ಮುಂಬೈ: ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಆಟಗಾರರನ್ನು ಹೊತ್ತ ವಿಮಾನ ಮುಂಬೈಗೆ ಬಂದಿಳಿದಿದೆ. ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಟೀಂ ಇಂಡಿಯಾ ಸದಸ್ಯರು ಬಳಿಕ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಮುಂಬೈನಲ್ಲಿ ತೆರೆದ ಬಸ್ ನಲ್ಲಿ ಆಟಗಾರರು ಭಾಗಿಯಾಗಲಿದ್ದಾರೆ.
ಇದೇ ವೇಳೆ ವಿಮಾನ ಯಾನ ಸಂಸ್ಥೆ ವಿಸ್ತಾರ ಏರ್ ಲೈನ್ಸ್ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಿದೆ. ಭಾರತ ತಂಡವು ದೆಹಲಿಯಿಂದ ವಿಸ್ತಾರ ವಿಮಾನದ ಮೂಲಕ ಮುಂಬೈಗೆ ಪ್ರಯಾಣಿಸಿದೆ.
ಆದರೆ ವಿಮಾನಯಾನ ಸಂಸ್ಥೆಯು ತನ್ನ ವಿಮಾನದ ಕಾಲ್ ಸೈನ್ ಮೂಲಕ ದಿಗ್ಗಜ ಆಟಗಾರರಿಗೆ ಗೌರವ ನೀಡಿದೆ. ಟೀಂ ಇಂಡಿಯಾ ಆಟಗಾರರು ಹೊಸದಿಲ್ಲಿಯಿಂದ ಮುಂಬೈಗೆ ಪ್ರಯಾಣಿಸಿದ ವಿಮಾನ UK 1845. ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೆರ್ಸಿ ಸಂಖ್ಯೆಗಳು.
ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ 18 ಆಗಿದ್ದರೆ, ರೋಹಿತ್ ಶರ್ಮಾ ಅವರ ಜೆರ್ಸಿ ಸಂಖ್ಯೆ 45. ಇದನ್ನು ಜೋಡಿಸಿ ವಿಮಾನಯಾನ ಸಂಸ್ಥೆಯು ಟೀಂ ಇಂಡಿಯಾದ ದಿಗ್ಗಜರಿಗೆ ಟ್ರಿಬ್ಯುಟ್ ನೀಡಿದೆ.
ವಿಮಾನವು ದೆಹಲಿಯಿಂದ ಮಧ್ಯಾಹ್ನ 2:55 ಕ್ಕೆ ಟೇಕಾಫ್ ಆಗಿದ್ದು, ಸಂಜೆ 5:25 ಕ್ಕೆ ಮುಂಬೈಯಲ್ಲಿ ಇಳಿದಿದೆ. ವಿಸ್ತಾರಾ ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಇಳಿದಿದೆ.
ಟೀಂ ಇಂಡಿಯಾ ಆಟಗಾರರು, ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಅವರು ಇಂದು ಮಧ್ಯಾಹ್ನ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ನರೇಂದ್ರ ಮೋದಿ ಅವರಿಗೆ ಟೀಂ ಇಂಡಿಯಾ ಜೆರ್ಸಿಯನ್ನು ಕಾಣಿಕೆಯಾಗಿ ನೀಡಲಾಯಿತು.
ಮುಂಬೈಗೆ ಬಂದಿಳಿದ ಆಟಗಾರರು ತೆರೆದ ಬಸ್ ನಲ್ಲಿ ಮರೀನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ಬಳಿ ವಿಜಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲಿದೆ.