Advertisement

Voter Registration Campaign: ಮತದಾರರ ವಿಶೇಷ ನೋಂದಣಿ ಅಭಿಯಾನ

11:38 AM Oct 31, 2023 | Team Udayavani |

ಮಂಗಳೂರು: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಮ್ಮಿಕೊಳ್ಳಲಾಗಿದೆ. ನ. 18, 19, ಮತ್ತು ಡಿ. 2, 3ರಂದು ಮತದಾರರ ವಿಶೇಷ ನೋಂದಣಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕರಡು ಪಟ್ಟಿಯಂತೆ ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 17,85,835 ಮತದಾರರಿದ್ದಾರೆ. ಮಹಿಳಾ ಮತದಾರರ ಅನುಪಾತವು 1000:1045 ಆಗಿದ್ದು, ಇದು ರಾಜ್ಯದ ಇತರ ಎಲ್ಲ ಜಿಲ್ಲೆಗಳಿಗಿಂತ ಅಧಿಕವಾಗಿದೆ. ಜಿಲ್ಲೆಯಲ್ಲಿ 8,73,389 ಪುರುಷರು 9,12,369 ಮಹಿಳಾ ಮತದಾರರು ಹಾಗೂ 77 ಲೈಂಗಿಕ ಅಲ್ಪಸಂಖ್ಯಾಕ ಮತದಾರರಿದ್ದಾರೆ ಎಂದರು.

ಕಳೆದ ಬಾರಿಯಿಂದ ಚುನಾವಣ ಆಯೋಗವು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೆ ನಾಲ್ಕು ಅರ್ಹತಾ ದಿನಗಳನ್ನು ಗುರುತಿಸಿದ್ದು, ಅದರಂತೆ ಜನವರಿ, ಎಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ 1ನೇ ತಾರೀಕಿಗೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ಕರಡು ಮತದಾರರ ಪಟ್ಟಿಗಳನ್ನು ಎಲ್ಲ ಮತಗಟ್ಟೆ, ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಸೇರ್ಪಡೆಗೆ, ಮೃತರಾದವರ ಹೆಸರು ತೆಗೆದು ಹಾಕಲು ಹಾಗೂ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್‌ 9ರ ವರೆಗೆ ಅವಕಾಶವಿರಲಿದೆ. ಪಟ್ಟಿ ಪರಿಶೀಲನೆಗೆ ದ.ಕ. ಜಿಲ್ಲೆಗೆ ಐಎಎಸ್‌ ಅಧಿಕಾರಿ ಡಾ| ಮಮತಾ ಬಿ.ಆರ್‌. ಅವರನ್ನು ಪರಿಶೀಲನಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು.

ಜ. 5ರಂದು ಅಂತಿಮ ಪಟ್ಟಿ

Advertisement

ಡಿ. 26ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆದು 2024ರ ಜನವರಿ 5ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

18 ವರ್ಷ ಪೂರೈಸಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ನಮೂನೆ 6, ಅನಿವಾಸಿ ಭಾರತೀಯರು ಹೆಸರು ಸೇರ್ಪಡೆಗೆ ನಮೂನೆ 6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7, ದೋಷ ಸರಿಪಡಿಸಲು ನಮೂನೆ 8, ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಅಥವಾ ಇತರ ನಿಗದಿತ ದಾಖಲೆ ಜೋಡಣೆಗೆ ನಮೂನೆ 6ಬಿಯಲ್ಲಿ ಅರ್ಜಿ ಸಲ್ಲಿಸಬಹುದು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 1,17,936 ಪುರುಷರು ಹಾಗೂ 1,28,681 ಮಹಿಳಾ ಮತದಾರರಿದ್ದು, ಇಲ್ಲಿ ಮಹಿಳಾ ಮತದಾರರ ಅನುಪಾತ 1000: 1091 ಇದೆ. ಬೆಳ್ತಂಗಡಿಯಲ್ಲಿ ಮಹಿಳಾ ಅನುಪಾತ 1,011, ಮೂಡುಬಿದಿರೆಯಲ್ಲಿ 1,069, ಮಂಗಳೂರು ನಗರ ಉತ್ತರದಲ್ಲಿ 1,061, ಮಂಗಳೂರು 1,036, ಬಂಟ್ವಾಳ 1,033, ಪುತ್ತೂರು 1,028 ಹಾಗೂ ಸುಳ್ಯದಲ್ಲಿ ಮಹಿಳಾ ಮತದಾರರ ಅನುಪಾತ 1,022 ಇದೆ.

ಹೆಚ್ಚಿನ ಮಾಹಿತಿಗಾಗಿ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಮತಗಟ್ಟೆ ಅಧಿಕಾರಿ ಅಥವಾ ವೆಬ್‌ ಪೋರ್ಟಲ್‌ ceokarnataka. kar.nic.in, https://voters.eci. gov.in ವೀಕ್ಷಿಸಬಹುದು. ವೋಟರ್ ಹೆಲ್ಪ್‌ ಲೈನ್‌ ಆ್ಯಪ್‌ನ ನೆರವನ್ನೂ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next