Advertisement

ಅಕ್ರಮ ಮರಳು ತಡೆಗೆ ವಿಶೇಷ ನಿಗಾ: ಮೋನಾ ರೋತ್‌

09:54 AM Dec 31, 2021 | Team Udayavani |

ಅಫಜಲಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಚೆಕ್‌ ಪೋಸ್ಟ್‌ಗಳನ್ನು ಬಿಗಿಗೊಳಿಸುವುದರ ಜತೆಗೆ ವಿಶೇಷ ನಿಗಾವಹಿಸಲು ತಾಲೂಕು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಮೋನಾ ರೋತ್‌ ತಿಳಿಸಿದರು.

Advertisement

ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಮರಳು ಸಂಪತ್ತು ಅಕ್ರಮವಾಗಿ ಸಾಗಾಟವಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಮರಳು ನಿಯಮ ಬಾಹಿರ ಸಾಗಾಟ ನಡೆಯಬಾರದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸಬೇಕಾದ ರಾಜಧನ ಹಾಗೂ ಮತ್ತಿತರ ತೆರಿಗೆ ಹಣ ಸಮರ್ಪಕವಾಗಿ ಪಾವತಿ ಆಗುತ್ತಿಲ್ಲ. ಎಲ್ಲ ಅಧಿಕಾರಿಗಳು ಕೈ ಜೋಡಿಸಿದಾಗ ಮಾತ್ರ ಸರ್ಕಾರದ ಬೊಕ್ಕಸಕ್ಕೆ ರಾಜಧನ ಸಂದಾಯವಾಗುತ್ತದೆ ಎಂದರು.

ಈಗಾಗಲೇ ತಾಲೂಕಿನ ಭೀಮಾನದಿ ಪಾತ್ರದಲ್ಲಿರುವ ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಇಟ್ಟಿರುವುದು ಕಾನೂನು ಬಾಹಿರವಾಗಿದೆ. ಅದನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು. ಅಲ್ಲದೇ ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮರಳನ್ನು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧ ಪಟ್ಟ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಈಗಾಗಲೇ ನದಿ ಪಾತ್ರದ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮರಳನ್ನು ಜಮೀನಿನ ಸರ್ವೇ ನಂಬರ್‌ ಮಾಹಿತಿ ಪಡೆದು ಪಹಣಿ ಪತ್ರದಲ್ಲಿ ಅಕ್ರಮ ಮರಳು ಸಂಗ್ರಹಿಸಲಾಗಿದೆ ಎಂದು ನಮೂದಿಸಬೇಕು. ಒಂದು ವೇಳೆ ಲೆಕ್ಕಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ತಹಶೀಲ್ದಾರ್‌ ನಾಗಮ್ಮ ಎಂ.ಕೆ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಚಾಚು ತಪ್ಪದೆ ನಿರ್ವಹಿಸಿ ನಿಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ನಿಮಗೆ ಏನಾದರು ಅಕ್ರಮ ಮರಳು ದಂಧೆಕೊರರು ತೊಂದರೆ ಮಾಡಿದರೆ ನಮ್ಮ ಗಮನಕ್ಕೆ ತನ್ನಿ. ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಒಂದೇ ಇಲಾಖೆಯಿಂದ ಅಕ್ರಮ ಮರಳು ದಂಧೆ ತಡೆಗಟ್ಟಲು ಸಾಧ್ಯವಿಲ್ಲ. ಎಲ್ಲ ಇಲಾಖೆಗಳು ಹಾಗೂ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಅಕ್ರಮ ಮರಳು ತಡೆಗಟ್ಟಲು ಸಾಧ್ಯ.ಹೀಗಾಗಿ ಪೊಲೀಸ್‌ ಇಲಾಖೆ ,ಲೋಕಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಜವಾಬ್ದಾರಿ ಆಗಿದೆ ಎಂದರು.

ಸಿಪಿಐ ಜಗದೇವಪ್ಪ ಪಾಳಾ ಮಾತನಾಡಿ, ತಾಲೂಕಿನಲ್ಲಿ ಯಾವುದೇ ರೀತಿ ಅಕ್ರಮ ಮರಳು ಸಾಗಾಣಿಕೆ ನಡೆಯದಂತೆ ಎಚ್ಚರ ವಹಿಸಲಾಗುವುದು. ಒಂದು ವೇಳೆ ಅಕ್ರಮ ಮರಳು ಸಾಗಣಿಕೆ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಇಒ ರಮೇಶ ಸುಲ್ಪಿ, ಲೋಕೋ ಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ಧರಾಮ ಅಜಗೊಂಡ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ ಗುರಿಕಾರ, ಅಫಜಲಪುರ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ, ದೇವಲ ಗಾಣಗಾಪುರ ಪಿಎಸ್‌ಐ ರಾಜಶೇಖರ ರಾಠೊಡ, ರೇವೂರ ಪಿಎಸ್‌ಐ ಅಶೋಕ ಪಾಟೀಲ, ಕಂದಾಯ ನಿರೀಕ್ಷಕರು, ಕಂದಾಯ ಇಲಾಖೆ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next