡ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅನ್ಸಾರ್ ಅವರು.
Advertisement
ಈ ಮೂವರಲ್ಲಿ ಶರತ್ ಶೆಟ್ಟಿಯವರಿಗೆ ಒಂದು ಹೊಟೇಲ್ ನಲ್ಲಿ ಕೆಲಸದ ವ್ಯವಸ್ಥೆಯಾಗಿದ್ದು ಅವರ ಬದುಕಿಗೆ ಒಂದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಇನ್ನು ಜಾನ್ ಮೆಂಡೋನ್ಸಾ ಅವರಿಗೆ ವಯಸ್ಸಾಗಿರುವುದರಿಂದ ಮತ್ತು ಅವರು ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿರುವುದರಿಂದ ಅವರನ್ನು ತಮ್ಮ ಜೊತೆಯಲ್ಲೇ ಇರಿಸಿಕೊಳ್ಳುವ ನಿರ್ಧಾರವನ್ನು ಅನ್ಸಾರ್ ಅವರು ಮಾಡಿದ್ದಾರೆ.
ಅನಾಥವಾಗಿದೆ ‘ನಗರ ವಸತಿ ರಹಿತರಿಗೆ ಆಶ್ರಯ’ ಕೇಂದ್ರ
ಉಡುಪಿ ನಗರಸಭೆಯ ಅಧೀನದಲ್ಲಿರುವ ವಸತಿ ರಹಿತರ ಆಶ್ರಯ ಕೇಂದ್ರ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ. ಸುಸಜ್ಜಿತವಾದ ಕಟ್ಟಡದಲ್ಲಿ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳಿದ್ದರೂ ಫಲಾನುಭವಿಗಳಿಗೆ ಇದರ ಸೌಲಭ್ಯ ದೊರೆಯುತ್ತಿಲ್ಲ ಎಂಬ ಅಭಿಪ್ರಾಯ ಇಲ್ಲಿಗೆ ಭೇಟಿ ಕೊಟ್ಟು ಪರಿಶೀಲಿಸಿದ ಅನ್ಸಾರ್ ಅವರದ್ದಾಗಿದೆ. ಮುಂಬರುವ ದಿನಗಳಲ್ಲಿ ನಗರದಲ್ಲಿ ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ಇಲ್ಲಿಗೆ ಕರೆತಂದು ಬಿಡುವ ಯೋಚನೆ ಇದೆ ಎಂದವರು ತಿಳಿಸಿದ್ದಾರೆ ಮತ್ತು ತಮ್ಮ ಸ್ವಂತ ಖರ್ಚಿನಲ್ಲಿಯೇ ಇವರಿಗೆ ಆಹಾರ ಒದಗಿಸುವ ಪ್ರಸ್ತಾಪವನ್ನೂ ಅನ್ಸಾರ್ ಮುಂದಿಡುತ್ತಾರೆ.
ವಿವಿಧ ಕಾರಣಗಳಿಂದ ಕುಟುಂಬ ಸದಸ್ಯರಿಂದ ದೂರವಾಗಿ ಮನೆ ಮಠವನ್ನು ತೊರೆದು ಬೀದಿಪಾಲಾಗಿರುವ ನೊಂದ ಜೀವಗಳಿಗೆ ಆಸರೆಯಾಗುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಬೇಕು ಮತ್ತು ಈ ಮೂಲಕವಾದರೂ ಸ್ಥಳೀಯಾಡಳಿತ ಹಾಗೂ ಸರಕಾರ ಇಂತವರ ಪುನರ್ವಸತಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂಬ ಆಶಯವನ್ನು ಅನ್ಸಾರ್ ಅಹಮ್ಮದ್ ಮತ್ತು ಆಸೀಫ್ ನಮ್ಮ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ. ಮತ್ತು ತಾನು ಮತ್ತು ಗೆಳೆಯ ಮಾಡಿದ ಈ ಕಾರ್ಯವನ್ನು ನಿಜವಾದ ‘ಸ್ವಚ್ಛ ಭಾರತ’ ಎಂದವರು ಬಣ್ಣಿಸುತ್ತಾರೆ. ಅದೇನೇ ಇದ್ದರೂ, ನಿಮ್ಮ ಈ ಮಾನವೀಯ ಕಾರ್ಯಕ್ಕೆ ನಿಮಗೆ ಅಭಿನಂದನೆಗಳು.
‘ಜಾನ್ ಮೆಂಡೋನ್ಸರವರನ್ನು ಅವರು ಬಯಸಿದಷ್ಟು ಕಾಲ ನಮ್ಮೊಂದಿಗೆ ಇರಿಸಿಕೊಳ್ಳಲು ನಾವು ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಒಂದು ರೀತಿಯಲ್ಲಿ ದತ್ತು ತೆಗೆದುಕೊಂಡ ರೀತಿಯಲ್ಲೇ.ಈಗಲೂ ಅವರು ನಮ್ಮೊಂದಿಗೆ ಇದ್ದಾರೆ…’
– ಅನ್ಸಾರ್ ಅಹಮ್ಮದ್